ಎಂಇಎಸ್ ನಾಡದ್ರೋಹ: ಕರವೇ ಪ್ರತಿಭಟನೆ
ಹಾಸನ: ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಸಂಘಟನೆಯ ನಾಡದ್ರೋಹ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ಎಂಇಎಸ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ನಗರದ ಎನ್.ಆರ್.ವೃತ್ತದಲ್ಲಿ ಪ್ರತಿಕೃತಿ ದಹಿಸಿ ಸಂಘಟನೆಯ ವಿರುದ್ಧ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಇತ್ತೀಚೆಗೆ ಮಹಾರಾಷ್ಟ್ರ ಏಕೀಕರಣ ಸಮಿತಿ ಸಂಘಟನೆಯು ನಾಡದ್ರೋಹದ ದುಷ್ಕೃತ್ಯ ಎಸಗಿದೆ. ಶಾಂತಿಯುತವಾಗಿರುವ ಬೆಳಗಾವಿ ನಗರದ ನೆಹರು ಚೌಕ್ ಹೆಸರನ್ನು ಸಂಯುಕ್ತ ಮಹಾರಾಷ್ಟ್ರ ಚೌಕ್ ಎಂದು ನಾಮಕರಣ ಮಾಡಿದ್ದು, ಇದು ಕನ್ನಡಿಗರನ್ನು ಕೆರಳಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ನಾಡಿನ ಜಲ-ನೆಲ ಪರವಾಗಿ ಕರವೇ ಉಗ್ರ ಹೋರಾಟ ಮಾಡುತ್ತಿದ್ದು, ಇನ್ನು ಮುಂದೆ ಏಕೀಕರಣ ಸಮಿತಿಯು ಇದೇ ರೀತಿ ತನ್ನ ಕುಚೋದ್ಯ ಮುಂದುವರೆಸಿದರೆ ಉಗ್ರ ಹೋರಾಟ ಮಾಡಲಾಗುತ್ತದೆ. ಬೆಳಗಾವಿ ಜಿಲ್ಲಾಡಳಿತ ಎಂಇಎಸ್ ದಬ್ಬಾಳಿಕೆಯನ್ನು ತಡೆಯಲು ಅಸಮರ್ಥವಾದರೆ ನಾಡಿನ ಕೆಚ್ಚೆದೆಯ ಹೋರಾಟಗಾರರು ಬೆಳೆಗಾವಿಗೆ ತೆರಳಿ ಎಂಇಎಸ್ ದಬ್ಬಾಳಿಕೆ ತಡೆಗಟ್ಟಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ನೆಹರು ಜೌಕ್ ಎಂಬ ಹೆಸರನ್ನು ತೆಗೆದುಹಾಕಿ ಸಂಯುಕ್ತ ಮಹಾರಾಷ್ಟ್ರ ಚೌಕ್ ಎಂದು ಹೆಸರಿದ್ದಾರೆ. ಇದನ್ನು ತೆರವುಗೊಳಿಸಲು ಹೋದ ಕನ್ನಡಿಗ ಪೇದೆಯ ಮೇಲೆ ಹಲ್ಲೆ ಮಾಡಿರುವ ಎಂಇಎಸ್ ದಬ್ಬಾಳಿಕೆ ಖಂಡನೀಯ. ಈ ಹಿಂದೆ ಹಲವಾರು ಬಾರಿ ಈ ಸಂಘಟನೆಯು ಕನ್ನಡಿಗರೆ ಸಾಕಷ್ಟು ತೊಂದರೆಗಳನ್ನು ನೀಡುತ್ತಿದ್ದಾವೆ. ಸಂಘಟನೆಯನ್ನು ನಿಷೇಧಿಸುವಂತೆ ಆಗ್ರಹಿಸಿದ್ದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಕೂಡಲೇ ಈ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಕರವೇ ಜಿಲ್ಲಾಧ್ಯಕ್ಷ ಮನುಕುಮಾರ್, ತುಳಸಿದಾಸ್ ಬಳಘಟ್ಟ ಲೋಕೇಶ್, ಜಿಲ್ಲಾ ಸಂಚಾಲಕ ವಸಂತ್‌ಕುಮಾರ್, ನಗರಾಧ್ಯಕ್ಷ ಶಿವುಕುಮಾರ್, ಹೇಮಂತ್‌ಕುಮಾರ್ ಇದ್ದರು.