'ಕಲಿಕೆ, ಭೌತಿಕ ವಿಕಸನಕ್ಕೆ ಕ್ರೀಡೆಗಳು ಅವಶ್ಯಕ'
ಕ.ಪ್ರ.ವಾರ್ತೆ , ಆಲೂರು , ನ. 15
ವಿದ್ಯಾರ್ಥಿಗಳ ಕಲಿಕಾ ಹಾಗೂ ಭೌತಿಕ ವಿಕಸನಕ್ಕೆ ಕ್ರೀಡೆಗಳು ಅತ್ಯವಶ್ಯಕ ಎಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ತಿಳಿಸಿದರು. ತಾಲೂಕಿನ ಹೊಸೂರು ಗ್ರಾಮದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ರಾಜ್ಯ ಸರ್ಕಾರಿ ಜಾರಿಗೆ ತಂದಿರುವ ನರೇಗಾ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಆಟದ ಮೈದಾನ ನಿರ್ಮಾಣಕ್ಕೆ ಗುರುವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ದೇಶದ ಪ್ರಥಮ ಪ್ರಧಾನಿ ನೆಹರೂ ಹುಟ್ಟುಹಬ್ಬದ ದಿನವಾದ ಇಂದು ಈ ಕಾರ್ಯಕ್ಕೆ ಚಾಲನೆ ನೀಡುತ್ತಿರುವುದು ಸಂತಸ ತಂದಿದೆ ಎಂದರು.
ಗ್ರಾಮೀಣ ಭಾಗದಲ್ಲಿ ಕ್ರೀಡಾ ಚಟುವಟಿಕೆಗಳು ಸೂಕ್ತ ಮೂಲಭೂತ ಸೌಕರ್ಯಗಳಿಲ್ಲದೆ ನಶಿಸಿ ಹೋಗುತ್ತಿದ್ದು, ಉದ್ಯೋಗ ಖಾತರಿ ಯೋಜನೆಯಲ್ಲಿ ಆಟದ ಮೈದಾನಗಳನ್ನು ನಿರ್ಮಾಣ ಮಾಡಿಕೊಳ್ಳಬಹುದು. ಕಳೆದ ಗಾಂಧಿ ಜಯಂತಿಯಂದು ಕೆರೆಗಳ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಇಂದು ಗ್ರಾಮದಲ್ಲಿ ಸೂಕ್ತ ಆಟದ ಮೈದಾನ ನಿರ್ಮಿಸಲು ಮೊದಲ ಹೆಜ್ಜೆ ಹಿಡಲಾಗಿದೆ.
ಉದ್ಯೋಗ ಖಾತರಿ ಯೋಜನೆಯಲ್ಲಿ ಗ್ರಾಮೀಣ ಭಾಗದ ಜನರ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಅವಕಾಶವಿದ್ದು, ಗ್ರಾಮಸ್ಥರೆಲ್ಲ ಒಗ್ಗೂಡಿ ತಮ್ಮ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿ ಶ್ರಮಿಸಬೇಕು ಎಂದ ಅವರು, ಈಗ ಸ್ಮಶಾನ ಅಭಿವೃದ್ಧಿ, ಸಾಮೂಹಿಕ ಕೃಷಿ ಕಣ ಸೇರಿದಂತೆ ಇನ್ನು ಹಲವಾರು ಯೋಜನೆಗಳನ್ನು ಉದ್ಯೋಗ ಖಾತ್ರಿಯಲ್ಲಿ ಮಾಡಿಕೊಳ್ಳಬಹುದಾಗಿದೆ. ರಾಜ್ಯ ಸರ್ಕಾರದವರು ನಮ್ಮ ಗ್ರಾಮ ನಮ್ಮ ರಸ್ತೆ, ಸುವರ್ಣ ಗ್ರಾಮ ಯೋಜನೆಗಳನ್ನು ಕೈಬಿಟ್ಟಿರುವುದು ದುರಂತವೇ ಸರಿ. ಇದರಿಂದ ಗ್ರಾಮೀಣಾಭಿವೃದ್ಧಿಗೆ ಹಿನ್ನೆಡೆಯಾಗುತ್ತದೆ. ಪಕ್ಷ ಬೇಧ ಪರೆದು ಈ ಸರ್ಕಾರ ಈ ಎಲ್ಲಾ ಯೋಜನೆಗಳನ್ನು ಮತ್ತೆ ಜಾರಿಗೆ ತರಬೇಕು ಎಂದು ಒತ್ತಾಯಿಸುತ್ತೇನೆ ಎಂದರು. ಈ ಆಟದ ಮೈದಾನಗಳು ನಿರ್ಮಾಣವಾದರೆ ಕೇವಲವಿದ್ಯಾರ್ಥಿಗಳಿಗಷ್ಟೇ ಅಲ್ಲ ಗ್ರಾಮೀಣ ಭಾಗದ ಜನತೆ ಸಹ ಇದರ ಸದುಪಯೋಗ ಪಡೆದುಕೊಳ್ಳಬಹುದು.
ಜಿಪಂ ಸದಸ್ಯ ಪುರುಷೋತ್ತಮ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದರೂ ಕೆಲವು ಪೋಷಕರು ದೊಡ್ಡಸ್ಥಿಕೆ ತೋರಿಸಿಕೊಳ್ಳಲು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದು, ಇದರಿಂದಾಗಿ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಶಾಲೆಗಳಿಗೆ ಆಟದ ಮೈದಾನವಿದ್ದರೆ ಗ್ರಾಮಕ್ಕೆ ಮುಖುಟಪ್ರಾಯ ಇದ್ದಂತೆ.ಅದ್ದರಿಂದ ಪೋಷಕರು ಈ ಆಟದ ನಿರ್ಮಾಣದ ಕಾರ್ಯವನ್ನು ತಮ್ಮ ಕೆಲಸವೆಂದು ಭಾವಿಸಬೇಕು ಎಂದು ಹೇಳಿದರು.
ತಾಪಂ ಅಧ್ಯಕ್ಷ ಯಶೋಧ ಹರೀಶ್ ಮಾತನಾಡಿ, ಶಾಲೆಗಳ ಬಳಿ ಆಟದ ಮೈದಾನ ನಿರ್ಮಾಣಕ್ಕೆ ಸರ್ಕಾರ ನಿಗದಿಪಡಿಸಿರುವ ಮೊತ್ತ ಅತ್ಯಲ್ಪವಾಗಿದ್ದು, ಉದ್ಯೋಗ ಖಾತರಿ ಯೋಜನೆಯಲ್ಲಿ ಉತ್ತಮ ಗುಣಮಟ್ಟದ ಕ್ರೀಡಾಂಗಣಕ್ಕೆ ಎಷ್ಟು ಹಣಬೇಕು, ಅಷ್ಟನ್ನು ಉಪಯೋಗಿಸಲು ಅನುಮತಿ ನೀಡಬೇಕು. ಆಗ ಮಾತ್ರ ಈ ಯೋಜನೆ ಯಶಸ್ವಿಯಾಗುತ್ತದೆ ಎಂದ ಅವರು, ಸರ್ಕಾರಿ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಗ್ರಾಮೀಣ ಪ್ರದೇಶದ ಜನರು ಅಭಿವೃದ್ಧಿಯತ್ತ ಸಾಗಬೇಕು ಎಂದರು.
ಬೈರಾಪುರ ಗ್ರಾಪಂ ಅಧ್ಯಕ್ಷೆ ಭಾಗ್ಯ ಅಧ್ಯಕ್ಷತೆ ವಹಿಸಿದ್ದರು. ಯೋಜನಾ ನಿರ್ದೇಶಕ ಸಿದ್ದರಾಜು, ತಾಪಂ ಇಓ ಚಂದ್ರಶೇಖರ್, ಬಿಇಓ ಪುಷ್ವಲತಾ, ಗ್ರಾಪಂ ಸದಸ್ಯರಾದ ಮೀನಾಕ್ಷಿ ಅಶೋಕ್, ಚಂದ್ರೇಗೌಡ, ಎಇಇ ಶಿವಕುಮಾರ್, ತಾ ನೌಕರರ ಸಂಘದ ಅಧ್ಯಕ್ಷ ವರದರಾಜು, ತಾ ದೈಹಿಕ ಶಿಕ್ಷಣಾಧಿಕಾರಿ ನಾಗರಾಜಜ್ಹಾಗೂ ಇತರರು ಇದ್ದರು. ರಾಮಯ್ಯ ನಿರೂಪಿಸಿದರು, ಧರ್ಮಶೆಟ್ಟಿ ಸ್ವಾಗತಿಸಿದರು. ಅಶೋಕ್ ವಂದಿಸಿದರು.