ಕಾಡಾನೆಗಳ ದಾಳಿ: ಲಕ್ಷಾಂತರ ರು. ಬೆಳೆ ನಾಶ
ಆಲೂರು: ತಾಲೂಕಿನ ಕುಂದೂರು ಹೋಬಳಿ ಮಾದಿಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ದಾಳಿಯಿಂದ ಲಕ್ಷಾಂತರ ರು. ಮೌಲ್ಯದ ಬೆಳೆ ನಾಶವಾಗಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
ಗ್ರಾಮದ ರಂಗಸ್ವಾಮಿ ಎಂಬುವರು 1ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬತ್ತದ ಬೆಳೆಯನ್ನು ಸಂಪೂರ್ಣ ನಾಶಗೊಳಿಸಿರುವ ಕಾಡಾನೆಗಳು, ನಂತರ ತೋಟಕ್ಕೆ ನುಗ್ಗಿ ಕಾಫಿ, ಬಾಳೆ, ಅಡಿಕೆ, ಮೆಣಸು, ಮುಂತಾದ ಬೆಳೆಗಳನ್ನು ನಾಶಗೊಳಿಸಿವೆ. ಪಕ್ಕದಲ್ಲೇ ಕೆರೆ ಇರುವ ಕಾರಣ ಕೆರೆಯಲ್ಲೇ ರಾತ್ರಿ ಬೀಡು ಬಿಡುವ ಈ ಆನೆಗಳು ಸರಿರಾತ್ರಿಯಲ್ಲಿ ತೋಟಗಳಿಗೆ ನುಗ್ಗಿ ಬೆಳೆ ನಾಶಪಡಿಸುವುದಲ್ಲದೆ, ಇದರ ಜತೆ ಇರುವ ಮರಿಯಾನೆಗಳು ಕಿನ್ನಾಟದಿಂದಾಗಿ ಬತ್ತದ ಬೆಳೆ ನಾಶಗೊಳ್ಳುತ್ತಿದೆ. ತೋಟಗಳಲ್ಲಿ ಇವುಗಳು ನಡೆದಾಡಿದರೂ ಸಹ ಕಾಫಿ, ಅಡಿಕೆ ಬೆಳೆಯನ್ನು ಬುಡ ಸಮೇತ ಕಿತ್ತು ಹಾಕುತ್ತಿವೆ. ಇದರಿಂದ ರಂಗಸ್ವಾಮಿ ಅವರಿಗೆ ಸೇರಿದ 1 ಲಕ್ಷಕ್ಕೂ ಹೆಚ್ಚು ಮೌಲ್ಯದ ಬೆಳೆ ನಾಶವಾಗಿವೆ.
ಈ ಸಂಬಂಧ ತಾಲೂಕು ಕರ್ನಾಟಕ ಸಮರ ಸೇನೆ ಅಧ್ಯಕ್ಷ ರತೀಶ್‌ಗೌಡ ಮಾತನಾಡಿ, ಅರಣ್ಯ ಸಚಿವರು ಈ ಸ್ಥಳಕ್ಕೆ ಭೇಟಿ ನೀಡಿ ಎಲ್ಲ ಆನೆಗಳನ್ನು ಹಿಡಿಯುವ ಭರವಸೆ ನೀಡಿದ್ದು, ಆನೆಗಳನ್ನು ಹಿ ಹಿಡಿಯುವ ಕಾರ್ಯ ತಡವಾಗುತ್ತಿರುವುದರಿಂದ ಬೆಳೆ ನಾಶ ಹೊಂದಿ ರೈತರು ಪಡಿಪಾಟಲುಪಡುವಂತಾಗಿದೆ. ಹೈಕೋರ್ಟ್ ಆನೆ ಹಿಡಿಯಲು ಆದೇಶ ನೀಡಿದ್ದರೂ ಈ ಕಾರ್ಯಕ್ಕಾಗಿ ಸರ್ಕಾರದವರು ಏಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ಕೇಂದ್ರ ಸರ್ಕಾರ ಆನೆ ಹಿಡಿಯಲು ಆದೇಶ ನೀಡಿದೆ. ಯಾವ ಸಿದ್ಧತೆ ಮಾಡಿಕೊಳ್ಳದೆ ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುತ್ತಿರುವುದರಿಂದ ರೈತರಿಗೆ ತೊಂದರೆಯಾಗಿದೆ. ಶೀಘ್ರವೇ ಕಾಡಾನೆ ಹಿಡಿಯದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.