ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬಸ್ ಡಿಕ್ಕಿ: ಬೈಕ್ ಸವಾರರು ಸಾವು

Vishwanath S
Updated On : 16 Nov 2013, 12:40 pm

ಕ.ಪ್ರ.ವಾರ್ತೆ ,  ಹಾಸನ ,  ನ.15
ಹಾಸನದ ಬೇಲೂರು ರಸ್ತೆಯ ಕಡಗರಹಳ್ಳಿಯಲ್ಲಿ ಶುಕ್ರವಾರ ಬೆಳಗ್ಗೆ ರಾಜ್ಯ ರಸ್ತೆ ಸಾರಿಗೆ ಬಸ್ಸೊಂದು ಬೈಕ್‌ಗೆ ಡಿಕ್ಕಿ ಮಾಡಿದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ದಿಢೀರ್ ರಸ್ತೆ ತಡೆ ಕೈಗೊಂಡು ಪ್ರತಿಭಟನೆ ನಡೆಸಿದರು.
ಅಪಘಾತ ಖಂಡಿಸಿ ಗ್ರಾಮಸ್ಥರು ಹಾಸನ-ಬೇಲೂರು ರಸ್ತೆಯನ್ನು ಕೆಲ ಗಂಟೆಗಳ ಕಾಲ ರಸ್ತೆ ತಡೆ ನಡೆಸಿದರು. ಇದರಿಂದ ಕೆಲ ಗಂಟೆಗಳ ಕಾಲ ಈ ಮಾರ್ಗದ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಸುಮಾರು 1 ಕಿಮೀ ವರೆಗೂ ವಾಹನಗಳು ಚಲಿಸಲಾಗದೆ ಅಸ್ತವ್ಯಸ್ತಗೊಂಡಿದ್ದವು.
ತಾಲೂಕಿನ ಕಡಗರಹಳ್ಳಿಯ ನಿವಾಸಿ ಪರಮೇಶ್ (45) ಮತ್ತು ವಿರೂಪಾಕ್ಷ ಎಂಬುವರು ಹಾಸನದಿಂದ ತಮ್ಮ ಬೈಕ್‌ನಲ್ಲಿ ತಮ್ಮ ಗ್ರಾಮಕ್ಕೆ ಬೇಲೂರು ರಸ್ತೆಯಲ್ಲಿ ಹೋಗುತ್ತಿದ್ದಾಗ ಬೇಲೂರು ಮಾರ್ಗವಾಗಿ ಬಂದಂತಹ  ಸಾರಿಗೆ ಬಸ್ ನಿರ್ಲಕ್ಷ್ಯತೆಯಿಂದ ಬೈಕ್‌ಗೆ ಡಿಕ್ಕಿ ಮಾಡಿದ ಪರಿಣಾಮ ಪರಮೇಶ್ ಹಾಗೂ ವಿರೂಪಾಕ್ಷ ಸ್ಥಳದಲ್ಲಿಯೇ ಮೃತಪಟ್ಟರು. ಸ್ಥಳಕ್ಕೆ ಆಗಮಿಸಿದ ಹಾಸನ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ತಾಸಿಗೂ ಹೆಚ್ಚು ಸಮಯ ರಸ್ತೆ ತಡೆ: ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಪೊಲೀಸ್ ಹಾಗೂ ಆಂಬುಲೆನ್ಸ್ ತಡೆದು ಮೃತದೇಹವನ್ನು ಮುಟ್ಟದಂತೆ ಪಟ್ಟು ಹಿಡಿದರು. ನಂತರ ಬೇಲೂರು ರಸ್ತೆಯಲ್ಲಿ ರಸ್ತೆ ತಡೆ ನಡೆಸಿ ವಾಹನಗಳ ಸಂಚಾರಕ್ಕೆ ಸುಮಾರು ತಾಸಿಗೂ ಹೆಚ್ಚು ಕಾಲ ಅಡಚಣೆ ಉಂಟು ಮಾಡಿದರು. ಇದರಿಂದ ವಾಹನಗಳು ಬೇರೆ ಮಾರ್ಗದಲ್ಲಿ ಸಂಚರಿಸಿದವು. ಸಾರಿಗೆ ಬಸ್‌ಗಳ ಅತೀ ವೇಗದಿಂದಾಗಿ ಅಪಘಾತ ಉಂಟಾಗಿದೆ ಎಂದು ಗ್ರಾಮಸ್ಥರು ಕಿಡಿಕಾರಿದರು.
ಈ ರಸ್ತೆಯಲ್ಲಿ ಹಲವು ಬಾರಿ ಅಪಘಾತಗಳು ಸಂಭವಿಸಿ ಸಾವು ನೋವು ಸಂಭವಿಸುತ್ತಿದ್ದರು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಹೆದ್ದಾರಿಯಲ್ಲಿ ರಸ್ತೆಯ ಹುಬ್ಬುಗಳಿಲ್ಲದೆ ವಾಹನಗಳು ಅತೀವೇಗವಾಗಿ ಚಲಿಸುತ್ತಿವೆ. ಇದರಿಂದ ಈ ಭಾಗದಲ್ಲಿ ಅಪಘಾತಗಳು ಹೆಚ್ಚಾಗಿ ಸಾವು-ನೋವು ಸಂಭವಿಸಲು ಸಾಧ್ಯವಾಗುತ್ತಿದೆ. ಮೇಲೆ ಮೇಲೆ ಅಪಘಾತಗಳು ಉಂಟಾಗಿ ಸಾವಿನ ಸಂಖ್ಯೆ ಹೆಚ್ಚುತ್ತಿದ್ದರೂ ಯಾವುದೇ ಕ್ರಮಗಳನ್ನು ಅಧಿಕಾರಿಗಳು ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಿನೇ ದಿನೇ ಈ ರಸ್ತೆಯಲ್ಲಿ ಓಡಾಡುವಂತಹ ವಾಹನಗಳ ಸಂಖ್ಯೆ ಹೆಚ್ಚಾಗಿರುವುದು ಅಪಘಾತಕ್ಕೆ ಕಾರಣವಾಗಿದೆ. ಜೊತೆಗೆ ವೇಗದ ಮಿತಿ ಇಲ್ಲದ ಕಾರಣ ಈ ರೀತಿ ಸಾವು ನೋವು ಉಂಟಾಗಲು ಕಾರಣ. ಈ ಹಿಂದೆ ವೇಗ ನಿಯಂತ್ರಣಕ್ಕೆ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಈಚೆಗಷ್ಟೇ ಬೇಲೂರು ಸಮೀಪ ಇಬ್ಬರು ಯುವತಿಯರಿಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದರು. ಈ ರೀತಿಯಾಗಿ ಇಲ್ಲಿ ಅಪಘಾತಗಳು ದಿನೇ ದಿನೇ ಹೆಚ್ಚಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಸಾರಿಗೆ ಬಸ್ ಚಾಲಕರು ರಸ್ತೆಯಲ್ಲಿ ಅತಿ ವೇಗವಾಗಿ ವಾಹನಗಳನ್ನು ಚಲಾಯಿಸುತ್ತಾರೆ. ಸಾರಿಗೆ ಅಧಿಕಾರಿಗಳು ಚಾಲಕರಿಗೆ ಈ ಬಗ್ಗೆ ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement