'ವಿವೇಕಾನಂದರು ಯುವಕರಿಗೆ ಪ್ರೇರಕ ಶಕ್ತಿಯಾಗಲಿ'
ಅರಸೀಕೆರೆ: ವಿದ್ಯಾರ್ಥಿಗಳು ತಮ್ಮ ವ್ಯಾಸಂಗ ಜೀವನದಲ್ಲಿ ಸ್ವಾಮಿ ವಿವೇಕಾನಂದ ಆದರ್ಶಗಳನ್ನು ತಿಳಿದು ಆಳವಾಗಿ ಅಭ್ಯಾಸ ಮಾಡಿದಾಗ ಮಾತ್ರ ತಮ್ಮ ಜೀವಿತದ ಅವಧಿಯಲ್ಲಿ ಅದ್ಭುತ ಸಾಧನೆ ಮಾಡಬಹುದು ಎಂದು ಸ್ವಾಮಿ ವಿವೇಕಾನಂದ ರಥಯಾತ್ರೆ ಸಂಚಾಲಕ ತ್ಯಾಗೇಶ್ವರಾನಂದ ಸ್ವಾಮೀಜಿ ತಿಳಿಸಿದರು.
ರಾಜ್ಯಾದ್ಯಂತ ಸಂಚರಿಸುತ್ತಿರುವ ಮೈಸೂರು ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ವಿವೇಕಾನಂದ ರಥಯಾತ್ರೆ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಸ್ಥಳೀಯ ಸ್ವಾಗತ ಸಮಿತಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣ ಮಾಡಿದರು.
ಯುವ ಶಕ್ತಿಗೆಂದು ಸ್ವಾಮಿ ವಿವೇಕಾನಂದರು ತಮ್ಮ ಜೀವಿತಾವಧಿಯಲ್ಲಿ ಮಹತ್ತರವಾದ ಸಿದ್ಧಾಂತ ಮತ್ತು ಆದರ್ಶಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ವಿವೇಕಾನಂದರ ದಿವ್ಯವಾಣಿಯನ್ನು ಅವಲೋಕಿಸಿದಾಗ ಭಾರತದ ಬಗ್ಗೆ ಅವರು ಇಟ್ಟಿದ್ದ ದೇಶಾಭಿಮಾನ ಮತ್ತು ಸ್ವಾಭಿಮಾನ ಅರಿವಾಗುತ್ತದೆ. ಈ ಅಭಿಯಾನದ ಮೂಲಕ ನಾವು ಅತ್ಯಂತ ಕಡಿಮೆ ಬೆಲೆಯಲ್ಲಿ ವಿವೇಕಾನಂದರ ದಿವ್ಯ ಚರಿತ್ರೆಯುಳ್ಳ ಪುಸ್ತಕಗಳನ್ನು ಮಾರಾಟ ಮಾಡಲಾಗುತ್ತಿದ್ದೇವೆ. ಹಿರಿಯರು ಕಿರಿಯರೆನ್ನದೇ ಪುಸ್ತಕಗಳನ್ನು ಖರೀದಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಭವ್ಯ ಭಾರತದ ನಿರ್ಮಾಣ ವಿವೇಕಾನಂದರ ಕನಸಾಗಿದ್ದು, ನನಸು ಮಾಡಲು ನಾವುಗಳು ಸನ್ನದ್ಧರಾಬೇಕಾಗಿದೆ. ಅವರ ಆದರ್ಶ ಸಿದ್ಧಾಂತಗಳು ಇಂದಿಗೂ ಪ್ರಸ್ತುತವಾಗಿದ್ದು, ಇದು ದೇಶದ ಎಲ್ಲರಿಗೂ ಅನ್ವಯವಾಗುತ್ತದೆ. ಇಂದು ರಾಜ್ಯಾದ್ಯಂತ ಸಂಚರಿಸುತ್ತಿರುವ ರಥ ಯಾತ್ರೆಯು ಒಂದು ಅಂದೋಲನವಾಗುವುದರ ಮೂಲಕ ರಾಷ್ಟ್ರ ಜಾಗೃತಿಯನ್ನು ಮೂಡಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಊಟಿಯ ರಾಮಕೃಷ್ಣ ಮಠದ ಅಧ್ಯಕ್ಷ ರಾಘವೇಶಾನಂದ ಸ್ವಾಮೀಜಿ, ಪನ್ನಂಪೇಟೆಯ ಸ್ವರೂಪಾನಂದ ಸ್ವಾಮಿ ಮಾತನಾಡಿದರು. ಯುಕ್ತೇಶಾನಂದ ಸ್ವಾಮಿ, ಮಾಜಿ ಶಾಸಕ ಎ.ಎಸ್.ಬಸವರಾಜು, ಜಿಪಂ ಉಪಾಧ್ಯಕ್ಷ ಬಿಳಿಚೌಡಯ್ಯ, ಪುರಸಭೆ ಅಧ್ಯಕ್ಷ ಮೋಹನ್ಕುಮಾರ್, ತಹಸೀಲ್ದಾರ್ ಕೇಶವಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ನಟರಾಜ್, ಸ್ವಾಗತ ಸಮಿತಿಯ ಪದಾಧಿಕಾರಿಗಳಾದ ಕೆ.ಎಸ್.ಪ್ರಸನ್ನಕುಮಾರ್, ರೋಟರಿ ಮಾಜಿ ಅಧ್ಯಕ್ಷ ಎನ್.ಜಿ ಮಧು, ಹಾಲಿ ಅಧ್ಯಕ್ಷ ಪ್ರವೀಣ್, ವೇಣುಗೋಪಾಲ್, ಗಣೇಶ್ ರಾಯ್ಕರ್, ಮಧು.ಜೆ.ಎಲ್, ಮೋಹನ್ಕುಮಾರ್, ಪುರಸಭಾ ಸದಸ್ಯರಾದ ಪಾರ್ಥಸಾರಥಿ, ಮಾಜಿ ಸದಸ್ಯರಾದ ಸಿದ್ದಮ್ಮ, ಎನ್.ಡಿ.ಪ್ರಸಾದ್, ಕಾಂಗ್ರೆಸ್ ರೋಟರಿ ಇನ್ನರ್ವ್ಹೀಲ್ ಮಾಜಿ ಅಧ್ಯಕೆ ಸುಮನ, ಹಾಲಿ ಕಾರ್ಯದರ್ಶಿ ಸಂಧ್ಯಾ ವಿಶ್ವನಾಥ್, ಲಲಿತಾ, ಲತಾ ಸರ್ವೇಶ್, ಅಣ್ಣಾಯ್ಕನಹಳ್ಳಿ ವಿಜಯಕುಮಾರ್, ಡಾ.ನಳಿನಿ, ಡಾ. ಜಗದೀಶ್ ಇದ್ದರು.
ವಿಶೇಷವಾಗಿ ಅಲಂಕೃತವಾದ ರಥವು ಪಟ್ಟಣದ ಜೆ.ಸಿ.ಆಸ್ಪತ್ರೆ ಮುಂಭಾಗದಿಂದ ಹೊರಟು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಶಾಲಾ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿ ಮೆರಗು ತಂದರು. ಕಲಾ ತಂಡಗಳು ಮತ್ತು ಜಯ ಘೋಷಗಳು ವಿಶೇಷ ಹಬ್ಬದ ವಾತಾವರಣವನ್ನು ತಂದಿತ್ತು. ಪುಸ್ತಕ ಭಂಡಾರಕ್ಕೆ ಮುಗಿಬಿದ್ದ ಸಾರ್ವಜನಿಕರು ಸ್ವಾಮಿ ವಿವೇಕಾನಂದ ವಾಣಿಯ ಅನೇಕ ಪುಸ್ತಕಗಳನ್ನು ಖರೀದಿಸಿದರು.