ಕುಲಗೆಟ್ಟಿರುವ ರಾಜಕೀಯ ವ್ಯವಸ್ಥೆ
ಕ.ಪ್ರ. ವಾರ್ತೆ, ಹಾಸನ, ನ. 17
ರಾಜಕೀಯ ವ್ಯವಸ್ಥೆ ಪ್ರಸ್ತುತ ಕೆಟ್ಟು ಹೋಗಿದ್ದು, ನೈತಿಕತೆ, ಪ್ರಭುತ್ವ, ಆಚಾರ ವಿಚಾರ ಇಲ್ಲವಾಗಿದೆ. ವಿಧಾನ ಸೌಧ ನಿಧಾನ ಸೌಧ ಆಗಿದೆ ಎಂದು ಮೈಸೂರಿನ ಊರಿಲಿಂಗಪೆದ್ದೀಶ್ವರ ಮಹಾಸಂಸ್ಥಾನದ ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ ಅಸಮಧಾನ ವ್ಯಕ್ತಪಡಿಸಿದರು.
ಛಲವಾದಿ ಮಹಾ ಮಂಡಲ ವತಿಯಿಂದ ಭಾನುವಾರ ನಡೆದ ಡಾ.ಅಂಬೇಡ್ಕರ್ 122ನೇ ಜನ್ಮ ದಿನಾಚರಣೆ ಮತ್ತು 3ನೇ ವಾರ್ಷಿಕ ಮಹಾಸಭೆಯ ಅಂಗವಾಗಿ ಚನಾಯಿತ ಪ್ರತಿನಿಧಿಗಳು, ಪ್ರತಿಭಾವಂತ ವಿದ್ಯಾರ್ಥಿಗಳು, ನಿವೃತ್ತ ನೌಕರರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಸ್ವಾಮೀಜಿ ಮಾತನಾಡಿದರು.
ಹಿಂದೆ ಭತ್ತ, ರಾಗಿ ಬೆಳೆದು ಜಮೀನ್ದಾರ್ಗೆ ಕೊಟ್ಟು ಹಿಂದೆ ಉಳಿದು ಕೈಕಟ್ಟಿ ನಿಲ್ಲುವ ಮೂಲಕ ಜೀವನ ಮಾಡುತ್ತಿದ್ದೇವು. ಪ್ರಸ್ತುತ ರಾಜಕೀಯದಲ್ಲಿ 121 ಸೀಟನ್ನು ಗೆದ್ದು ಕೊಟ್ಟ ದಲಿತ ಮುಖಂಡರು ಅಧಿಕಾರ ಇಲ್ಲದೆ ಕೈಕಟ್ಟಿ ಹಿಂದೆ ನಿಲ್ಲುವ ಮೂಲಕ ಹೈಟೆಕ್ ಜೀತಗಾರಿಕೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಶೋಕಿ ಜೀವನ: ಪ್ರಸ್ತುತ ಸಮಾಜದಲ್ಲಿ ಓಟು, ನೋಟು, ಸೀಟು ಮತ್ತು ಬೂಟಿನ ಹಿಂದೆ ಸುತ್ತಾಡುವ ಮೂಲಕ ಆಡಂಬರ ಜೀವನ (ಶೋಕಿ) ಮಾಡುತ್ತಿದ್ದಾರೆ. ಅದನ್ನು ನಾವು ಪಡೆಯಲು ಅಂಬೇಡ್ಕರ್ ಕೊಟ್ಟ ಸಂವಿಧಾನದ ಹಕ್ಕೇ ಕಾರಣ. ಅವರು ಸಮಾನತೆ, ಸಹಬಾಳ್ವೆಯನ್ನು, ಕಾನೂನಿನಡಿಯಲ್ಲಿ ಎಲ್ಲರೂ ಸಮಾನರು ಎಂಬ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತಂದಂತಹ ಮಹಾನ್ ವ್ಯಕ್ತಿ. ಅಂತವರನ್ನು ನಾವು ಮರೆಯುವ ಮೂಲಕ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಬದಲು ಮರೆ ಮಾಚುತ್ತಿದ್ದೇವೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ರಾಜಕೀಯದಲ್ಲಿ ಮೀಸಲಾತಿ ನೀಡಿದ್ದು ಅಂಬೇಡ್ಕರ್. ಜೊತೆಗೆ ದೇಶದಲ್ಲಿ ಸಮಾನತೆ ಹಾಗೂ ಪ್ರಜಾಪ್ರಭುತ್ವ ಆಳ್ವಿಕೆಗೆ ಗಾಂಧಿ, ನೆಹರು, ವಲ್ಲಬಾಯಿ ಪಟೇಲ್ಗಿಂತ ಅಂಬೇಡ್ಕರ್ ಶ್ರಮವೇ ಅಪಾರ. ಪ್ರಜಾಪ್ರಭುತ್ವದಲ್ಲಿ ರಾಜರ ಆಳ್ವಿಕೆಯನ್ನು ತೆಗೆದು, ಓಟಿನ ಮೂಲಕ ಆಯ್ಕೆ ಮಾಡುವ ಆಚರಣೆ ತಂದರು. ಎಲ್ಲಾ ಸಮುದಾಯಕ್ಕೂ ಅಧಿಕಾರ ಸಂವಿಧಾನದಲ್ಲಿ ಕಲ್ಪಿಸಿಕೊಟ್ಟಿದ್ದಾರೆಂದ ಅವರು, ಅಂಬೇಡ್ಕರ್ ಆದರ್ಶ-ಗುಣತತ್ವಗಳು ಸಮರ್ಪಕವಾಗಿ ಜಾರಿಯಾಗಬೇಕು ಎಂದು ಹೇಳಿದರು.
ಎಲ್ಲಾ ಸಮುದಾಯದ ಸ್ವತ್ತು: ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ದೇಶದ ಸಂವಿಧಾನ ರಚಿಸಿದ ಅಂಬೇಡ್ಕರ್ ಕೇವಲ ಒಂದು ಸಮಾಜದ ಆಸ್ತಿಯಲ್ಲ. ಅವರು ಎಲ್ಲಾ ಸಮುದಾಯದ ಸ್ವತ್ತಾಗಿದ್ದಾರೆ. ದೇಶದಲ್ಲಿ ಸಮಾನತೆಯನ್ನು ತಂದ ಮಹಾನ್ ನಾಯಕ ಎಂದ ಅವರು, ದೇವೇಗೌಡರು ಜಿಲ್ಲಾ ಪರಿಷತ್ನಲ್ಲಿ ಪರಿಶಿಷ್ಟರಿಗೂ ಸಮಾನತೆಯ ಹಕ್ಕನ್ನು ನೀಡಿದರು. ಸರ್ಕಾರ ಯಾವುದೇ ಯೋಜನೆಗಳನ್ನು ತಂದರೂ ಎಲ್ಲಾ ಸಮಾಜವನ್ನು ಸಮಾನತೆಯಿಂದ ತೆಗೆದುಕೊಂಡು ಹೋಗಬೇಕು ಎಂದು ಹೇಳಿದರು. ಕೆಳಮಟ್ಟದ ಜನರನ್ನು ಗುರುತಿಸಿ ಅವರನ್ನು ಗಣನೆಗೆ ತೆಗೆದುಕೊಂಡಾಗ ಮಾತ್ರ ಅಂಬೇಡ್ಕರ್ ಆಶಯಗಳು ಈಡೇರುತ್ತವೆ. ಆದರೆ ಈ ಸಮಾಜದ ಹೆಸರು ಹೇಳಿಕೊಂಡು ಸಾಕಷ್ಟು ಹಣವನ್ನು ಲೂಟಿ ಮಾಡಲಾಗುತ್ತಿದೆ. ಗಂಗಾ ಕಲ್ಯಾಣದಂತಹ ಯೋಜನೆ ಜಾರಿಗೆ ತಂದಿದ್ದರೂ ಈವರೆಗೂ ಸರಿಯಾಗಿ ವಿದ್ಯುತ್ನ್ನು ನೀಡುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಇತ್ತೀಚೆಗೆ ಶಿಕ್ಷಣ ವ್ಯವಸ್ಥೆ ಖಾಸಗೀಕರಣವಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸರಿಯಾಗಿ ಲಭ್ಯವಾಗುತ್ತಿಲ್ಲ. ಕೇವಲ ಓಟಿಗಾಗಿ ರಾಜಕಾರಣ ಮಾಡುವುದು ಸರಿಯಲ್ಲ ಎಂದ ಅವರು, ಇದೇ ರೀತಿ ಶಿಕ್ಷಣ ವ್ಯವಸ್ಥೆ ಮುಂದುವರೆದರೆ ಮುಂದೊಂದು ದಿನ ಶಿಕ್ಷಣ ವ್ಯವಸ್ಥೆ ಸ್ಥಿತಿ ಶೋಚನೀಯವಾಗಲಿದೆ ಎಂದರು. ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ದಲಿತಾ ಕಲಾ ಮೇಳಗಳಿಂದ ಮೆರವಣಿಗೆ ನಡೆಯಿತು.
ಶಾಸಕ ಎಚ್.ಕೆ.ಕುಮಾರಸ್ವಾಮಿ, ಕೆ.ದಾಸ್ ಪ್ರಕಾಶ್, ಯಗಚಿ ಅಣೆಕಟ್ಟು ವಿಭಾಗದ ಕಾರ್ಯಪಾಲಕ ಎಂಜಿನಿಯರ್ ರಾಜಶೇಖರ್, ಸಕಲೇಶಪುರ ಎಆರ್ಟಿಓ ಎಂ.ಆರ್.ಕೇಶವಧರಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪತ್ರಾಂಕಿತ ಅಧಿಕಾರಿ ಮಹದೇಪ್ಪ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಡಿ.ಮಲ್ಲಿಕಾರ್ಜುನಸ್ವಾಮಿ, ಕಾಳಯ್ಯ, ಸುಂದರ್, ಬೋರಯ್ಯ ಇದ್ದರು.
ಮೂಢನಂಬಿಕೆ ತೊಡೆಯಿರಿ
ದೇಶದಲ್ಲಿ ಮೂಢನಂಬಿಕೆ ತಾಂಡವವಾಡುತ್ತಿದೆ. ಇವತ್ತಿಗೂ ನಿಂಬೇಹಣ್ಣಿನಿಂದ ಮಕ್ಕಳಾಗುತ್ತದೆ ಅಂತ ನಂಬಿಕೊಂಡು ಎಷ್ಟೋ ಜನ ಅದರ ಹಿಂದೆ ಹೋಗುತ್ತಿದ್ದಾರೆ. ಅದೇ ರೀತಿ ಕಲ್ಲು ನಾಗರಹಾವಿಗೆ ತನಿ ಎರೆಯುವಷ್ಟು ಮೌಢ್ಯತೆ ನಮ್ಮ ಜನರಲ್ಲಿ ಇನ್ನೂ ಜೀವಂತವಾಗಿದ್ದು, ಅದನ್ನು ತೊಡೆದು ಹಾಕಬೇಕು ಎಂದರು. ಮೇಲ್ಜಾತಿಯ ಹೆಣ್ಣು ಮಗು ಅರಳಿಮರ ಸುತ್ತು ಹಾಕಿ, ಇರುವೆಗಳಿಗೆ ಸಕ್ಕರೆ ಹಾಕುತ್ತಾರೆ. ಅದೇ ಒಬ್ಬ ದಲಿತ ಮಹಿಳೆಯನ್ನು ಹತ್ತಿರಕ್ಕೂ ಸೇರಿಸದೇ ಅಸ್ಪೃಶ್ಯತೆಯಿಂದ ಕಾಣುತ್ತಾರೆ. ಆದರೆ ನಿಜವಾದ ಅಸ್ಪೃಶ್ಯತೆ ಇರೋದೆ ಮೌಢ್ಯತೆಯಲ್ಲಿ ಎಂದು ಜ್ಞಾನ ಪ್ರಕಾಶ್ ಸ್ವಾಮೀಜಿ ನುಡಿದರು.