ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನಟ ಅರುಣ್‌ಸಾಗರ್‌ರಿಂದ ಮನರಂಜನೆ

Vishwanath S
Updated On : 18 Nov 2013, 12:39 pm

ಕನ್ನಡಪ್ರಭ ವಾರ್ತೆ, ಹಾಸನ, ನ.17
ಕನ್ನಡ ರಾಜ್ಯೋತ್ಸವ ಅಂಗವಾಗಿ ಶ್ರೀವಿರಾಂಜನೇಯ ಯುವಕ ಸಂಘ ಹಾಗೂ ಶ್ರೀಮಾರುತಿ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರ ನಡೆಯಿತು. ಚಲನಚಿತ್ರ ಕಲಾವಿದ ಅರುಣಸಾಗರ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ನಂತರ ಮಕ್ಕಳಿಗೆ ಮನರಂಜನೆ ಹಾಗೂ ನೀತಿ ಬೋಧನೆ ಮಾಡಿದರು. ಕನ್ನಡ ರಾಜ್ಯೋತ್ಸವದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು. ಪತ್ರಕರ್ತ ಎಚ್.ಬಿ.ಮದನ್‌ಗೌಡ, ಸ್ವರೂಪ್ ಇತರರು ಇದ್ದರು.
ಮಹಿಳೆ ಮೇಲೆ ಹಲ್ಲೆ
ಸಕಲೇಶಪುರ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯ ಮೇಲೆ ಹಲ್ಲೆ ನಡೆಸಿ, ಊ್ಞಣ/ ಮಾನಭಂಗಕ್ಕೆ ಪ್ರಯತ್ನಿಸಿರುವ ಘಟನೆ ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಗ್ರಾಮದ ನಾಗಮಣಿ (30) ಹಲ್ಲೆಗೊಳಗಾದ ಮಹಿಳೆ. ಗ್ರಾಮದ ದೇವರಾಜ್ ಹಾಗೂ ಕುಮಾರ್ ಮಾನಭಂಗಕ್ಕೆ ಯತ್ನಿಸಿದವರು ಎಂದು ಆರೋಪಿಸಲಾಗಿದೆ. ಕಾಫಿ ತೋಟದಲ್ಲಿ ಹಣ್ಣುಕೊಯಿಲು ನಡೆಸುವ ವಿಚಾರವಾಗಿ ನಡೆದ ಜಗಳ ಸಂಘರ್ಷಕ್ಕೆ ತಿರುಗಿ ಮಹಿಳೆಯ ತಲೆ ಹಾಗೂ ಕೈಗಳಿಗೆ ಹಲ್ಲೆ ನಡೆಸಿ ನಂತರ ಮಾನಭಂಗಕ್ಕೆ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ರಕ್ತದಾನ ಶಿಬಿರ
ಹಾಸನ: ನಗರದ ಪಶುವೈದ್ಯಕೀಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಕಾರ್ಯಕ್ರಮಗಳಡಿಯಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಚಾಮರಾಜೇಂದ್ರ ರಕ್ತನಿಧಿಯ ಸಿಬ್ಬಂದಿ  ಶಿಬಿರದಲ್ಲಿ ರಕ್ತತಪಾಸಣೆ ಹಾಗೂ ರಕ್ತಸಂಗ್ರಹಣೆ ನಡೆಸಿದರು.  ಪಶುವೈದ್ಯಕೀಯ ಕಾಲೇಜಿನ ಡೀನ್ ಡಾ. ಎಚ್.ಎನ್. ನರಸಿಂಹಮೂರ್ತಿ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ರಕ್ತದಾನದ ಮಹತ್ವ ಹಾಗೂ ರಕ್ತಮರುಪೂರಣದ ಅವಶ್ಯಕತೆಯ ಬಗ್ಗೆ ಸೂಕ್ತ ಮಾಹಿತಿ ನೀಡಿದರು. ಹಾಸನದ ಪಶುವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಬೋಧಕೇತರ ಸಿಬ್ಬಂದಿಉತ್ಸಾಹದಿಂದ ಪಾಲ್ಗೊಂಡಿದ್ದರು.
ಕರವೇಯಿಂದ ಆರೋಗ್ಯ ಉಚಿತ ತಪಾಸಣೆ ಶಿಬಿರ
ಹಾಸನ: ನಗರದ ಪೆನ್ಷನ್ ಮೊಹಲ್ಲಾ ಉರ್ದು ಶಾಲೆಯಲ್ಲಿ ಕರವೇಯಿಂದ ರಾಜ್ಯೋತ್ಸವ ಸಂಭ್ರಮ ಮತ್ತು 257ನೇ ಟಿಪ್ಪು ಜಯಂತಿ ಕಾರ್ಯಕ್ರಮದ ಅಂಗವಾಗಿ ಆರೋಗ್ಯ ಉಚಿತ ತಪಾಸಣಾ ಶಿಬಿರ ನಡೆಯಿತು.
ನೂರಾರು ಜನರು ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಂಜೆ ಬಡ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಮಾಡಿದರು. ಕರವೇ ಜಿಲ್ಲಾಧ್ಯಕ್ಷ ಸಿ.ಡಿ.ಮನುಕುಮಾರ್, ಜಿಲ್ಲಾ ಸಂಚಾಲಕ ವಸಂತಕುಮಾರ್, ನಗರ ಪ್ರಧಾನ ಕಾರ್ಯದರ್ಶಿ ಸಮೀರ್ ಅಹಮದ್, ಗಿರೀಶ್, ವೈದ್ಯರಾದ ಬಸವರಾಜ್, ಆಜಾದ್ ಟಿಪ್ಪು ಸಂಘರ್ಷ ಸಮಿತಿ ಅಧ್ಯಕ್ಷ ಮುಬಶೀರ್ ಅಹಮದ್, ಅರುಣ್, ನೌಶತ್‌ಪಾಷಾ, ಶಕೀಜ್ ಇತರರು ಇದ್ದರು. ಸಮಾಜ ಸೇವಕ ಆರ್.ಕೆ.ಸ್ವರೂಪ್ ನಿರೂಪಿಸಿದರು.
ಬೈಕ್ ಸವಾರನ ರಕ್ಷಿಸಲು ಹೋಗಿ ಉರುಳಿದ ಜೀಪು
ಸಕಲೇಶಪುರ: ರಸ್ತೆಗೆ ಅಡ್ಡ ಬಂದ ಬೈಕ್ ಸವಾರನನ್ನು ರಕ್ಷಿಸಲು ಹೋಗಿ ಪೊಲೀಸ್ ಜೀಪು ಮಗುಚಿ ಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿ 75 ರ ಬಾಳ್ಳುಪೇಟೆ ಗ್ರಾಮ ಸಮೀಪ ಶನಿವಾರ ನಡೆದಿದೆ. ಹಾಸನದಿಂದ ಸಕಲೇಶಪುರದೆಡೆಗೆ ತೆರಳುತ್ತಿದ್ದ ತಾಲೂಕು ಸಂಚಾರಿ ಅರಣ್ಯ ದಳದ ಸಿಬ್ಬಂದಿಯಿದ್ದ ಜೀಪು ಬಾಳ್ಳುಪೇಟೆ ಗ್ರಾಮ ಸಮೀಪ ಅಡ್ಡಲಾಗಿ ಬಂದ ಬೈಕನ್ನು ರಕ್ಷಿಸಲು ಹೋಗಿ ಮಗುಚಿ ಬಿದ್ದಿದ್ದು ಜೀಪಿನಲ್ಲಿದ್ದ ಪಿ.ಎಸ್.ಐ ರಾಮೇಗೌಡ ಸೇರಿದಂತೆ ಇತರೆ ಸಿಬ್ಬಂದಿಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಉರುಳಿದ ಬಿಯರ್ ಲಾರಿ ಮದ್ಯ ಪ್ರಿಯರಿಗೆ ಕಿಕ್!
ಸಕಲೇಶಪುರ: ತಾಲೂಕಿನ ಬಾಳ್ಳುಪೇಟೆ ಗ್ರಾಮ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಯರ್ ತುಂಬಿದ್ದ ಲಾರಿಯೊಂದು ಉರುಳಿ ಬಿದ್ದಿದ್ದು ಮದ್ಯಪಾನ ಪ್ರಿಯರಿಗೆ ಸ್ವರ್ಗವನ್ನೇ ಸೃಷ್ಟಿಸಿದ ಘಟನೆ ಶನಿವಾರ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿಗೆ ಸಾಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದ್ದು ಚಾಲಕ ಹಾಗೂ ಕ್ಲಿನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಿಯರ್ ಲಾರಿ ಬಿದ್ದಿರುವ ವಿಚಾರ ತಿಳಿದ ಸ್ಥಳೀಯರು ಸಿಕ್ಕಿದಷ್ಟು ಬಿಯರ್ ದೋಚಿದರು. ಈ ರಸ್ತೆಯಲ್ಲಿ ಬೈಕ್, ಕಾರಿನಲ್ಲಿ ಹೋಗುತ್ತಿದ್ದವರೂ ತಮಗೆ ದೊರಕಿದಷ್ಟು ದೋಚಿಕೊಂಡು ಹೋಗುತ್ತಿದ್ದರು. ಮುಂಜಾನೆ 8ರಿಂದ ಮಧ್ಯಾಹ್ನ 1ರವರೆಗೆ ಇಬ್ಬರು ಪೇದೆಗಳನ್ನು ನಿಯೋಜಿಸಿದ್ದರೂ ನಂತರದ ಸಮಯದಲ್ಲಿ ಅಪಘಾತಕ್ಕೀಡಾದ ಲಾರಿ ಸಮೀಪ ಯಾರೂ ಇರದಿರುವ ಲಾಭ ಪಡೆದ ಸ್ಥ್ಥಳೀಯರು ಅಳಿದುಳಿದ ಬಿಯರ್ ಬಾಟಲ್‌ಗಳನ್ನು ದೋಚಿದರು.
ತಾಂಡ್ಯದಲ್ಲಿ 8 ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ: ಭರವಸೆ
ಕನ್ನಡಪ್ರಭ ವಾರ್ತೆ, ಜಾವಗಲ್‌, ನ. 17
ಹೋಬಳಿಯ ಚಿಕ್ಕಜಿಕಟ್ಟೆಹಳ್ಳಿ ತಾಂಡ್ಯದಲ್ಲಿ 8 ಲಕ್ಷ ರು. ವೆಚ್ಚದ ಕಾಂಕ್ರಿಟ್ ರಸ್ತೆಯನ್ನು ಮಾಡಿಸಿಕೊಡುವುದಾಗಿ ಶಾಸಕ ವೈ.ಎನ್.ರುದ್ರೇಶಗೌಡ ಭರವಸೆ ನೀಡಿದರು. ಹೋಬಳಿಯ ಚಿಕ್ಕಜ್ಜಿಕಟ್ಟೆಹಳ್ಳಿ ತಾಂಡ್ಯದಲ್ಲಿ ನೂತನವಾಗಿ ನಿರ್ಮಿಸಿರುವ ಸೇವಾಲಾಲ್ ದೇವಾಲಯವನ್ನು ಶಾಸಕರು ಉದ್ಘಾಟಿಸಿ ಮಾತನಾಡಿದರು.ಚಿಕ್ಕಜ್ಚಿಕಟ್ಟೆಹಳ್ಳಿ - ಟಿ.ಬಿ.ಕಾವಲ್‌ಘಟ್ಟದವರೆಗಿನ 2 ಕಿ.ಮೀ. ರಸ್ತೆಯನ್ನು ಅಭಿವೃದ್ಧಿ ಪಡಿಸಿಕೊಡುವುದಾಗಿಯೂ ಹೇಳಿದರು.
ಐಶ್ವರ್ಯರಿಂದ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ
ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಭಾನುವಾರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿತ್ತು.
ಚಿತ್ಕಲಾ ಫೌಂಡೇಷನ್ ವತಿಯಿಂದ ಚಿತ್ಕಲಾ ಹವ್ಯಾಸಿ ಚಿತ್ರಕಲಾ ಶಾಲೆ ಹಾಗೂ ವಿಜಯ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ಎಚ್.ವಿ.ಐಶ್ವರ್ಯ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ನಡೆಯಿತು. ಚಿತ್ರ ಕಲಾವಿದೆ ಎಚ್.ವಿ.ಐಶ್ವರ್ಯ, ಪತ್ರಕರ್ತ ಆರ್.ಪಿ.ವೆಂಕಟೇಶ್‌ಮೂರ್ತಿ, ವಾರ್ತಾಧಿಕಾರಿ ವಿನೋದ್‌ಚಂದ್ರ ಇತರರು ಇದ್ದರು.
'ಭ್ರಷ್ಟಾಚಾರ ಒಂದು ಪಕ್ಷಕ್ಕೆ ಸೀಮಿತವಾಗಿಲ'್ಲ
ಅರಸೀಕೆರೆ: ಭ್ರಷ್ಟಾಚಾರ ಕೇವಲ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. 2ಜಿ ಸ್ಟೆಕ್ಟಂ ಹಗರಣದಲ್ಲಿ ಬಿಜೆಪಿ ಮುಖ್ಯಮಂತ್ರಿಗಳೂ  ಆರೋಪಿಗಳಾಗಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ಚೆಲ್ವಕುಮಾರ್ ಸಮರ್ಥಿಸಿಕೊಂಡಿದ್ದಾರೆ. ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ್ನು ಆರೋಪಿಸುವವರು ಮೊದಲು ತಮ್ಮ ಸ್ಥಿತಿ ಏನೆಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ಕೇಂದ್ರದಲ್ಲಿ ನಡೆದಿದೆ ಎನ್ನಲಾದ ಯಾವುದೇ ಹಗರಣಗಳಿಗೆ ಸಮರ್ಪಕ ದಾಖಲಾತಿ ದೊರೆತಿಲ್ಲ. ಇದು ಕೇವಲ ಊಹಾಪೋಹ ವಿರೋಧ ಪಕ್ಷಗಳ ಆರೋಪ ಎಂದ ಅವರು ಮೋದಿ ಅಲೆ ಎಲ್ಲಿಯೂ ಕಂಡುಬರುತ್ತಿಲ್ಲ. ಬೆಂಗಳೂರಿನಲ್ಲಿ ಮೋದಿ ರ್ಯಾಲಿ ಅದೊಂದು ಕೇವಲ ಪಕ್ಷದ ಕಾರ್ಯಕ್ರಮ ಅಷ್ಟೇ. ಮುಂದಿನ ಲೋಕಸಭಾ ಚುನಾವಣೆಗೆ ಸಕಲ ಸಿದ್ಧತೆಗಳು ನಡೆದಿದ್ದು ಪಕ್ಷಕ್ಕೆ ಗೆಲುವು ನಿಶ್ಚಿತ ಎಂದು ಹೇಳಿದರು. ಈ ಬಾರಿಯ ಚುನಾವಣೆಯಲ್ಲಿ ದೇವೇಗೌಡರು ಮತ್ತು ಅವರ ಮಕ್ಕಳ ಆಟ ನಡೆಯುವುದಿಲ್ಲ. ಅದನ್ನು ಜಿಲ್ಲೆಯ ಜನತೆ ಈ ಬಾರಿ ಮಾಡಿ ತೋರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾಜಿ ಸಚಿವ ಬಿ ಶಿವರಾಂ, ಕೆಪಿಸಿಸಿ ಸದಸ್ಯ ಪಟೇಲ್ ಶಿವಪ್ಪ, ವಿನಯಾಗಾಂಧಿ, ರಂಗನಾಥ್, ಮಾಡಾಳು ಚಂದ್ರಪ್ಪ ಇತರರು ಇದ್ದರು.
'ನೆಲ, ಜಲ ಸಂಸ್ಕೃತಿ ರಕ್ಷಣೆಗೆ ಶ್ರಮಿಸಿ'
ಗೊರೂರು: ನಾಡಿನ ನೆಲ- ಜಲ, ಸಂಸ್ಕೃತಿ ರಕ್ಷಣೆಗೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಗೊರೂರು ಯೋಗಾನರಸಿಂಹ ವಿದ್ಯಾಸಂಸ್ಥೆ ಕಾರ್ಯದರ್ಶಿ ಎ.ಜಿ. ರಾಮನಾಥ್ ತಿಳಿಸಿದರು. ಗೊರೂರು ಎ.ಎನ್. ವರದರಾಜುಲು ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ದೇಶಕ್ಕಾಗಿ ದುಡಿದ ಹಲವು ಮಹನೀಯರ ತತ್ವಾದರ್ಶಗಳನ್ನು ಪಾಲಿಸುವ ಮೂಲಕ ನಿಸ್ವಾರ್ಥ ಸೇವೆ ಸಲ್ಲಿಸಬೇಕು. ಸಾಂಸ್ಕೃತಿಕ ಹಬ್ಬವು ವಿದ್ಯಾರ್ಥಿಗಳಲ್ಲಿ ನಾಡಿನ ಸಂಸ್ಕೃತಿಯ ಅರಿವು ಮೂಡಿಸಲು ನೆರವಾಗಲಿದೆ ಎಂದರು. ಮೊಸಳೆ ಹೊಸಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಬಿ. ಶ್ರೀನಿವಾಸ್ ಮಾತನಾಡಿ, ಕನ್ನಡ ಎಂಬುದು ಒಂದು ಭಾಷೆ ಮತ್ತು ಸಂವಹನ, ಸಂಸ್ಕೃತಿ, ಶಾಸನಗಳು, ಪ್ರಾಚೀನ ಮತ್ತು ಆಧುನಿಕ ಕವಿಗಳು ಉಳಿಸಿದ, ಬಳಸಿದ, ಬೆಳೆಸಿದ ಭಾಷೆ. ಭಾಷೆಯ ಜೀವವು ಆಡುವವರ ನಾಲಗೆಯಲ್ಲಡಗಿದೆ ಎಂದು ಹೇಳಿದರು.ಪ್ರಾಂಶುಪಾಲ ಡಾ. ಎಂ.ಆರ್. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ಕಾರ್ಯದರ್ಶಿ ಎ.ಡಿ. ಕೃಷ್ಣಮೂರ್ತಿ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ರಾಧಾಕೃಷ್ಣ ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು. ದ್ವಿತೀಯ ಬಿ.ಎ. ವಿದ್ಯಾರ್ಥಿ ಯಶವಂತ ಕುಮಾರ್ ಸ್ವಾಗತಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement