ವೈಜ್ಞಾನಿಕ ಮನೋಭಾವದ ಶಿಕ್ಷಣ ಅವಶ್ಯ
ಕನ್ನಡಪ್ರಭ ವಾರ್ತೆ, ಹಾಸನ, ನ. 17
ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯುವಂಥ ಶಿಕ್ಷಣ ಅಳವಡಿಸುವ ಮೂಲಕ ಮೂಢನಂಬಿಕೆಯನ್ನು ತೊಡೆದುಹಾಕಬೇಕು ಎಂದು ವಿಚಾರವಾದಿ ಹಾಗೂ ಅಂತರರಾಷ್ಟ್ರೀಯ ಕಲಾವಿದ ಕೆ.ಟಿ.ಶಿವಪ್ರಸಾದ್ ಕರೆ ನೀಡಿದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ (ಕೆಜೆವಿಎಸ್) ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ಕಂದಾಚಾರ ಹಾಗೂ ಮೂಢನಂಬಿಕೆ ನಿಷೇಧ ಮಸೂದೆ-2013ನ್ನು ಬೆಂಬಲಿಸಿ ಮತ್ತು ಐಸಾನ್ ಧೂಮಕೇತು ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮೂಢನಂಬಿಕೆಯ ಹಿಂದೆ ದೊಡ್ಡ ಜಾಲವೇ ಅಡಗಿದೆ. ಅದೊಂದು ಮಾಫಿಯಾ ಆಗಿ ಮಾರ್ಪಟ್ಟು ಕಾರ್ಯನಿರ್ವಹಿಸುವ ಮೂಲಕ ಅಶಿಕ್ಷಿತರನ್ನು ತನ್ನ ಕೈಯಲ್ಲಿ ಹಿಡಿದು ತನ್ನಿಷ್ಟಕ್ಕೆ ತಕ್ಕಂತೆ ಮಾಫಿಯಾಗಳು ಕುಣಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೌಢ್ಯತೆಯಿಂದ ಕ್ರೌರ್ಯ: ಮೌಢ್ಯತೆಯು ಕ್ರೌರ್ಯವನ್ನು ಉಂಟು ಮಾಡುತ್ತದೆ. ಇದರ ವಿರುದ್ಧ ಸಾಕಷ್ಟು ಹೋರಾಟಗಳನ್ನು ಮಾಡುತ್ತಿದ್ದರೂ ಪ್ರಸ್ತುತ ಹಳ್ಳಿ ಹಳ್ಳಿಗಳಲ್ಲಿ ರಾಜಾರೋಷವಾಗಿ ಮೂಢನಂಬಿಕೆ ನಡೆಯುತ್ತಿದೆ. ಒಬ್ಬ ವ್ಯಕ್ತಿ ಮ್ಯಾಜಿಕ್ ಮಾಡುವ ಮೂಲಕ ಜನರನ್ನು ರಂಜಿಸಿದರೆ ಆವರಿಗೆ ಹಣ ನೀಡುವುದಿಲ್ಲ. ಆದೇ ಒಬ್ಬ ವ್ಯಕ್ತಿ ದೇವರ ಹೆಸರನ್ನು ಹೇಳಿಕೊಂಡು ಮಾಂತ್ರಿಕ ಶಕ್ತಿಯಿಂದ ಬೂದಿ ಮತ್ತು ಉಂಗುರ ನೀಡಿದರೆ ಜನರಿಗೆ ದೈವಶಕ್ತಿ ಎಂದು ನಂಬಿ ಕೋಟ್ಯಂತರ ರು. ಕಾಣಿಕೆಯಾಗಿ ನೀಡುವಂಥ ಭಾರೀ ಮೌಢ್ಯತೆಗೆ ಜನ ತಲುಪಿದ್ದಾರೆ ಎಂದು ಹೇಳಿದರು.
ವಿಜ್ಞಾನದಲ್ಲಿ ಸಾಕಷ್ಟು ಸಾಧನೆಗೈದಿದ್ದರೂ ಮೂಢನಂಬಿಕೆಯನ್ನು ತೊಡೆದು ಹಾಕಲು ಸಾಧ್ಯವಾಗಿಲ್ಲ. ಆದ್ದರಿಂದ ಮೌಢ್ಯತೆಯ ವಿರುದ್ಧ ಮೊದಲು ಸಂಘಟನೆ ಆಗಬೇಕು ಎಂದು ಕರೆ ನೀಡಿದರು. ಯಲ್ಲಮ್ಮದೇವಿ ಮುಂದೆ ಬೆತ್ತಲೆ ಸೇವೆ ಮಾಡಲಾಗುತ್ತದೆ. ಆದನ್ನು ತಡೆಯಲು ಹೋದ ಪೊಲೀಸರ ಮೇಲೆ ಅಲ್ಲಿನ ಜನರು ರಂಪಾಟವನ್ನು ಮಾಡಿದರು. ಮಹಿಳೆಯರು ಮತ್ತು ಮಕ್ಕಳನ್ನು ಮೌಢ್ಯತೆಯಿಂದ ಕ್ರೌರ್ಯಕ್ಕೆ ದೂಡಲಾಗುತ್ತಿದೆ. ಆದ್ದರಿಂದ 1ನೇ ತರಗತಿಯಿಂದಲೇ ಶೈಕ್ಷಣಿಕ ಪಾಠ ಪ್ರಚನದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಶಿಕ್ಷಣ ವ್ಯವಸ್ಥೆಯನ್ನು ಅಳಪಡಿಸಬೇಕು ಎಂದು ತಿಳಿಸಿದರು.
ಮಸೂದೆ ಭೂತದಂತೆ ಬಿಂಬಿತ: ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ಮೂಢನಂಬಿಕೆಯ ವಿರುದ್ಧ ಕಾನೂನು ರೂಪಿಸಲು ಹೊರಟಿರುವ ಸರ್ಕಾರದ ಮಸೂದೆಯನ್ನು ಸಮಾಜದಲ್ಲಿ ಭೂತದಂತೆ ಬಿಂಬಿಸಲಾಗುತ್ತದೆ. ಅದರಲ್ಲಿ ಸಾರ್ವಜನಿಕರ ನಂಬಿಕೆಗೆ ಧಕ್ಕೆ ತರುವಂತಹ ಅಂಶಗಳು ಇಲ್ಲ. ಕೆಲ ವಿಚಾರವಾದಿಗಳು ಈ ಮಸೂದೆಯ ಬಗ್ಗೆ ಸಾರ್ವಜನಿಕರ ದಾರಿ ತಪ್ಪಿಸುತ್ತಿದ್ದಾರೆ. ಜನರನ್ನು ಮೋಸ ಮಾಡುವಂತಹ ಮೂಢನಂಬಿಕೆಯನ್ನು ತೊಡೆಯಲು ಸರ್ಕಾರ ಮುಂದಾಗಿದೆ. ಅದನ್ನು ಜನರು ತಪ್ಪಾಗಿ ಅರಿಯಬಾರದು ಎಂದು ನುಡಿದರು.
ದೇಶದಲ್ಲಿ ಜಾತಿಯತೆ ಹುಟ್ಟಿದ್ದರಿಂದಲೇ ಅಸ್ಪೃಶ್ಯತೆ, ಬಹಿಷ್ಕಾರದಂತಹ ಆಚರಣೆಗಳು ಸೃಷ್ಟಿಯಾದವು.
ವೈಜ್ಞಾನಿಕ ನೆಲೆಗಟ್ಟು: ಬಸವಣ್ಣನವರು ಮೂಢನಂಬಿಕೆಯ ವಿರುದ್ಧ ಹೋರಾಡಿ ವೈಜ್ಞಾನಿಕ ನೆಲೆಗಟ್ಟನ್ನು ಹಾಕಿದರು. ಪ್ರಸ್ತುತ ಅವುಗಳ ಪಾಲನೆಯಾಗುತ್ತಿಲ್ಲ. ಆದ್ದರಿಂದ ಜಾತ್ಯತೀತ ಮನೋಭಾವ ಮೈಗೂಡಿಸಿಕೊಳ್ಳಬೇಕು. ಮನುಷ್ಯನನ್ನು ಎಚ್ಚರಿಸುವಂತಹ ನಂಬಿಕೆಗಳು ಮೂಢನಂಬಿಕೆ ಅಲ್ಲ. ಅದೇ ಮರ ಸುತ್ತಿದರೆ ಮಕ್ಕಳಾಗುತ್ತದೆ ಅನ್ನೋದು ಮೂಢನಂಬಿಕೆ. ಈ ರೀತಿಯ ಮೂಢನಂಬಿಕೆಯನ್ನು ಹೋಗಲಾಡಿಸಬೇಕು ಎಂದು ಹೇಳಿದರು. ವಿಜ್ಞಾನಿಯೊಬ್ಬರು ತಿರುಪತಿಗೆ ಹೋಗಿ ರಾಕೆಟ್ ಪ್ರತಿಕೃತಿ ದೇವರ ಮುಂದಿಟ್ಟು ಪೂಜೆ ಸಲ್ಲಿಸಿದರು ಎಂಬ ವಿಚಾರ ಚರ್ಚೆಗೆ ಕಾರಣವಾಗಿದೆ ಎಂದ ಅವರು, ಜಾತಿ ಎಂಬ ಭಯೋತ್ಪಾನೆ ಸಾಕಷ್ಟು ಮಂದಿಯನ್ನು ಸಾಯಿಸಿದೆ. ಮೌಢ್ಯತೆಯು ಕ್ರೌರ್ಯವನ್ನು ಉಂಟು ಮಾಡುತ್ತಿದ್ದು, ಅದನ್ನು ಹೋಗಲಾಡಿಸಬೇಕು ಎಂದು ಕರೆ ನೀಡಿದರು.
ವಿಚಾರವಾದಿ ಹಾಗೂ ಅಂತರರಾಷ್ಟ್ರೀಯ ಕಲಾವಿದ ಕೆ.ಟಿ.ಶಿವಪ್ರಸಾದ್ ಕೈಯಲ್ಲಿ ಹಾಗೂ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಅವರ ತಲೆ ಮೇಲೆ ಕರ್ಪೂರ ಇಟ್ಟು ಹಚ್ಚುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಕೈಯಲ್ಲಿ ಬೆಂಕಿಯನ್ನು ಸುಲಭವಾಗಿ ಹಚ್ಚಿಕೊಳ್ಳುವ ರಹಸ್ಯವನ್ನು ತಿಳಿಸಲಾಯಿತು. ಹುಲಿಕಲ್ ನಟರಾಜ್ ಪವಾಡ ರಹಸ್ಯ ಬಯಲು ಕಾರ್ಯಕ್ರಮ ನೀಡಿದರು. ಕೆಜಿವಿಎಸ್ ರಾಜ್ಯ ಕಾರ್ಯದರ್ಶಿ ಇ.ಬಸವರಾಜು, ಕಾವೇರಿ ಗ್ರಾಮೀಣ ಬ್ಯಾಂಕ್ ರೀಜನಲ್ ಮ್ಯಾನೇಜರ್ ಮಹದೇವಪ್ಪ, ಕಸಾಪ ಅಧ್ಯಕ್ಷ ಎಚ್.ಕೆ.ಜನಾರ್ದನ್, ಜಿಲ್ಲಾ ಸಂಚಾಲಕ ಎಂ.ಸಿ.ಡೋಂಗ್ರೆ, ಶ್ರೀನಿವಾಸ್ ಕೊಟ್ಟೂರು ಇತರರು ಇದ್ದರು.