ಹೇಮಾವತಿ ಪುನರ್‌ವಸತಿ ಗ್ರಾಮಗಳಿಗೆ ಸೌಲಭ್ಯ ಆಗ್ರಹ
ಸಕಲೇಶಪುರ: ಹೇಮಾವತಿ ಪುನರ್‌ವಸತಿ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಮಳಲಿ ಗ್ರಾಮದ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಹೇಮಾವತಿ ಯೋಜನೆ ಅನುಷ್ಠಾನಗೊಂಡು 40 ವರ್ಷ ಕಳೆದರು ಇಂದಿಗೂ ಪುನರ್‌ವಸತಿ ಗ್ರಾಮಗಳ ಅಭಿವೃದ್ಧಿಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.
ತಾಲೂಕಿನಲ್ಲಿ ಹೇಮಾವತಿ ಹಿನ್ನೀರಿನಿಂದ ಬದುಕು ಕಳೆದುಕೊಂಡಿರುವ ಸುಮಾರು 50 ಕ್ಕೂ ಹೆಚ್ಚಿನ ಗ್ರಾಮಗಳಿದ್ದು ಇಂದಿಗೂ ಹಲವು ಗ್ರಾಮಗಳು ರಸ್ತೆ, ಕುಡಿಯುವ ನೀರಿನಿಂದ ವಂಚಿತವಾಗಿದೆ. ಈ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಸರ್ಕಾರ ಪ್ರತಿವರ್ಷ ಬಿಡುಗಡೆಮಾಡುತ್ತಿರುವ ಅನುದಾನ ತೀರ ಕಡಿಮೆ ಇದೆಯ ಆದ್ದರಿಂದ ಮುಂಬರುವ ದಿನಗಳಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದರು.
ಪಟ್ಟಣದಿಂದ 8 ಕಿ.ಮೀ. ಬಳಸಿ ಗ್ರಾಮ ತಲುಪಬೇಕಿದ್ದ ಮಳಲಿ ಗ್ರಾಮಸ್ಥರ ಅನುಕೂಲಕ್ಕಾಗಿ ಹತ್ತಿರದ ರಸ್ತೆ ನಿರ್ಮಾಣ ಮಾಡಲಾಗಿದ್ದು ಈ ರಸ್ತೆಯನ್ನು ಜಲ್ಲಿ ರಸ್ತೆಯನ್ನಾಗಿ ಪರಿವರ್ತಿಸಲು 18 ಲಕ್ಷ ರು. ವೆಚ್ಚದಲ್ಲಿ ಗುದ್ದಲಿ ಪೂಜೆ ನೆರವೆರಿಸಲಾಗಿದೆ ಎಂದು ಹೇಳಿದರು.
ತಾಪಂ ಅಧ್ಯಕ್ಷ ಮಂಜುಳಾ, ಜಿಪಂ ಸದಸ್ಯೆ ಸುಲೋಚನಾ, ಎಪಿಎಂಸಿ ಅಧ್ಯಕ್ಷ ಸುಪ್ರದೀಪ್ತ ಯಜಮಾನ್, ಪುರಸಭೆ ಅಧ್ಯಕ್ಷ ಸತೀಶ್ ಇತರರು ಇದ್ದರು.