ದ್ವೇಷ- ಅಸೂಯೆಯಿಂದ ಸಾಧನೆ ಶೂನ್ಯ
ಕ.ಪ್ರ.ವಾರ್ತೆ ಅರಸೀಕೆರೆ ನ.26
ಬೃಹತ್ ಜನತಾ ನ್ಯಾಯಾಲಯದಲ್ಲಿ ಸುಮಾರು 1700 ಕ್ಕೂ ಹೆಚ್ಚಿನ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದ್ದು, ತಾಲೂಕು ಮಟ್ಟದಲ್ಲಿ ಅರಸೀಕೆರೆ ಪ್ರಥಮ ಸ್ಥಾನ ಪಡೆದಿದೆ.
ಈ ನಿಟ್ಟಿನಲ್ಲಿ ಮಾನವರು ದ್ವೇಷ- ಅಸೂಯೆಯಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಪಟ್ಟಣದ ಜೆಎಂಎಫ್ಸಿ ಸಿವಿಲ್ ನ್ಯಾಯಾಲಯ ಹಿರಿಯ ನ್ಯಾಯಾಧೀಶೆ ಸರಸ್ವತಿ ವಿ.ಕೋಸಂದರ್ ಕಿವಿಮಾತು ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ ಹಾಗೂ ಪೊಲೀಸ್ ಇಲಾಖೆ ಸಂಯುಕ್ತವಾಗಿ ಪಟ್ಟಣದ ನ್ಯಾಯಾಲಯ ಆವರಣದ ವಕೀಲರ ಸಂಘದ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದ ಮೇರೆಗೆ ತಾಲೂಕು ಕಾನೂನು ಸೇವಾ ಸಮಿತಿ ನೇತೃತ್ವದಲ್ಲಿ ತಾಲೂಕಿನ ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸ್ವಯಂ ಸೇವಾ ಸಂಘ, ಸಂಸ್ಥೆಗಳ ಸಹಕಾರದಲ್ಲಿ ತಾಲೂಕಿನಲ್ಲಿ ಅನೇಕ ಗ್ರಾಮಗಳಲ್ಲಿ ಅನೇಕ ಕಾನೂನು ಅರಿವು ಕಾರ್ಯಕ್ರಮ ಅತ್ಯಂತ ಫಲಪ್ರದವಾಗಿ ನಡೆಸಲಾಗಿದೆ ಎಂದು ಎಂದು ತಿಳಿಸಿದರು.
ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಜನರಲ್ಲಿ ಕಾನೂನುಗಳ ಬಗ್ಗೆ ಹೆಚ್ಚಿನ ಅರಿವು ಉಂಟಾಗಿರುವ ಕಾರಣ ಸಾರ್ವಜನಿಕರು ಈಗಾಗಲೇ ನ್ಯಾಯಾಲಯದ ಮುಂದೆ ಇರುವ ಪ್ರಕರಣಗಳನ್ನು ಪರಸ್ಪರ ರಾಜಿ ಸಂಧಾನದ ಮಾಡಿಕೊಳ್ಳುವ ಮೂಲಕ ಜನತಾ ನ್ಯಾಯಾಲಯದಲ್ಲಿ ಇತ್ಯರ್ಥ ಮಾಡಿಕೊಳ್ಳಲು ಆಸಕ್ತಿಯನ್ನು ವಹಿಸಿದ ಪರಿಣಾಮ ಸುಮಾರು 1700ಕ್ಕೂ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥ ಮಾಡಲು ಸಾಧ್ಯವಾಗಿದ್ದು, ತಾಲೂಕು ಮಟ್ಟದಲ್ಲಿ ಅರಸೀಕೆರೆ ಪ್ರಥಮ ಸ್ಥಾನವಾಗಿದೆ ಎಂದರು. ಪ್ರಧಾನ ಸಿವಿಲ್ ನ್ಯಾಯಾಧೀಶ ದೇವಾನಂದ ಮಾತನಾಡಿ, ಸಂಘಟಿತ ಹೋರಾಟದಿಂದ ಸಫಲತೆ ಸಾಧ್ಯವಾಗುತ್ತದೆ ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದ್ದು, ವಕೀಲರ ಸಂಘದ ಸದಸ್ಯರು ಮತ್ತು ಪೊಲೀಸ್ ಇಲಾಖೆ ಹಾಗೂ ನಾನಾ ಸಂಘ ಸಂಸ್ಥೆಗಳ ಉತ್ತಮ ಸಹಕಾರದ ಜೊತೆಗೆ ಪತ್ರಿಕಾ ಮಾಧ್ಯಮಗಳ ಹೆಚ್ಚಿನ ಪ್ರಚಾರ ಕಾರ್ಯಗಳು ಬೃಹತ್ ಜನತಾ ನ್ಯಾಯಾಲಯದ ಕಲಾಪಗಳಿಗೆ ಪ್ರೇರಕ ಶಕ್ತಿಯಾಗಿ ಕೆಲಸ ಮಾಡಿದ ಕಾರಣ ಈ ಸಂಘಟಿತ ಹೋರಾಟದಿಂದ ನಾವುಗಳು ನಿಶ್ಚಿತವಾದ ಗುರಿಯನ್ನು ಮುಟ್ಟಲು ಸಾಧ್ಯವಾಗಿದೆ. ಸಹಾಯಕ ಸರ್ಕಾರಿ ಅಭಿಯೋಜಕರು ಮತ್ತು ಕಚೇರಿ ಸಿಬ್ಬಂದಿ ವರ್ಗ ರಜಾದಿನಗಳನ್ನು ಲೆಕ್ಕಿಸದೆ ತಮ್ಮೊಂದಿಗೆ ಸಹಕಾರ ನೀಡಿದೆ ಎಂದು ಸ್ಮರಿಸಿದರು. ಇಂತಹ ಸಹಕಾರವನ್ನು ಸದಾಕಾಲ ನೀಡಬೇಕೆಂದು ಕೋರಿದರು.
ದ್ವೇಷ-ಅಸೂಯೆ ಭಾವನೆ ದೂರವಾಗಲಿ: ಸಹಾಯಕ ಸರ್ಕಾರಿ ಅಭಿಯೋಜಕಿ ಮಮತಾ ಮಾತನಾಡಿ, ಜನತಾ ನ್ಯಾಯಾಲಯದ ಕಲಾಪ ನಡೆಸುವ ಮೂಲಕ ಪ್ರಕರಣಗಳನ್ನು ತ್ವರಿಗತಿಯಲ್ಲಿ ಇತ್ಯರ್ಥ ಮಾಡುವ ಮೂಲಕ ಪರಸ್ಪರ ಕಕ್ಷಿದಾರರಲ್ಲಿದ್ದ ದ್ವೇಷ-ಅಸೂಯೆ ಭಾವನೆಗಳನ್ನು ದೂರ ಮಾಡಿರುವ ನ್ಯಾಯಾಲಯವು ಅವರ ನಡುವೆ ಸ್ನೇಹ ಸೇತುವೆ ಕಟ್ಟುವ ಉದ್ದೇಶವನ್ನು ಅತ್ಯಂತ ಯಶ್ವಸಿಯಾಗಿ ನಿರ್ವಹಿಸಿದೆ ಎಂದರು.
ಅಪರ ಸಿವಿಲ್ ನ್ಯಾಯಾಧೀಶ ಪ್ರಕಾಶ್ ಚನ್ನಪ್ಪ ಕುರುಬೆಟ್ ಮತ್ತಿತರರು ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷಸರ್ವೇಶ್ ಅಧ್ಯಕ್ಷತೆ ವಹಿಸಿದ್ದರು. ಕೆ.ಎ.ರವಿಶಂಕರ್, ಕೇಶವಮೂರ್ತಿ,ನಂದೀಶ್ ಸೇರಿದಂತೆ ಅನೇಕ ವಕೀಲರು ಉಪಸ್ಥಿತರಿದ್ದರು.