ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ'
ಹಾಸನ: ರೈತರು ಮಣ್ಣು ಪರೀಕ್ಷೆ ಆಧಾರಿತ ಮತ್ತು ಬೆಳೆಗಳಲ್ಲಿ ಪೋಷ ಕಾಂಶಗಳ ಕೊರತೆಗೆ ಅನುಗುಣವಾಗಿ ರಸಾಯನಿಕ ಗೊಬ್ಬರ ಬಳಕೆ ಮಾಡಬೇಕು ಹಾಗೂ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಮಣ್ಣು ವಿಜ್ಞಾನಿ ಡಾ.ಎಸ್. ಚನ್ನಕೇಶವ ಕಿವಿಮಾತು ಹೇಳಿದರು. ಕಂದಲಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮೂರು ದಿನಗಳ ಕಾಲ 'ಬಾಳೆಯಲ್ಲಿ ಸಮಗ್ರ ಬೆಳೆ ನಿರ್ವಹಣೆ' ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರಿ. ಬಾಳೆಯ ಅಧಿಕ ಮತ್ತು ಗುಣಮಟ್ಟದ ಇಳುವರಿಗೆ ಆಧುನಿಕ ತಂತ್ರಜ್ಞಾನ ಬಳಕೆ ಮಾಡಬೇಕೆಂದು ಸಲಹೆ ನೀಡಿದರು.
ಸಹಾಯಕ ಕೃಷಿ ನಿರ್ದೇಶಕಿ ಕೋಕಿಲಾ ಮಾತನಾಡಿ, ಕೆವಿಕೆಯಿಂದ ದೊರೆಯುವ ಆಧುನಿಕ ತಾಂತ್ರಿಕತೆಗಳ ಪೂರ್ಣ ಮಾಹಿತಿ
ಅರ್ಥೈಸಿಕೊಂಡು ತಮ್ಮ ಕ್ಷೇತ್ರ ಗಳಲ್ಲಿ ಅಳವಡಿಸಿಕೊಳ್ಳುವುದರ ಜೊತೆಗೆ ಇತರೆ ರೈತರಿಗೂ ಮಾರ್ಗದರ್ಶಿಯಾಗಿ ಉತ್ತಮ ಇಳುವರಿ ಮತ್ತು ಲಾಭ ಗಳಿಸಲು ಸಹಕಾರಿಯಾಗಬೇಕೆಂದು ತಿಳಿಸಿದರು. ತೋಟಗಾರಿಕೆ ತಜ್ಞ ಡಾ.ಟಿ.ಎಸ್.ಮಂಜುನಾಥಸ್ವಾಮಿ ಉತ್ತಮ ಗೆಡ್ಡೆಗಳ ಆಯ್ಕೆ ಹಾಗೂ ಅಂಗಾಂಶ ಬಾಳೆ ಆಯ್ಕೆ ವಿಧಾನ, ಬಿತ್ತನೆಗೆ ಸೂಕ್ತ ಸಮಯ, ತಳಿಗಳು ನೀರಾವರಿ ವಿಧಾನ, ಅಂತರ ಬೆಳೆಗಳು ಹಾಗೂ ಮಾರು ಕಟ್ಟೆಯ ಬಗ್ಗೆ ವಿವರ ನೀಡಿ ರೈತರು ಅಧಿಕೃತ ಸರಬರಾಜುದಾರರಿಂದ ಪಡೆದು ಶಿಫಾರಸ್ಸಿನ ರೀತಿಯಲ್ಲಿ ಬೆಳೆ ಮಾಡಿದರೆ, ಉತ್ತಮ ಇಳುವರಿ ಮತ್ತು ಲಾಭ ಪಡೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು. ಡಾ.ಪಂಕಜ ರೈತರು ಮೂರು ದಿನದಲ್ಲಿ ಪಡೆದ ಮಾಹಿತಿಯನ್ನು ತಮ್ಮ ಬೆಳೆಯಲ್ಲಿ ಅಳವಡಿಸಿ ಮಾದರಿ ರೈತರಾಗಿ ಸಂಘಟಿತರಾಗುವಂತೆ ಸಲಹೆ ನೀಡಿದರು. ಕೆವಿಕೆ ಮುಖ್ಯಸ್ಥ ಡಾ.ಬಿ.ಎಸ್. ಬಸವರಾಜು ಸೇರಿದಂತೆ ಮತ್ತಿತರರು ಇದ್ದರು. ಡಾ.ಎ.ಸಿ.ಗಿರೀಶ್ ನಿರೂಪಿಸಿದರು, ಶೆಟ್ಟಿಗೆ ಕನ್ನಾಯಕನಹಳ್ಳಿ ರೈತರು ಶಿಬಿರದಲ್ಲಿ ಪಾಲ್ಗೊಂಡಿದ್ದರು.