ಹಿರಿಯರ ಸ್ಫೂರ್ತಿ ಕಿರಿಯರಿಗೆ ಮಾದರಿಯಾಗಲಿ
ಕ.ಪ್ರ.ವಾರ್ತೆ ಹಾಸನ ನ.26
ಭಾರತದ ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಗಾಂಧೀಜಿಯವರಿಗೆ
ಪ್ರಥಮ ಪ್ರಧಾನಿ ಜವಹರಲಾಲ ನೆಹರೂ ಅವರು ಬೆನ್ನುಲುಬಾಗಿ ಅವಿರತವಾಗಿ ಶ್ರಮಿಸಿದ್ದಾರೆ. ಈ ನಿಟ್ಟಿನಲ್ಲಿ ಅವರ ಸ್ಮರಣೆ ಅವಿಸ್ಮರಣೀಯ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ ಅಭಿಪ್ರಾಯಪಟ್ಟರು.
ನೆಹರೂ ಯುವ ಕೇಂದ್ರ ಹಾಗೂ ಸರಸ್ವತಿ ಮಹಿಳಾ ಕಲಾ ಸಮಾಜದ ಆಶ್ರಯದಲ್ಲಿ ನಗರದ ಡಿ.ದೇವರಾಜು ಅರಸು ಭವನದಲ್ಲಿ ನೆಹರೂ ಜನ್ಮದಿನಾಚರಣೆ ಅಂಗವಾಗಿ ಇತ್ತೀಚೆಗೆ ಏರ್ಪಡಿಸಿದ್ದ ನೆಹರೂ ಯುವ ಕೇಂದ್ರ ಸಂಸ್ಥಾಪನಾ ದಿನ ಹಾಗೂ ಮಕ್ಕಳ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಹಿತಕ್ಕಾಗಿ ಅಂದು ಸಾವಿರಾರು ಮಹನೀಯರು ಸೆರೆವಾಸ ಅನುಭವಿಸಿದರು. ಆದರೆ ಇಂದು ಭ್ರಷ್ಟಾಚಾರ, ಕಳ್ಳತನ, ಕೊಲೆ, ವಂಚನೆ, ಸುಲಿಗೆ, ಮಹಿಳೆಯರ ಮೇಲೆ ಅತ್ಯಾಚಾರದಂಥ ಪ್ರಕರಣಗಳಲ್ಲಿ ಭಾಗಿಗಳಾಗಿ ಜೈಲಿಗೆ ಹೋಗಿಬರುವುದೇ ಒಂದು ಫ್ಯಾಷನ್ನಾಗಿದೆ ಎಂದು ನೊಂದು ನುಡಿದರು.
ಯುವ ಪೀಳಿಗೆ ಎಚ್ಚೆತ್ತುಕೊಳ್ಳಲಿ: ಈ ನಿಟ್ಟಿನಲ್ಲಿ ಇಂದಿನ ಯುವ ಪೀಳಿಗೆ ಎಚ್ಚೆತ್ತು ರಾಷ್ಟ್ರದ ಭಾವೈಕ್ಯತೆಯನ್ನು ಕಾಪಾಡಿ ಕೊಳ್ಳುವುದರ ಮೂಲಕ ದೇಶದ ಶಕ್ತಿಯಾಗಬೇಕು ಎಂದ ಅವರು ಭಗತ್ಸಿಂಗ್, ರಾಜಗುರು, ಸುಖದೇವ್ ಅವರ ರಾಷ್ಟ್ರಪ್ರೇಮವಿವರಿಸಿ, ಪ್ರತಿಯೊಬ್ಬರು ಸಮಯಕ್ಕೆ ಮಹತ್ವ ನೀಡಿ ಮೌಲ್ಯ ಯುತ ಬದುಕುರೂಪಿಸಿಕೊಳ್ಳ ಬೇಕು ಎಂದು ಸಲಹೆ ನೀಡಿದರು. ಮಲ್ನಾಡ್ ನರ್ಸಿಂಗ್ ಹೋಂ ವೈದ್ಯೆ ಡಾ.ಸಾವಿತ್ರಿ ಮಾತನಾಡಿ, ತಾಯಿ ಮಗುವನ್ನು ತನ್ನ ಹೊಟ್ಟೆಯಲ್ಲಿದ್ದಾಗಲಿಂದಲೇ ಪ್ರೀತಿಸುವುದನ್ನು ಕಲಿಯ ಬೇಕು. ಗಂಡು-ಹೆಣ್ಣು ಎಂಬ ಭೇದ ಮಾಡದೆ ಇಬ್ಬರನ್ನು ಸಮಾನವಾಗಿ ಬೆಳೆಸಬೇಕು. ಹೆಣ್ಣು ಎಲ್ಲಾ ಕಾರ್ಯ ಕ್ಷೇತ್ರದಲ್ಲೂ ಮುಂದಾಗಬೇಕು ಎಂದ ಕಿವಿಮಾತು ಹೇಳಿದರು.
ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಲಹೆಗಾರ ಕೆ.ಎಸ್. ಬಸವರಾಜ್, ರುಡ್ಸೆಟ್ ನಿರ್ದೇಶಕ ರವಿ, ನೆಹರೂ ಯುವ ಕೇಂದ್ರದ ಸಲಹಾ ಸಮಿತಿ ಸದಸ್ಯ ಮಹೇಶ್ ಮತ್ತಿತರರು ಮಾತನಾಡಿದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಶ್ರಮಿಸಿದ ಭಾರತ್ಸ್ಕೌಟ್ಸ್ ಮತ್ತು ಗೈಡ್ಸ್ನ ಡಿ.ಟಿ.ಸಿ. ಕಾಂಚನಮಾಲ, ಸ್ಫೂರ್ತಿ ಮಹಿಳಾ ಸಮಾಜದ ಅಧ್ಯಕ್ಷೆ ಎಂ.ಎಸ್. ಪದ್ಮಾವತಿ ಮಂಜುನಾಥ್, ಲಕ್ಷ್ಮಿದೇವಿ ಯುವತಿ ಮಂಡಳಿ ಅಧ್ಯಕ್ಷೆ ಎಂ.ಕೆ. ಸರೋಜಾರಂಗಸ್ವಾಮಿ, ಕಾವೇರಿ ಸಮುದಾಯ ಸಂಘದ ಅಧ್ಯಕ್ಷೆ ಶಾಯಿದಾ ಖಾತೂನ್, ಕಂಪ್ಯೂಟರ್ ಆಪರೇಟರ್ ಲತಾಬಾಯಿ, ಸಂಜೀವಿನಿ ಸಹಕಾರಿ ಆಸ್ಪತ್ರೆಯ ದಾದಿ ಸೆಲ್ವಮೇರಿ ಆಂಟೋನಿ, ರಾಷ್ಟ್ರೀಯ ಈಜುಪಟು ಸೋನಿಕಾ ಎಂ. ರಾಜ್, ವಿಜಯ ಆಂಗ್ಲ ಮಾಧ್ಯಮ ಶಾಲೆಯ ದೀಪ್ತಿಯಾಮಿನಿ, ಕೆಎಸ್ಆರ್ಪಿ11ನೇ ಪಡೆಯ ವೈ.ಬಿ. ಕಾಂತರಾಜು ಯಲಗುಂದ ಮತ್ತಿತರರಿಗೆ ವರ್ಷದ ಉತ್ತಮ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ವೇಳೆ ಚಿತ್ರಕಲೆ ಹಾಗೂ ಛದ್ಮವೇಷ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸುಧಾ ಹೆಚ್.ಆರ್. ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.