ಅಥ್ಲೆಟಿಕ್ಸ್; ರಹತ್, ರವಿ ಪ್ರಥಮ
ಹಾಸನ: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 14 ವರ್ಷ ವಯೋವುತಿ ಬಾಲಕ/ಬಾಲಕಿಯರ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ರಹತ್ ಹಾಗೂ ರವಿಕುಮಾರ್ ಪ್ರಥಮ ಸ್ಥಾನ ಪಡೆದಿದ್ದಾರೆ. ಪ್ರಥಮ ದಿನದಂದು 600 ಮೀಟರ್ ಎತ್ತರ ಜಿಗಿತ, ಗುಂಡು ಎಸೆತ ಹಾಗೂ ಚಕ್ರ ಎಸೆತ ಸ್ಪರ್ಧೆ ನಡೆದಿದ್ದು, ಬಾಲಕಿಯರ ಚಕ್ರ ಎಸೆತದಲ್ಲಿ ಉತ್ತರ ಕನ್ನಡ ಜಿಲ್ಲೆಯ ರಹತ್ ಎನ್. ಸೈಯದ್ 29.41 ಮೀಟರ್ ದೂರ ಎಸೆದು ಪ್ರಥಮ ಸ್ಥಾನವನ್ನು ಗಿಟ್ಟಿಸಿಕೊಂಡರೆ ಉಡುಪಿಯ ಜಿ.ಕೆ. ಮೇಘನಾ 25.50 ಮೀಟರ್ ದೂರ ಎಸೆದು ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡರು. ಬೆಂಗಳೂರಿನ ಕಲಾವತಿ ಬಿ. ಶೈಲಿ 25.15 ಮೀಟರ್ ದೂರ ಎಸೆದು ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಬಾಲಕರ ಗುಂಡು ಎಸೆತ ಸ್ಪರ್ಧೆಯಲ್ಲಿ ಬಳ್ಳಾರಿ ರವಿಕುಮಾರ್ ಕೆ.ಎಸ್. 11.21 ಮೀಟರ್ ದೂರ ಎಸೆದು ಪ್ರಥನ ಸ್ಥಾನ, ಮೈಸೂರಿನ ಮನುಷ್ 10.96 ಮೀಟರ್ ದೂರ ಎಸೆದು ದ್ವಿತೀಯ ಸ್ಥಾನ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಂಜುನಾಥ್ ಎಚ್. 10.89 ಮೀಟರ್ ದೂರ ಎಸೆದು ತೃತೀಯ ಸ್ಥಾನ ಪಡೆದುಕೊಂಡರು. ಬೆಂಗಳೂರು, ಮೈಸೂರು, ಗುಲ್ಬರ್ಗ ಹಾಗೂ ಬೆಳಗಾವಿ ವಿಭಾಗದಿಂದ 34 ಶೈಕ್ಷಣಿಕ ಜಿಲ್ಲೆ ಹಾಗೂ 2 ಕ್ರೀಡಾ ಶಾಲೆಯ ಕ್ರೀಡಾಪಟುಗಳು ಭಾಗವಹಿಸಿದ್ದು ಇದರಲ್ಲಿ 731 ಬಾಲಕರು ಹಾಗೂ 639 ಬಾಲಕಿಯರು ಒಟ್ಟು 1370 ಕ್ರೀಡಾಪಟುಗಳು ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಕ್ರೀಡಾ ಪಟುಗಳು ಸ್ಪರ್ಧಿಸಿದ್ದಾರೆ. ಸ್ಪರ್ಧೆಯು 600, 400, 200, 100 ಮೀ. ಓಟ ಹಾಗೂ ಎತ್ತರ ಜಿಗಿತ, ಗುಂಡು ಎಸೆತ, ತಟ್ಟೆ ಎಸೆತ, 800 ಮೀ. ಹರ್ಡಲ್ಸ್, 4100 ಮೀ. ರಿಲೆ ನಡೆಯುತ್ತಿದ್ದು ಕ್ರೀಡಾಪಟುಗಳು ಸ್ಪರ್ಧಾ ಮನೋಭಾವದಿಂದ ಉತ್ಸುಕರಾಗಿ ಭಾಗವಹಿಸಿದ್ದು ಕಂಡು ಬಂತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಕ್ರೀಡಾಪಟುಗಳಿಗೆ ಶಿಕ್ಷಣ ಇಲಾಖೆಯಿಂದ ಬಾಲಕಿಯರಿಗೆ ಹಾಗೂ ಬಾಲಕರಿಗೆ ಪ್ರತ್ಯೇಕ ತಂಗುವ ವ್ಯವಸ್ಥೆಯನ್ನು ವಿವಿಧ ಶಾಲೆಗಳಲ್ಲಿ ಮಾಡಲಾಗಿದೆ. ಕ್ರೀಡಾಪಟುಗಳಿಗೆ ಅಗತ್ಯವಿರುವ ಎಲ್ಲಾ ಮೂಲ ಸೌಲಭ್ಯ ಅಚ್ಚುಕಟ್ಟಾಗಿ ಮಾಡಲಾಗಿದೆ. ಕ್ರೀಡಾಪಟುಗಳು ಯಾವುದೇ ಅಸಹನೆ ಇಲ್ಲದೆ ಕ್ರೀಡೆಯಲ್ಲಿ ಭಾಗವಹಿಸಲು ಇಲಾಖೆ ವ್ಯವಸ್ಥೆ ಕಲ್ಪಿಸಿದ್ದು ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರೋತ್ಸಾಹದಾಯಕ ವಾತಾವರಣ ಸೃಷ್ಟಿಸಲಾಗಿದೆ.
ಗೃಹಿಣಿ ನಾಪತ್ತೆ
ಸಕಲೇಶಪುರ: ಪಟ್ಟಣದ ನಾಗರಾಜ್ ಎಂಬವರ ಪತ್ನಿ ಸ್ವಾತಿ(21) ಇತ್ತೀಚೆಗೆ ಪಟ್ಟಣದ ಕುಶಾಲನಗರ ಬಡಾವಣೆಯಲ್ಲಿರುವ ತಾಯಿ ಮನೆಗೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿದ್ದಾರೆ. ಪತಿ ನಾಗರಾಜ್ ದೂರು ನೀಡಿದ್ದಾರೆ.