ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅರಸೀಕೆರೆ; ಅನಧಿಕೃತ ಅಂಗಡಿಗಳ ತೆರವು

Mainashree
Updated On : 27 Nov 2013, 11:35 am

ಕನ್ನಡಪ್ರಭ ವಾರ್ತೆ, ಆಲೂರು, ನ.27
ಪಟ್ಟಣದ ಸಾರ್ವಜನಿಕ ಗ್ರಂಥಾಲಯ ರಸ್ತೆಯಲ್ಲಿರುವ ಮಾಲೇಕಲ್ ತಿರುಪತಿ ವೆಂಕಟರಮಣ ದೇವಾಲಯಕ್ಕೆ ಸೇರಿದ ವೆಂಕಟೇಶ್ವರ ಚಿತ್ರಮಂದಿರ ಈಗ ಕಲಾಭವನವಾಗಿ ಮಾರ್ಪಾಡಾಗುತ್ತಿದ್ದು, ಪಕ್ಕದಲ್ಲಿರುವ ಖಾಲಿ ನಿವೇಶನ ಮತ್ತು ಚಿತ್ರಮಂದಿರದ ಕಟ್ಟಡಗಳಲ್ಲಿ ಇದ್ದ ಅನಧಿಕೃತ ಅಂಗಡಿಗಳನ್ನು ತಹಸೀಲ್ದಾರ್ ಕೇಶವಮೂರ್ತಿ ನೇತೃತ್ವದಲ್ಲಿ ಬುಧವಾರ ಜೆಸಿಬಿ ಯಂತ್ರಗಳ ಮೂಲಕ ತೆರವುಗೊಳಿಸಲಾಯಿತು. ಮಾಲೇಕಲ್ ತಿರುಪತಿ ವೆಂಕಟರಮಣ ದೇವಾಲಯಕ್ಕೆ ಸೇರಿದ ಸ್ಥಳವನ್ನು ಚಿತ್ರಮಂದಿರಕ್ಕೆ ಸುಮಾರು 30 ವರ್ಷಗಳ ಕಾಲ ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆ ಅವಧಿ ಮುಗಿದ ಹಿನ್ನೆಲೆಯಲ್ಲಿ ಈ ಚಿತ್ರಮಂದಿರವನ್ನು ತಾಲೂಕು ಆಡಳಿತ ಮುಜರಾಯಿ ಇಲಾಖೆ ವಶಕ್ಕೆ ಪಡೆದು ಕಲಾವಿದರಿಗೆ ವೇದಿಕೆ ಕಲ್ಪಿಸುವ ದೆಸೆಯಿಂದ ಶಾಸಕ ಕೆ.ಎಂ. ಶಿವಲಿಂಗೇಗೌಡ ಇದನ್ನು ಕಲಾಭವನವನ್ನಾಗಿ ಮಾರ್ಪಾಡು ಮಾಡಲು ನಿರಂತರ ಪ್ರಯತ್ನದಿಂದಾಗಿ ಸರ್ಕಾರದಿಂದ ಹಣ ಮಂಜೂರಾತಿ ಮಾಡಿಸಿದ್ದರಿಂದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಈಗ ಪಕ್ಕದಲ್ಲಿದ್ದ ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ತಹಸೀಲ್ದಾರ್ ಕೇಶವಮೂರ್ತಿ ಚಾಲನೆ ನೀಡಿದರು. ನಂತರ ಮಾತನಾಡಿದ ತಹಸೀಲ್ದಾರ್ ಕೇಶವಮೂರ್ತಿ, ಬಹುದಿನಗಳಿಂದ ನೆನಗುದಿಗೆ ಬಿದ್ದಿದ್ದ ನಿವೇಶನ ಹಾಗೂ ಕಟ್ಟಡಗಳಲ್ಲಿದ್ದ ಅಂಗಡಿಗಳನ್ನು ಸರ್ಕಾರದ ಆದೇಶದಂತೆ ತೆರವುಗೊಳಿಸಲಾಗಿದೆ. ಶೀಘ್ರದಲ್ಲಿಯೇ ಚಿತ್ರಮಂದಿರವನ್ನು ಕಲಾಭವನವನ್ನಾಗಿ ಪರಿವರ್ತಿಸುವ ಕಾರ್ಯ ಮುಕ್ತಾಯ ಹಂತದಲ್ಲಿದ್ದು ಸದ್ಯದಲ್ಲಿಯೇ ಕಲಾವಿದರಿಗೆ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗುವುದು. ನಾಗರಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಸಬಾ ರಾಜಸ್ವ ನಿರೀಕ್ಷಕ ನಂಜುಂಡಪ್ಪ, ಮುಜರಾಯಿ ಗುಮಾಸ್ತ  ಲೋಕೇಶಯ್ಯ, ಗ್ರಾಮ ಲೆಕ್ಕಿಗ ಬಾಲಕೃಷ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement