ಎಂಇಎಸ್ ಶಾಸಕರ ಗಡಿಪಾರಿಗೆ ಆಗ್ರಹ
ಚನ್ನರಾಯಪಟ್ಟಣ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಸಭಾ ಕಲಾಪದಲ್ಲಿ ಕನ್ನಡಿಗರಿಗೆ ಅಪಮಾನ ಮಾಡುವ ಮಾತನಾಡಿದ ಎಂಇಎಸ್ ಶಾಸಕರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಪಟ್ಟಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡಪರ ವಿವಿಧ ಸಂಘಟನೆಗಳು ಮೆರವಣಿಗೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಿಂದ ಎಂಇಎಸ್ ಶಾಸಕ ಸಂಭಾಜೀರಾವ್ ಪಾಟೀಲ್ ಹಾಗೂ ಅರವಿಂದ ಪಾಟೀಲ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆತನನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ತಹಸೀಲ್ದಾರ್ ಡಾ. ಎಚ್.ಎಲ್. ನಾಗರಾಜು ಅವರಿಗೆ ಮನವಿ ಸಲ್ಲಿಸಿದರು.
ಅಧಿವೇಶನದಲ್ಲಿ ಕನ್ನಡ ಭಾಷೆಗೆ ಅಪಮಾನ ಮಾಡಿದ್ದಲ್ಲದೆ, ಕನ್ನಡಿಗರನ್ನು ಕೀಳು ಮಟ್ಟದಲ್ಲಿ ಮಾತನಾಡಿರುವ ಸಂಭಾಜೀರಾವ್ ಪಾಟೀಲ್ ಅವರನ್ನು ಶಾಸಕ ಸ್ಥಾನದಿಂದ ಪದಚ್ಯುತಿಗೊಳಿಸಿ ಆತನನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಬೆಳಗಾವಿ ಕನ್ನಡಿಗರ ಆಸ್ತಿ ಅದು ಎಂಇಎಸ್ ಸಂಘಟನೆಗೆ ಸೇರಿದ್ದಲ್ಲ. ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕನ್ನಡಿಗರು ಸುಮ್ಮನಿದ್ದೇವೆ. ತಮ್ಮನ್ನು ಕೆಣಕಬೇಡಿ, ಕೆಣಕಿದರೆ ಮೋರೆಗೆ ಬೆಂಗಳೂರಿನಲ್ಲಿ ಅವಮಾನ ಮಾಡಿದ್ದೇವೆ. ಆದರೆ ತಮಗೆ ಬೆಳಗಾವಿನಲ್ಲಿಯೇ ಇಂತಹ ಅಪಮಾನವಾಗುತ್ತದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಎಚ್.ಎನ್. ಲೋಕೇಶ್ ಎಚ್ಚರಿಸಿದರು.
ಕನ್ನಡಿಗರಿಗೆ ಅಪಮಾನ ಮಾಡಿದ್ದನ್ನು ಖಂಡಿಸಲು ಬೆಳಗಾವಿ ಕಡೆಗೆ ಪ್ರಯಾಣ ಬೆಳೆಸುತ್ತಿರುವ ಕನ್ನಡ ಪರ ಸಂಘಟನೆಗಳನ್ನು ತಡೆದು ಅವರ ಮೇಲೆ ದೂರು ದಾಖಲಿಸುತ್ತಿರುವುದು ಖಂಡನೀಯ. ದೇಶ ಭಾಷೆಗೆ ಅಪಮಾನವಾದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸಹಕಾರ ನೀಡಬೇಕು ಎಂದು ಕೋರಿದರು.
ಕೆಂಪೇಗೌಡ ವೇದಿಕೆ ಅಧ್ಯಕ್ಷ ಆನಂದ್ ಕಾಳೇನಹಳ್ಳಿ ಮಾತನಾಡಿ, ಎಂಇಎಸ್ನ ಇಬ್ಬರು ಶಾಸಕರು ತಮ್ಮ ನಾಡಿನಲ್ಲಿ ಹುಟ್ಟಿ ತಮ್ಮ ಭಾಷೆಗೆ ಅಪಮಾನಪಡಿಸುತ್ತಿದ್ದರೆ, ಉಳಿದ 222 ಮಂದಿ ಶಾಸಕರಿಗೆ ತಮ್ಮ ಭಾಷೆ ಬಗ್ಗೆ ಅಭಿಮಾನವಿಲ್ಲದಂತೆ ಕಾಣುತ್ತದೆ. ಭಾಷೆ ನಾಡಿನ ಬಗ್ಗೆ ಅಭಿಮಾನವಿದ್ದರೆ ಎಲ್ಲರೂ ಒಟ್ಟಾಗಿ ಸೇರಿ ಅವರನ್ನು ಅಧಿವೇಶನ ಮುಗಿಯುವವರಗೆ ಹೊರಗಿಡುವಂತೆ ಆಗ್ರಹಿಸುತ್ತಿದ್ದರು ಎಂದು ತಿಳಿಸಿದರು.
ತಾಲೂಕು ಕರವೇ ಅಧ್ಯಕ್ಷ ಮಧು ಕರಡೆ, ಕರ್ನಾಟಕ ಸಮರ ಸೇನೆ ಅಧ್ಯಕ್ಷ ಭರತ್ಗೌಡ, ರೈತ ಸಂಘದ ತಾಲೂಕು ಘಟಕ ಅಧ್ಯಕ್ಷ ಮಂಜೇಗೌಡ, ಕಸಾಪ ಗೌರವಾಧ್ಯಕ್ಷ ಅಶೋಕ್, ತಾಲೂಕು ಕಸಾಪ ಕಾರ್ಯದರ್ಶಿಗಳಾದ ಶಿವನಗೌಡ ಪಾಟೀಲ್, ಶಿವರಾಂ, ಡಾ. ರಾಜ್ಕುಮಾರ್ ಅಭಿಮಾನಿ ಸಂಘದ ಪುಟ್ಟಣ್ಣ ಇದ್ದರು.