ಟ್ಯಾಂಕರ್ ಚಾಲಕರ ಧರಣಿ 2ನೇ ದಿನಕ್ಕೆ
ಕನ್ನಡಪ್ರಭ ವಾರ್ತೆ, ಹಾಸನ, ನ.27
ಪೆಟ್ರೋಲ್ ಬಂಕ್ ಮಾಲೀಕರಿಂದ ಕಿರುಕುಳ ತಾಳಲಾರದೆ ಚಾಲಕ ಆತ್ಮಹತ್ಯೆಗೆ ಯತ್ನಿಸಿದ್ದನ್ನು ಖಂಡಿಸಿ ಟ್ಯಾಂಕರ್ ಚಾಲಕರು ಮತ್ತು ನಿರ್ವಾಹಕರು ಕೆಲಸವನ್ನು ಸ್ಥಗಿತಗೊಳಿಸಿ ನಡೆಸುತ್ತಿರುವ ಪ್ರತಿಭಟನೆ ಬುಧವಾರ ಎರಡನೇ ದಿನದಲ್ಲಿ ಮುಂದುವರಿದಿದೆ.
ನಗರದ ಬೈಪಾಸ್ ರಸ್ತೆ ಬಳಿ ಇರುವ ಎಚ್ಪಿಸಿಎಲ್ ಪೆಟ್ರೋಲ್ ಬಂಕ್ನ ಟ್ಯಾಂಕರ್ ಚಾಲಕರು ಮತ್ತು ನಿರ್ವಾಹಕರು ಕೆಲಸವನ್ನು ಸ್ಥಗಿತಗೊಳಿಸಿ ಕಚೇರಿ ಎದುರು ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಟ್ಯಾಂಕರ್ ಚಾಲಕ ರಘು ಎಂಬಾತನೇ ಬಂಕ್ ಮಾಲೀಕರ ಕಿರುಕುಳ ತಾಳಲಾರದೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.
ಲೋಡ್ ಮಾಡಿಕೊಂಡು ಹೋಗುವಾಗ ಹಾಗೂ ಇತರೆ ಕಾರಣಕ್ಕಾಗಿ ಪ್ರತಿನಿತ್ಯ ಬಂಕ್ ಮಾಲೀಕರು ಅವಾಚ್ಯ ಪದಗಳಿಂದ ನಿಂದಿಸಿ ಅನುಮಾನದ ರೀತಿಯಲ್ಲಿ ನೋಡುತ್ತಿದ್ದರು. ಅವರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದ ಡೆತ್ನೋಟನ್ನು ಪ್ರತಿಭಟನಾಕಾರರು ಪ್ರದರ್ಶಿಸಿದರು.
ಈಗ ನಗರದ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಈ ಕೂಡಲೇ ಅತನಿಗೆ ನ್ಯಾಯ ನೀಡಿ ಪರಿಹಾರ ನೀಡಬೇಕು. ಟ್ಯಾಂಕರ್ ಲೋಡಿಗೆ ಹೋದರೆ ವ್ಯವಸ್ಥಾಪಕರು ಚಾಲಕ ಮತ್ತು ನಿರ್ವಾಹಕರ ಬಗ್ಗೆ ಕೀಳಾಗಿ ಮಾತನಾಡುತ್ತಾರೆ. ಅವರ ಎದುರು ಉತ್ತರ ನೀಡಲು ಮುಂದಾದರೆ ಲೋಡಿಗೆ ಬರಲೇ ಬೇಡಿ ಎಂದು ಗದರಿಸಲಾಗುತ್ತಿದೆ ಎಂದು ದೂರಿದರು.
ಎಚ್ಪಿಸಿಎಲ್ ಪೆಟ್ರೋಲ್ ಬಂಕ್ ಒಳಗೆ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಕನ್ನಡ ಬರದೆ ಇತರೆ ಭಾಷೆಯಲ್ಲಿ ಮಾತನಾಡುತ್ತಾರೆ ನಮಗೆ ಅರ್ಥವಾಗುವುದಿಲ್ಲ. ಲೋಡಿನಿಂದ ಹೊರಗೆ ಬರಲು ಸಿಬ್ಬಂದಿಯವರಿಗೆ ಲಂಚ ನೀಡಬೇಕು. ಭದ್ರತೆ ಇಲ್ಲದೆ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಹುಣಸೂರು ಪೆಟ್ರೋಲ್ ಬಂಕ್ ಮಾಲೀಕರು ಮತ್ತು ಭೈರವೇಶ್ವರ ಪೆಟ್ರೋಲ್ ಬಂಕ್ ಮಾಲೀಕ ಶಿವಕುಮಾರ್ ಅವರು ಚಾಲಕರು ಹಾಗೂ ನಿರ್ವಾಹಕರಿಗೆ ತೀವ್ರ ಕಿರುಕುಳ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನ್ಯಾಯ ಸಿಗುವವರೆಗೂ ನಮ್ಮ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕರವೇ ಕಾರ್ಯಕರ್ತರು, ಟ್ಯಾಂಕರ್ ಚಾಲಕರಾದ ಪ್ರದೀಪ್, ರವಿ, ಉಮೇಶ್, ಪುನೀತ್, ಆನಂದ್, ಶ್ರೀಧರ್ ಇತರರು ಭಾಗವಹಿಸಿದ್ದರು.