ಡಿ.1ರಿಂದ ಮೆಕ್ಕೆಜೋಳ ಖರೀದಿ ಕೇಂದ್ರ
ಹಾಸನ: ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ಅರಸೀಕೆರೆ ತಾಲೂಕಿನ ಜಾವಗಲ್, ಗಂಡಸಿ, ಚನ್ನರಾಯಪಟ್ಟಣ, ಹೊಳೆನರಸೀಪುರ, ಅರಕಲಗೂಡು, ಬೇಲೂರು, ಹಾಸನ ಸೇರಿದಂತೆ ಒಟ್ಟು 7 ಕಡೆ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಡಿ.1ರಿಂದ ಪ್ರಾರಂಭಿಸುವಂತೆ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದ ಬುಧವಾರ ಜಿಲ್ಲಾ ಟಾಸ್ಕ್ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಖರೀದಿ ಕೇಂದ್ರ ತೆರೆಯಲು ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿಯವರು ಮುಂದಿನ ಮಾರ್ಚ್ 31ರವರೆಗೆ ಅಥವಾ ಮುಂದಿನ ಆದೇಶದವರೆಗೆ ಈ ಖರೀದಿ ಪ್ರಕ್ರಿಯೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದರು.
ಖರೀದಿ ಕೇಂದ್ರದ ಉಸ್ತುವಾರಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕರು ನೋಡಿಕೊಳ್ಳುವಂತೆ, ಗೋದಾಮು ಮತ್ತು ದಾಸ್ತಾನು ಉಸ್ತುವಾರಿಯನ್ನು ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ವ್ಯವಸ್ಥಾಪಕರು ನೋಡಿಕೊಳ್ಳುವಂತೆ ತಿಳಿಸಿದರು.
ಈಗಾಗಲೇ ಕೊಬ್ಬರಿ ಖರೀದಿಗಾಗಿ ಕೇಂದ್ರ ತೆರೆದು ಕೊಬ್ಬರಿ ಖರೀದಿಸಿದ್ದು, ಕೆಲವು ರೈತರಿಗೆ ಹಣ ಪಾವತಿಯಾಗದೆ ಉಳಿದಿರುವವರಿಗೆ ಒಂದು ವಾರದೊಳಗೆ ಹಣ ಪಾವತಿಗೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.
ಮೆಕ್ಕೆಜೋಳವನ್ನು ರೈತರಿಂದ ನೇರವಾಗಿ ಖರೀದಿಸುವುದು ಮತ್ತು ಕೇಂದ್ರ ಸರ್ಕಾರವು ನಿಗದಿಪಡಿಸಿದ ಗುಣಮಟ್ಟ ಮತ್ತು ಕೃಷಿ ಇಲಾಖೆಯ ಗ್ರೇಡರ್ಗಳ ಮೂಲಕ ದೃಢೀಕರಿಸಿದ ನಂತರವೇ ಖರೀದಿಸತಕ್ಕದ್ದು. ಇದಕ್ಕಾಗಿ ಪ್ರತಿ ಖರೀದಿ ಕೇಂದ್ರಕ್ಕೆ ಒಬ್ಬರಂತೆ ಗ್ರೇಡರ್ಗಳನ್ನು ನೇಮಿಸುವಂತೆ ಜಂಟಿ ಕೃಷಿ ನಿರ್ದೇಶಕರು, ಕೃಷಿ ಇಲಾಖೆ, ಹಾಸನ ಇವರಿಗೆ ಸೂಚಿಸಲಾಯಿತು.
ಸಣ್ಣ ಮತ್ತು ಮಧ್ಯಮ ರೈತರಿಂದ ಗರಿಷ್ಠ 25 ಕ್ವಿಂಟಾಲ್ವರೆಗೆ ಮೆಕ್ಕೆಜೋಳ ಖರೀದಿಸಲು ಅವಕಾಶವಿದ್ದು, ಸಣ್ಣ ಮತ್ತು ಮಧ್ಯಮ ರೈತರ ಪಟ್ಟಿ ಹಾಗೂ ದೃಢೀಕರಣಗಳನ್ನು ರೈತರಿಗೆ ನೀಡಲು ಆಯಾ ತಾಲೂಕಿನ ಕಂದಾಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ತಿಳಿಸಲಾಯಿತು.
ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಉತ್ಪಾದನೆಯಾಗಿದ್ದು, ಆವಕ ಪ್ರಮಾಣವು ಕೂಡ ಹೆಚ್ಚಿನ ಪ್ರಮಾಣದಲ್ಲಿ ಆಗುವ ಅಂದಾಜು ಇರುವುದರಿಂದ ಎಲ್ಲಾ ಮೆಕ್ಕೆಜೋಳ ಖರೀದಿ ಕೇಂದ್ರಗಳಿಗೆ ಸೂಕ್ತ ಭದ್ರತೆಯನ್ನು ಒದಗಿಸಲು ಜಿಲ್ಲೆಯ ಆರಕ್ಷಕ ಇಲಾಖೆಗೆ ಸೂಚಿಸಿಲು ತೀರ್ಮಾನಿಸಲಾಯಿತು.
ಪ್ರತಿ ಖರೀದಿ ಕೇಂದ್ರಗಳಲ್ಲಿ ಖರೀದಿ ಕೇಂದ್ರ ಆರಂಭ ಮಾಡುತ್ತಿರುವ ಬಗ್ಗೆ ಮತ್ತು ರೈತರು ಪಾಲಿಸಬೇಕಾದ ಸೂಚನೆಗಳ ಬಗ್ಗೆ ವ್ಯಾಪಕ ಪ್ರಚಾರ ಕಾರ್ಯವನ್ನು ಆಯಾ ನೋಡಲ್ ಅಧಿಕಾರಿಗಳು, ಖರೀದಿ ಏಜೆನ್ಸಿ ಹಾಗೂ ಸಂಬಂಧಿಸಿದ ಎಪಿಎಂಸಿಗಳ ಸಹಯೋಗದೊಂದಿಗೆ ತಕ್ಷಣವೇ ಕೈಗೊಳ್ಳುವಂತೆ ಸೂಚಿಸಲಾಯಿತು. ಖರೀದಿ ಕೇಂದ್ರ ತೆರೆದ ಬಗ್ಗೆ ಮತ್ತು ಪ್ರತಿ ನಿತ್ಯದ ವಹಿವಾಟಿನ ಬಗ್ಗೆ ಉಪ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ ಇವರಿಗೆ ಇ-ಮೇಲ್ ಮುಖಾಂತರ (ಛಜಛಝ್ಞಛಡಡಛಟಿ.್ಜಟಛ್ಝಟ.್ಛ್ಟಟ) ವರದಿ ಮಾಡುವಂತೆ ತಿಳಿಸಲಾಯಿತು.
ಯಾವುದೇ ಕೇಂದ್ರದಲ್ಲಿ ಮಧ್ಯವರ್ತಿಗಳು ಭಾಗವಹಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಈ ಯೋಜನೆ ಯಶಸ್ವಿಯಾಗುವಂತೆ ಇದರಲ್ಲಿ ಭಾಗಿಯಾಗುವ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ಸಹಕರಿಸಬೇಕೆಂದು ಸೂಚಿಸಿದರು.
ಖರೀದಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಎಲೆಕ್ಟ್ರಾನಿಕ್ ತೂಕದ ಯಂತ್ರಗಳಲ್ಲಿ ತೂಕ ಮಾಡುವಂತೆ ಸೂಚಿಸಿದರಲ್ಲದೆ, ಖರೀದಿ ನಂತರ ವಿಳಂಬಕ್ಕೆ ಆಸ್ಪದ ನೀಡದಂತೆ ಸಂಬಂಧಿಸಿದ ರೈತರಿಗೆ ಅಕೌಂಟ್ ಪೇ ಚೆಕ್ ಮೂಲಕ ಅಥವಾ ಆರ್ಟಿಜಿಎಸ್ ಮೂಲಕ ಹಣ ಪಾವತಿಸಲು ಸೂಚಿಸಿದರು.
ಪ್ರೊಬೇಷನರಿ ಐಎಎಸ್ ಅಧಿಕಾರಿ ರಾಮಚಂದ್ರ, ಜಂಟಿ ಕೃಷಿ ನಿರ್ದೇಶಕ ಬಿ. ಶಿವರಾಜ್, ಕೃಷಿ ಮಾರಾಟ ಇಲಾಖೆ ಉಪ ನಿರ್ದೇಶಕ ಕೆ.ಎಂ. ನಾಗೇಶ್ ಹಾಗೂ ನಾನಾ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.