ಪ್ರತಿಭೆ ಅನಾವರಣಕ್ಕೆ ಶ್ರಮಿಸುತ್ತಿರುವ ಎಸ್ಎಸ್ಎಫ್: ಖಾಮಿಲ್
ಸಕಲೇಶಪುರ: ಸುನ್ನಿ ಸ್ಟುಡೆಂಟ್ ಫೆಡರೇಷನ್ ವಿದ್ಯಾರ್ಥಿಗಳಲ್ಲಿ ಹುದುಗಿರುವ ಹಲವು ಪ್ರತಿಭೆಗಳ ಅನಾವರಣಕ್ಕೆ ಶ್ರಮಿಸುತ್ತಿದೆ ಎಂದು ಎಸ್ಎಸ್ಎಫ್ ರಾಷ್ಟ್ರೀಯ ಉಪಾಧ್ಯಕ್ಷಅಬ್ದುಲ್ ರಷೀದ್ ಜೈನಿ ಖಾಮಿಲ್ ಹೇಳಿದರು.
ಪಟ್ಟಣದ ಕುಡುಗರಹಳ್ಳಿ ಬಡಾವಣೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ರಾಜ್ಯ ಮಟ್ಟದ ಪ್ರತಿಭೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕರುನಾಡಿನಲ್ಲಿ ಕಲೆ, ಸಾಹಿತ್ಯದಂತಹ ಕ್ಷೇತ್ರದಲ್ಲಿ ಪ್ರತಿಭೆಗಳ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ಎಸ್ಎಸ್ಎಫ್ ರಾಜ್ಯಾದ್ಯಂತ ಪ್ರತಿಭೆಗಳ ಶೋಧ ನಡೆಸುವ ಉದ್ದೇಶದಿಂದ ಎರಡು ವರ್ಷಕ್ಕೊಮ್ಮೆ ರಾಜ್ಯ ಮಟ್ಟದ ಪ್ರತಿಭೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದಾಗಿ ತಿಳಿಸಿದರು. ಪುರಸಭೆ ಮಾಜಿ ಅಧ್ಯಕ್ಷ ಯಾದಗಾರ್ ಇಬ್ರಾಹಿಂ ಮಾತನಾಡಿ, ಎಸ್ಎಸ್ಎಫ್ ಇಸ್ಲಾಂ ಸಾಹಿತ್ಯದ ಉನ್ನತೀಕರಣಕ್ಕಾಗಿ ಶ್ರಮಿಸುತ್ತಿದ್ದು ಮುಸ್ಲಿಂ ಯುವಕರು ವಿದ್ಯಾವಂತರಾಗುವ ಮೂಲಕ ಸಮಾಜಕ್ಕೆ ತಮ್ಮದೆಯಾದ ಕೊಡುಗೆ ನೀಡಿದರೆ ಇಸ್ಲಾಂ ಬಗ್ಗೆ ಸಮಾಜದಲ್ಲಿ ಕುತೂಹಲ ಹೆಚ್ಚುವುದು. ಇಸ್ಲಾಂ ಬಗ್ಗೆ ಹೆಚ್ಚಿನ ಒಲವು ಗಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಯುವಕರು ವಿದ್ಯಾವಂತರಾಗುವ ಕಡೆಗೆ ಹೆಚ್ಚಿನ ಗಮನ ಹರಿಸ ಬೇಕು ಎಂದರು. ಕಾರ್ಯಕ್ರಮದಲ್ಲಿ ಕ್ವಿಜ್, ಪ್ರಬಂಧ, ಕಲೆ, ಸಾಹಿತ್ಯದ ಸ್ಪರ್ಧೆಗಳಲ್ಲಿ ವಿಜಯಿಗಳಾದ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಲಾಯಿತು. ಕೊಡ್ಲಿಪೇಟೆ ಅಬ್ದುಲ್ ಹಕೀಮ್ ಅಧ್ಯಕ್ಷತೆ ವಹಿಸಿದ್ದರು, ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಶಾಫಿ ಸಹದಿ, ಅಬುಸೂಫಿಯಾನ್, ನಾಸೀರ್ ಹುಸೇನ್ ರಜ್ವಿ, ಎಂ. ವೈ ಹಪೀಲ್ ಸಹದಿ, ಅಬೂಬಕ್ಕರ್ ಸಿದ್ದೀಕ್ ಇತರರು ಇದ್ದರು.