ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ

Mainashree
Updated On : 27 Nov 2013, 8:39 am

ಹೊಳೆನರಸೀಪುರ: ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ಬಡ ರೋಗಿಗಳ ಪಾಲಿಗೆ ವರದಾನವಾಗಿ ಪಟ್ಟಣದಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ, ತಾಲೂಕು ಮಟ್ಟದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ರಾಜ್ಯದಲ್ಲಿಯೇ ಮೊಟ್ಟಮೊದಲ ಹೈಟೆಕ್ ಡಯಾಲಿಸಿಸ್ ಕೇಂದ್ರವು ಕಾರ್ಯಾರಂಭಗೊಂಡಿದೆ.
ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ಬಡ ರೋಗಿಗಳು ಡಯಾಲಿಸಿಸ್ ಸೇವೆಗಾಗಿ ದೂರದ ಬೆಂಗಳೂರು, ಮೈಸೂರು ಮೊದಲಾದ ನಗರಗಳಿಗೆ ದುಬಾರಿ ಹಣ ತೆತ್ತು ತಿರುಗಬೇಕಾಗಿರುವ ಅನಿವಾರ್ಯತೆಯನ್ನು ಮನಗಂಡಿದ್ದ ಇಲ್ಲಿನ ವೈದ್ಯರು ಈ ನಿಟ್ಟಿನಲ್ಲಿ ಶಾಸಕರ ಗಮನಕ್ಕೆ ಡಯಾಲಿಸಿಸ್ ಕೇಂದ್ರದ ಅವಶ್ಯಕತೆ ಹಾಗೂ ಅನಿವಾರ್ಯತೆಯನ್ನು ಮನದಟ್ಟು ಮಾಡಿಕೊಟ್ಟಿದ್ದರು.
ರಾಜ್ಯ ಸರ್ಕಾರ ಕೂಡ ರಾಜ್ಯದ ಪ್ರತಿ ಜಿಲ್ಲೆಯಲ್ಲಿನ ಒಂದು ತಾಲೂಕು ಕೇಂದ್ರದಲ್ಲಿ ಡಯಾಲಿಸಿಸ್ ಕೇಂದ್ರ ತೆರೆಯಲು ನಡೆಸಲಾಗಿದ್ದ ಚಿಂತನೆಯ ಹಿನ್ನೆಲೆಯಲ್ಲಿ, ಶಾಸಕ ಎಚ್.ಡಿ. ರೇವಣ್ಣ ಅವರು ತಮ್ಮ ಕಾರ್ಯ ದಕ್ಷತೆಯಿಂದ ಪಟ್ಟಣದಲ್ಲಿನ ತಾಲೂಕು ಕೇಂದ್ರದ ಆಸ್ಪತ್ರೆಗೆ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಸುಮಾರು 70 ಲಕ್ಷ ಅಧಿಕ ವೆಚ್ಚದ ಹೈಟೆಕ್ ಡಯಾಲಿಸಿಸ್ ಕೇಂದ್ರವನ್ನು ರಾಜ್ಯದಲ್ಲಿಯೇ ಮೊಟ್ಟಮೊದಲನೆಯದಾಗಿ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾದರು. ಇದರಿಂದಾಗಿ ಜಿಲ್ಲಾ ಕೇಂದ್ರದಲ್ಲಿನ ಆಸ್ಪತ್ರೆಯ ಜೊತೆಗೆ ಜಿಲ್ಲೆಯಲ್ಲಿಯೇ ಡಯಾಲಿಸಿಸ್ ಕೇಂದ್ರವನ್ನು ಹೊಂದಿರುವ ತಾಲೂಕು ಆಸ್ಪತ್ರೆಗಳ ಸಾಲಿನಲ್ಲಿ ಹೊಳೆನರಸೀಪುರ ಸಾರ್ವಜನಿಕ ಆಸ್ಪತ್ರೆ ಮೊದಲನೆಯದಾಗಿದೆ.
ಕೇವಲ 50 ಹಾಸಿಗೆಗಳಿದ್ದ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯು, ನಂತರದಲ್ಲಿ 100 ಹಾಸಿಗೆಗಳಿಗೆ, ಎಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ 250 ಹಾಸಿಗೆಗಳುಳ್ಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿತು. ಇಂದು ಇಲ್ಲಿನ ಆಸ್ಪತ್ರೆಯು ಯಾವುದೇ ಖಾಸಗಿ ಆಸ್ಪತ್ರೆಗೂ ಕಡಿಮೆಯಿಲ್ಲದ ಸಕಲ ಸೌಲಭ್ಯಗಳನ್ನೂ ಒಳಗೊಂಡಿರುವುದು ವಿಶೇಷವಾಗಿದೆ. ಅಲ್ಲದೇ ಅಗತ್ಯ ವೈದ್ಯರು, ಶುಶ್ರೂಷಕಿಯರು, ಸಿಬ್ಬಂದಿ ಹಾಗೂ ಪೂರಕವಾಗಿ ಪಟ್ಟಣದಲ್ಲಿಯೇ ಸರ್ಕಾರಿ ನರ್ಸಿಂಗ್ ಕಾಲೇಜು ಕೂಡ ಸ್ಥಾಪನೆಗೊಂಡಿರುವ ಕಾರಣದಿಂದಾಗಿ ಆಸ್ಪತ್ರೆಯಲ್ಲಿ ಸೌಲಭ್ಯಕ್ಕೇನೂ ಕೊರತೆಯಿಲ್ಲದ ಸ್ಥಿತಿ ಇದೆ.
ನೂತನವಾಗಿ ಆರಂಭಗೊಂಡಿರುವ ಡಯಾಲಿಸಿಸ್ ಕೇಂದ್ರದಲ್ಲಿ ಒಂದೇ ಬಾರಿಗೆ ಮೂವರು ರೋಗಿಗಳಿಗೆ ಡಯಾಲಿಸಿಸ್ ಸೇವೆಯನ್ನು ಒದಗಿಸುವ ಸೌಲಭ್ಯವಿದೆಯಲ್ಲದೇ, ತುರ್ತು ಸೇವೆಗಾಗಿ ಒಂದು ಡಯಾಲಿಸಿಸ್ ಸೌಲಭ್ಯವನ್ನು ಕಾಯ್ದಿರಿಸಲಾಗಿದೆ. ರಕ್ತ ಶುದ್ಧೀಕರಣಕ್ಕಾಗಿ ಮೂರು ಹಂತದಲ್ಲಿ ನೀರು ಶುದ್ಧೀಕರಿಸುವ ಹೈಟೆಕ್ ಮಾದರಿಯ ರಿವರ್ಸ್ ಆಸ್ಮೋಸಿಸ್ ಪ್ಲಾಂಟ್ ಸ್ಥಾಪಿಸಲಾಗಿದೆ. ಅಲ್ಲದೇ ಎಚ್ಐವಿ ಮತ್ತು ಜಾಂಡೀಸ್ನಿಂದ ಬಳಲುತ್ತಿರುವ ರೋಗಿಗಳಿಗಾಗಿ ಮುಂಜಾಗ್ರತೆಯ ತುರ್ತು ಚಿಕಿತ್ಸಾ ಘಟಕವನ್ನು ಕೂಡ ಇಲ್ಲಿ ಸ್ಥಾಪಿಸಲಾಗಿದೆ.
ಇಲ್ಲಿನ ಡಯಾಲಿಸಿಸ್ ಕೇಂದ್ರದಲ್ಲಿನ ಪ್ರತಿಯೊಂದು ಡಯಾಲಿಸಿಸ್ ಯಂತ್ರಗಳೂ 6-7 ಲಕ್ಷ ಮೌಲ್ಯವುಳ್ಳ ಯಂತ್ರಗಳಾಗಿದ್ದು, ಇಡೀ ಡಯಾಲಿಸಿಸ್ ಕೇಂದ್ರವು ಸೆಂಟ್ರಲೈಸಡ್ ಆಕ್ಸಿಜನ್ ಹಾಗೂ ಹವಾನಿಯಂತ್ರಿತ ಸೌಕರ್ಯವನ್ನು ಒಳಗೊಂಡಿದೆ. ಡಯಾಲಿಸಿಸ್ ಸೇವೆಯ ಸಂದರ್ಭದಲ್ಲಿ ಯಾವುದೇ ರೋಗಿಗೆ ಅನಿವಾರ್ಯವಿದ್ದಲ್ಲಿ ಉಪಯುಕ್ತವಾದ ತುರ್ತು ನಿಗಾ ಘಟಕವನ್ನು ಸಿದ್ಧಗೊಳಿಸಲಾಗಿದೆ.
ಎಲ್ಲಕ್ಕಿಂತಲೂ ಪ್ರಮುಖವಾಗಿ ಇಲ್ಲಿನ ಆಸ್ಪತ್ರೆಯಲ್ಲಿನ ವೈದ್ಯರಾದ ಡಾ. ಡಿ. ನಟರಾಜ್ ಹಾಗೂ ಡಾ. ರೇಖಾ ಅವರಲ್ಲದೇ, 4 ಶುಶ್ರೂಷಕಿಯರು ಹಾಗೂ ಇಬ್ಬರು ಡಿ-ಗ್ರೂಪ್ ನೌಕರರಿಗೆ ಈಗಾಗಲೇ ಡಯಾಲಿಸಿಸ್ ಸೇವೆಗೆ ಸಂಬಂಧಿಸಿದ ಕ್ರಮಬದ್ಧವಾದ ತರಬೇತಿಯನ್ನೂ ನೀಡಲಾಗಿದೆ. ಇಷ್ಟರ ನಂತರ ತಾಲೂಕಿನಲ್ಲಿ ಒಂದು ಅಂದಾಜಿನ ಮೇರೆಗೆ ಸುಮಾರು 30ರಿಂದ 40 ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿರುವ ಅಂದಾಜು ಮಾಡಲಾಗಿದ್ದು, ಇಲ್ಲಿನ ಆಸ್ಪತ್ರೆಯಲ್ಲಿ ದೊರೆಯಲಿರುವ ಡಯಾಲಿಸಿಸ್ ಸೇವೆಯಲ್ಲಿ ತಾಲೂಕಿನ ರೋಗಿಗಳಿಗೆ ಪ್ರಥಮ ಆದ್ಯತೆ ನೀಡಿ ಇನ್ನಿತರ ರೋಗಿಗಳಿಗೂ ಸೌಲಭ್ಯಗಳನ್ನು ನೀಡುವುದು ಇಲ್ಲಿನ ವೈದ್ಯರ ಉದ್ದೇಶವಾಗಿದೆ.
ಡಯಾಲಿಸಿಸ್ ಸೇವೆಯು ಇಂದಿನ ದಿನಗಳಲ್ಲಿ ದುಬಾರಿಯಾಗಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಏನಿಲ್ಲವೆಂದರೂ 1500-2500ರ ರು.ಗಳವರೆಗೂ ವೆಚ್ಚ ತಗುಲುವ ಅಂದಾಜಿದೆ. ಆದರೆ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ನೀಡಲಾಗುವ ಡಯಾಲಿಸಿಸ್ ಸೇವೆಯು ಬಿಪಿಎಲ್ ಕಾರ್ಡ್ದಾರರಿಗೆ ಕೇವಲ 300 ಸಿಗಲಿದ್ದು, ಬಿಪಿಎಲ್ ಕಾರ್ಡ್ ಇಲ್ಲದ ರೋಗಿಗಳು 600 ಭರಿಸಬೇಕಾಗುತ್ತದೆ.
ಒಟ್ಟಿನಲ್ಲಿ ಬಡವರಿಗೂ ಆರೋಗ್ಯ ಸೌಲಭ್ಯ ಎಲ್ಲೆಡೆಯೂ ದೊರಕುವಂತೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೈಗೊಂಡ ಕ್ರಮ ಹಾಗೂ ಸ್ಥಳೀಯ ಶಾಸಕರ ದೂರದೃಷ್ಟಿತ್ವದ ಫಲವಾಗಿ ಡಯಾಲಿಸಿಸ್ ಕೇಂದ್ರವು ಆರಂಭಗೊಂಡಿದ್ದು, ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ಬಡ ರೋಗಿಗಳ ಪಾಲಿಗೆ ಆಶಾಕಿರಣವಾಗಿದೆ.

 ಎಚ್.ಡಿ. ಗುರುಪ್ರಸಾದ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement