ಹಲವೆಡೆ ಆನೆ ಹಿಂಡುಗಳ ದಾಳಿ
ಕ.ಪ್ರ. ವಾರ್ತೆ, ಹಾಸನ, ನ.27
ಅರಣ್ಯ ಇಲಾಖೆಯವರು ಒಂಟಿ ಸಲಗವನ್ನು ಸೆರೆ ಹಿಡಿದು ಬೇರೆಡೆ ಸ್ಥಳಾಂತರ ಮಾಡಿದ ಬೆನ್ನಲ್ಲೇ ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಸುತ್ತಮುತ್ತಲ ಹತ್ತಾರು ಗ್ರಾಮಗಳಲ್ಲಿ ಮಂಗಳವಾರ ರಾತ್ರಿ ಹಾಗೂ ಬುಧವಾರದಂದು ಕಾಡಾನೆಗಳು ವಿಪರೀತ ದಾಳಿ ನಡೆಸಿವೆ.
ಇದರ ಪರಿಣಾಮ ನೂರಾರು ಎಕರೆ ಪ್ರದೇಶದ ಬತ್ತ, ಕಾಫಿ, ತೆಂಗು, ಅಡಿಕೆ, ಬಾಳೆ ಸೇರಿದಂತೆ ಮುಂತಾಂದ ಬೆಳೆಗಳನ್ನು ನಾಶಪಡಿಸಿವೆ.
ಅರಣ್ಯ ಇಲಾಖೆ ಸತತ 5 ದಿನಗಳು ಪರದಾಡಿ ಒಂದು ಕಾಡಾನೆಯನ್ನು ಹಿಡಿದು ಮಂಗಳವಾರವಷ್ಟೇ ಮಡಿಕೇರಿಯ ಮತ್ತಿಗೋಡು ಆನೆ ಶಿಬಿರಕ್ಕೆ ರವಾನಿಸಿದ್ದರು. ಇದರಿಂದ ತಮ್ಮ ಸ್ನೇಹಿತ ಆನೆಯೊಂದನ್ನು ಹಿಡಿದುಕೊಂಡು ಹೋದರು ಎಂಬ ಕಾರಣಕ್ಕೆ ಎಲ್ಲಾ ಕಾಡಾನೆಗಳು ರೋಷಗೊಂಡು ಹೀಗೆ ಮಾಡಿರಬೇಕು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ.
20ಕ್ಕೂ ಹೆಚ್ಚು ಗ್ರಾಮಗಳಲ್ಲಿ ದಾಳಿ: ಬುಧವಾರ ಮಾದಿಹಳ್ಳಿ, ಭಕ್ತರವಳ್ಳಿ, ಹೊಂಕರವಳ್ಳಿ, ಮಾದಿಹಳ್ಳಿ, ಹುಲುಕುಂದ, ಬೋಸ್ಮಾನಹಳ್ಳಿ, ಕಾಗನೂರು, ಕಾಣಗೆರೆ, ಕಲ್ಲಾರೆ, ಹೊನ್ನವಳ್ಳಿ, ಕೆಂಟಮ್ಮನ ಹೊಸಕೋಟೆ ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕಾಡಾನೆಗಳು ಮಂಗಳವಾರದಿಂದಲೂ ವಿಪರೀತ ದಾಳಿ ನಡೆಸುತ್ತಿವೆ.
ಕಳೆದ ಗುರುವಾರದಂದು ಒಂದು ಕಾಡಾನೆ ಹಿಡಿಯಲು 5 ಸಾಕಾನೆಗಳೊಂದಿಗೆ ಅರಣ್ಯ ಇಲಾಖೆಯವರು ಸತತ 5 ದಿನ ಕಾರ್ಯಾಚರಣೆ ನಡೆಸಿ ಆಲೂರಿನ ಕಾಗನೂರು, ಕೊಡಗಿನ ಹಂಪಾಪುರ, ಆಲೂರು ಹಾಗೂ ಸಕಲೇಶಪುರ ಗಡಿ ಭಾಗವಾದ ಕೆರೋಡಿ ಬಳಿಯ ಅರಣ್ಯ ಪ್ರದೇಶಗಳಲ್ಲಿ ಹಗಲಿನ ಹೊತ್ತು ಕಾರ್ಯಾಚರಣೆ ನಡೆಸಿದರೂ, ಈ ಕಾರ್ಯಾಚರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಾರ್ಯಾಚರಣೆಗೆ ಕಾಡಾನೆಗಳು ಹೆದರಿಕೊಂಡವೋ ಎಂಬಂತೆ ಯಾವುದೇ ಬೆಳೆ ಹಾನಿಯನ್ನು ಆ ದಿನಗಳಲ್ಲಿ ಮಾಡದ ಆನೆಗಳು ಕಾಡಿನಲ್ಲಿ ತಲೆಮರೆಸಿಕೊಂಡಂತೆ ಇದ್ದವು.
ಗ್ರಾಮಸ್ಥರಿಗೆ ತಲೆನೋವು: ಆದರೆ ಮಂಗಳವಾರ ರಾತ್ರಿಯಿಂದ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಮಾಡುತ್ತಿರುವ ಆನೆಗಳು ತಮ್ಮ ಸ್ನೇಹಿತ ಆನೆಯನ್ನು ಸೆರೆ ಹಿಡಿದಿದ್ದಕ್ಕೆ ಸೇಡು ತೀರಿಸಿಕೊಳ್ಳುತ್ತಿವೋ ಎಂಬಂತೆ ಎಡೆಬಿಡದೆ ಹಗಲು ಇರುಳು ಎನ್ನದೆ ದಾಳಿ ನಡೆಸುತ್ತಿವೆ. ಮಾದಿಹಳ್ಳಿ, ಹುಲುಕುಂದ ಬಳಿ ಎರಡು ಆನೆ ಒಂದು ಗುಂಪು ಹಾಗೂ 7 ಆನೆಗಳ ಮತ್ತೊಂದು ಗುಂಪಿದ್ದರೆ ಹೊಂಕರವಳ್ಳಿ ಬಳಿ 13 ಆನೆಗಳ ಒಂದು ಗುಂಪಿದೆ. ಬೋಸ್ಮಾನಹಳ್ಳಿ ಬಳಿ 7 ಆನೆಗಳ ಒಂದು ಗುಂಪು ಇದ್ದರೆ, ಒಂಟಿ ಸಲಗವೊಂದು ಇದೇ ಸ್ಥಳದಲ್ಲಿ ಇರುವುದು ಹಾಗೂ ಗ್ರಾಮಗಳ ಅಕ್ಕಪಕ್ಕದಲ್ಲಿ ಓಡಾಡುತ್ತಿರುವುದು ಗ್ರಾಮಸ್ಥರಿಗೆ ತಲೆನೋವಾಗಿ ಪರಿಣಮಿಸಿದೆ.
ಹೊಂಕರವಳ್ಳಿ, ಮಾದಿಹಳ್ಳಿ ಹಾಗೂ ಬೋಸ್ಮಾನಳ್ಳಿ ಈ ಮೂರೂ ಪ್ರದೇಶಗಳಲ್ಲಿ ಮೂರು ವಿಭಾಗಗಲಾಗಿ ಬೀಡು ಬಿಟ್ಟಿರುವ ಆನೆಗಳ ಗುಂಪು ಏಕಕಾಲಕ್ಕೆ ಈ ರೀತಿ ದಾಳಿ ನಡೆಸುತ್ತಿರುವುದು ಜನರಲ್ಲಿ ಆತಂಕ ಉಂಟು ಮಾಡಿದೆ. ಮಂಗಳವಾರ ರಾತ್ರಿ ಮಾದಿಹಳ್ಳಿ ಗ್ರಾಮದ ತಿಮ್ಮೇಗೌಡ, ಸಣ್ಣಯ್ಯ, ಕೆಂಚಮ್ಮನ ಹೊಸಕೋಟೆಯ ರೈಸ್ ಮಿಲ್ ಮಾಲೀಕ ರಾಜಶೇಖರ್, ಬೋಸ್ಮಾನಳ್ಳಿಯ ಪುರುಷೋತ್ತಮ್ ಮುಂತಾದವರು ಬೆಳೆದ ಬೆಳೆ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ.
ಮೇಲಧಿಕಾರಿಗೆ ಮಾಹಿತಿ: ಈ ಭಾಗದ ಜನರು ಎಲ್ಲಾ ಆನೆಗಳನ್ನು ಹಿಡಿಯದ ಹೊರತು ಮಾದಿಹಳ್ಳಿಯಲ್ಲಿ ಹಾಕಲಾಗಿರುವ ಕ್ಯಾಂಪನ್ನು ತೆರವುಗೊಳಿಸಲು ಬಿಡುವುದಿಲ್ಲ ಎಂದು ಅರಣ್ಯಾಧಿಕಾರಿಗಳ ಬಳಿ ಬುಧವಾರದಿಂದ ಪಟ್ಟು ಹಿಡಿದ್ದಾರೆ. ಆದರೆ ಮಂಗಳವಾರ ಸಾಕಾನೆಗಳೊಂದಿಗೆ ಅರಣ್ಯಾಧಿಕಾರಿಗಳು ಜಾಗ ಖಾಲಿ ಮಾಡುತ್ತಿದ್ದಾಗ ಯಾರೊಬ್ಬರು ಈ ಬಗ್ಗೆ ಚಕಾರ ಎತ್ತಲಿಲ್ಲ. ಅಲ್ಲದೆ ಈಗ ಹಿಡಿದುಕೊಂಡು ಹೋಗಿರುವ ಆನೆ ಈ ಹಿಂದೆ ಗುರುತಿಸಲಾಗಿದ್ದ ಅಪಾಯಕಾರಿ ಮಾನವ ಹಂತಕ ಒಂಟಿ ಸಲಗವಲ್ಲ ಎಂಬ ಗುಸು ಗುಸು ಈ ಭಾಗದ ಜನರಲ್ಲಿ ಕೇಳಿಬರುತ್ತಿದೆ.
ಈ ಸಂಬಂಧವಾಗಿ ಆರ್ಎಫ್ಒ ದೇವರಾಜ್ ಅವರನ್ನು ಪ್ರಶ್ನಿಸಿದಾಗ, ಈಗ ಹಿಡಿದಿರುವ ಆನೆ ಈ ಹಿಂದೆ ಗುರುತಿಸಿದ್ದ ಆನೆಯೇ ಆಗಿದೆ. ಆನೆ ಹಿಡಿಯುವುದಕ್ಕೂ ಮೊದಲು ತಾವು ಆನೆಯ ಫೋಟೋ ತೆಗೆದು ಪಾದದ ಗುರುತಿನ ನಕಲನ್ನು(ಫುಟ್ ಮಾರ್ಕ್) ತೆಗೆದುಕೊಂಡು ಆನೆ ಯಾವ ರೀತಿ ಇದೆ ಎಂಬ ಬಗ್ಗೆ ಎಲ್ಲ ಮಾಹಿತಿಯನ್ನು ಮೇಲಧಿಕಾರಿಗಳಿಗೆ ನೀಡಿರುತ್ತೇವೆ. ಈಗ ಹಿಡಿದಿರುವ ಆನೆ ಈ ಹಿಂದೆ ಗುರುತಿಸಿದಂತೆ ಚಿಕ್ಕ ಕೋರೆಗಳು ಇದ್ದು, ಹಿಂಬಾಗಿಲಿನ ಕಾಲಿಗೆ ಪೆಟ್ಟು ಬಿದ್ದಿದ್ದರಿಂದ ಹೆಜ್ಜೆ ಎತ್ತಿ ಇಡುತ್ತದೆ. ಒಂದು ಕಣ್ಣು ಐಬಾಗಿದ್ದು, ಸೊಂಡಿಲು ಸಹ ಚಿಕ್ಕದಿದೆ. ಆ ಆಧಾರದ ಮೇಲೆ ಆನೆ ಹಿಡಿದ ನಂತರ ಅಧಿಕಾರಿಗಳು ಪುನಃ ಪರಿಶೀಲಿಸುತ್ತಾರೆ. ನಾವು ಬೇರೆ ಆನೆ ಹಿಡಿದರೆ ಅವರು ನಮ್ಮನ್ನು ಸುಮ್ಮನೆ ಬಿಡುತ್ತಾರೆಯೇ ಎಂದು ಹೇಳುತ್ತಾರೆ.
ಆದೇಶದ ನಂತರ ಕಾರ್ಯಾಚರಣೆ: ಆ ರೀತಿ ಮಾಡುವುದಾಗಿದ್ದರೆ ಒಂದನೇ ದಿನ ಕಾರ್ಯಾಚರಣೆ ವಿಫಲಗೊಂಡ ನಂತರ ಈಗ ಹಿಡಿದ ಕಾಡಾನೆ ಕೊಡಗಿನ ಹಂಪಾಪುರ ಬಳಿ ಮೂರ್ನಾಲ್ಕು ಇತರೆ ಆನೆಗಳೊಂದಿಗೆ ಸೇರಿಕೊಂಡಿತ್ತು. ಅಲ್ಲಿಂದ 5ನೇ ದಿನದವರೆಗೂ ಬೇರೆ ಬೇರೆ ಆನೆಗಳೊಂದಿಗೆ ಇರುತ್ತಿತ್ತು. ಅವು ಬೇರೆ ಆನೆಯನ್ನು ಹಿಡಿಯುವುದಾಗಿದ್ದರೆ ಎರಡನೇ ದಿನದ ಕಾರ್ಯಾಚರಣೆಯಲ್ಲೇ ಹಿಡಿದು ಹಾಕುತ್ತಿದ್ದೆವು. 5 ದಿನಗಳವರೆಗೆ ಕಾರ್ಯಾಚರಣೆ ನಡೆಸುವ ಪ್ರಮೇಯವೇ ಇರುತ್ತಿರಲಿಲ್ಲ. ಜನರು ತಪ್ಪು ಅಭಿಪ್ರಾಯದಿಂದ ಈ ರೀತಿ ಮಾತನಾಡಿರಬಹುದು ಎಂದರು.
ಸದ್ಯಕ್ಕೆ ನಾವು ಮಾದಿಹಳ್ಳಿ ಬಳಿ ಹಾಕಿರುವ ಕ್ಯಾಂಪ್ ಅನ್ನು ತೆರವುಗೊಳಿಸುವುದಿಲ್ಲ. ಈಗ ಹಿಡಿದ ಕಾಡಾನೆಯೊಂದಿಗೆ ಹೋಗಿರುವ ಸಾಕಾನೆಗಳು ಇನ್ನೆರಡು ದಿನದೊಳಗೆ ಪುನಃ ಇದೇ ಕ್ಯಾಂಪಿಗೆ ಬರಲಿವೆ. ಸರ್ಕಾರದ ಆದೇಶ ಬಂದ ನಂತರ ತಕ್ಷಣವೇ ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿದರು.
ಎಚ್.ವಿ. ರಾಘವೇಂದ್ರ