ಹೊಳೆನರಸೀಪುರದಲ್ಲಿ 600 ಕೇಸು
ಕ.ಪ್ರ.ವಾರ್ತೆ ಹೊಳೆನರಸೀಪುರ ನ.27
ಪಟ್ಟಣದ ಹಿರಿಯ ಮತ್ತು ಕಿರಿಯ ನ್ಯಾಯಾಲಯಗಳಲ್ಲಿ ನಡೆದ ಬೃಹತ್ ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ 600ಕ್ಕೂ ಹೆಚ್ಚು ಮೊಕದಮೆಗಳು ರಾಜಿ ಸಂಧಾನಗಳು ಮೂಲಕ ಬಗೆಹರಿಸಲಾಯಿತೆಂದು ಜೆಎಂಎಫ್ಸಿ ನ್ಯಾಯಾಲಯದ ಕಿರಿಯ ನ್ಯಾಯಾಧೀಶ ಸಿ.ವಿ. ಸನತ್ ತಿಳಿಸಿದರು.
ನ್ಯಾಯಾಲಯದ ತಮ್ಮ ಕಚೇರಿಯಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶದ ಮೇಲೆ ಕಳೆದ ಆ.1ರಿಂದ ನ.23ರವರೆಗೆ ನಡೆದ ಬೃಹತ್ ಲೋಕ್ ಅದಾಲತ್ನಲ್ಲಿ ಸಿವಿಲ್ 65, ಚೆಕ್ಗೆ ಸಂಬಂಧಿಸಿದ 47, ಜೀವನಾಂಶದ 17, ಮಹಿಳಾ ದೌರ್ಜನ್ಯಕ್ಕೆ ಸಂಬಂಧಿಸಿದ 3 ಪ್ರಕರಣ, ಬ್ಯಾಂಕಿನ ಕೃಷಿ ಸಾಲದ 81 ಪ್ರಕರಣಗಳು, ಕ್ರಿಮಿನಲ್ ಸಂಬಂಧಿಸಿದ 350, ಅಪಘಾತದ 30, ವಿವಾಹಕ್ಕೆ ಸಂಬಂಧಿಸಿದ 6 ಹಾಗೂ 1 ಪ್ರಕರಣ ಮೇಲ್ಮನವಿಗೆ ಸಂಬಂಧಿ ಪ್ರಕರಣಗಳು ಇತ್ಯರ್ಥಗೊಂಡವೆಂದು ತಿಳಿಸಿದರು.
ಇಂತಹ ಇತ್ಯರ್ಥಗಳಿಂದ ವಾದಿ- ಪ್ರತಿವಾದಿಗಳಲ್ಲಿ ಸಾಮರಸ್ಯ ಉಂಟಾಗುವುದರ ಜತೆಗೆ ಕೌಟುಂಬಿಕವಾಗಿ ನೆಮ್ಮದಿಯಿಂದ ಇರಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕೃಷಿಗೆ ಸಂಬಂಧಿಸಿದ 81 ಪ್ರಕರಣಗಳಲ್ಲಿ ವಿಶೇಷ ಪ್ಯಾಕೇಜ್ ನೀಡಿದ್ದು ಅದರಂತೆ ಕೃಷಿಗೆ ಸಂಬಂಧಿದ ಪ್ರಕರಣಗಳಲ್ಲಿ ಪಡೆದ ಸಾಲದಲ್ಲಿ ಶೇ.10ರಷ್ಟು ರಿಯಾಯಿತಿ ಮತ್ತು ಪೂರ್ಣ ಬಡ್ಡಿ ಮನ್ನಾ ಆಗಿದ್ದರಿಂದ ಸಂಕಷ್ಟದಲ್ಲಿರುವ ರೈತನಿಗೆ ಈ ಪ್ಯಾಕೇಜ್ ಬಹು ಉಪಯೋಗವಾಗಲಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯಕ್ಕೆ ಬರುವ ಪ್ರಕರಣಗಳು ಇತ್ಯರ್ಥಗೊಳ್ಳಲು ವರ್ಷಾನುಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಇದೆ. ಜತೆಗೆ ನ್ಯಾಯಾಲಯದಲ್ಲಿ ಇತ್ಯರ್ಥಗೊಂಡಲ್ಲಿ ವಾದಿ- ಪ್ರತಿವಾದಿಗಳಲ್ಲಿ ಒಬ್ಬರಲ್ಲಿ ದ್ವೇಷ ಕಾಣಿಸಿಕೊಳ್ಳುವ ಸಂಭವವಿದೆ. ಆದ್ದರಿಂದ ರಾಜಿ ಸಂಧಾನಗಳ ಮೂಲಕ ಇತ್ಯರ್ಥವಾದಲ್ಲಿ ಯಾವುದೆ ಪ್ರತಿಕೂಲ ಪರಿಸ್ಥಿತಿ ಒದಗಲಾರದು ಎಂದರು. ಅಪಘಾತಗಳಿಗೆ ಸಂಬಂಧಿಸಿ 30 ಪ್ರಕರಣಗಳಿಂದ ಫಲಾನುಭವಿಗಳಿಗೆ 65ರಿಂದ 70 ಲಕ್ಷ ಪರಿಹಾರ ಬೇಗನೆ ದೊರೆಯಿತೆಂದು ತಿಳಿಸಿದರು.
ನಮ್ಮ ನ್ಯಾಯಾಲಯಗಳಲ್ಲಿ ಪ್ರತಿ ತಿಂಗಳು ಮೂರನೇ ಹಾಗೂ ನಾಲ್ಕನೇ ಶನಿವಾರಗಳಲ್ಲಿ ಅದಾಲತ್ ಕಾರ್ಯಕ್ರಮಗಳು ಎಂದಿನಂತೆ ನಡೆಯಲಿದೆ. ಇಷ್ಟು ಪ್ರಕರಣಗಳು ರಾಜಿ ಸಂಧಾನಕ್ಕೆ ಕಾರಣರಾದ ವಕೀಲರು ವಾದಿ- ಪ್ರತಿವಾದಿಗಳಿಗೆ ಈ ವೇಳೆ ತಮ್ಮ ವಂದನೆಗಳನ್ನು ತಿಳಿಸುವ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ವಕೀಲ ಕೆ. ಕುಮಾರಸ್ವಾಮಿ, ವಕೀಲರ ಸಂಘ ಪ್ರಧಾನ ಕಾರ್ಯದರ್ಶಿ ಜಯರಾಮ್, ಸಹ ಕಾರ್ಯದರ್ಶಿ ರಾಮಪ್ರಸನ್ನ ಇತರರು ಇದ್ದರು.