ಆತ್ಮಾವಲೋಕನಕ್ಕೆ ಕಾನೂನು ದಿನಾಚರಣೆ ಉಪಯುಕ್ತ
ಕನ್ನಡಪ್ರಭ ವಾರ್ತೆ, ಅರಸೀಕೆರೆ, ನ.28
ಆತ್ಮಾವಲೋಕನ ಮಾಡಿಕೊಳ್ಳಲು ಕಾನೂನು ದಿನಾಚರಣೆ ಉಪಯುಕ್ತವಾಗಲಿದೆ ಎಂದು ಪಟ್ಟಣದ ಜೆಎಂಎಫ್‌ಸಿ ಹಿರಿಯ ನ್ಯಾಯಾಲಯದ ನ್ಯಾಯಾಧೀಶೆ ಸರಸ್ವತಿ ವಿ. ಕೋಸಂದರ್ ಹೇಳಿದ್ದಾರೆ.
ಪಟ್ಟಣದ ನ್ಯಾಯಾಲಯ ಆವರಣದಲ್ಲಿನ ವಕೀಲರ ಸಂಘದ ಭವನದಲ್ಲಿ ಇತ್ತೀಚೆಗೆ ಕಾನೂನು ದಿನಾಚರಣೆ ಅಂಗವಾಗಿ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ವಿಚಾರ ಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಸಂವಿಧಾನದಲ್ಲಿ ಎಲ್ಲರಿಗೂ ಸಮಾನತೆಯ ಹಕ್ಕನ್ನು ನೀಡಲಾಗಿದೆ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ದೇವಾನಂದ ಮಾತನಾಡಿ, ಇತ್ತೀಚಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಿದ್ದು, ಪರಸ್ಪರ ಸಂಬಂಧಗಳು ನಂಬಿಕೆ ಕಳೆದುಕೊಳ್ಳುತ್ತಿವೆ. ಮಕ್ಕಳಲ್ಲಿ ಲಿಂಗ ಭೇದಗಳಿಲ್ಲದೆ ದೌರ್ಜನ್ಯಗಳು ನಡೆಯುತ್ತಿದ್ದು, ಈ ಬಗ್ಗೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲು ಕೆಲವು ಅಪರಾಧ ಪ್ರಕರಣಗಳಿಗೆ ಕಾನೂನು ಮೂಲಕ ತಿದ್ದುಪಡಿ ಮಾಡಲಾಗಿದೆ. ಈ ಬಗ್ಗೆ ವಕೀಲರ ವೃಂದಕ್ಕೆ ವಿಚಾರ ಗೋಷ್ಠಿಗಳನ್ನು ನಡೆಸುವ ಮೂಲಕ ಹೆಚ್ಚಿನ ತಿಳಿವಳಿಕೆ ನೀಡಲಾಗುತ್ತಿದೆ ಎಂದು ಹೇಳಿದರು.
ಅಪರ ಸಿವಿಲ್ ನ್ಯಾಯಾಧೀಶ ಪ್ರಕಾಶ್ ಚನ್ನಪ್ಪ ಕುರುಬೆಟ್, ಸಹಾಯಕ ಸರ್ಕಾರಿ ವಕೀಲೆ ಮಮತ, ವಕೀಲರ ಸಂಘದ ಅಧ್ಯಕ್ಷ ಎಂ.ಆರ್. ಸರ್ವೇಶ್ ಮಾತನಾಡಿದರು. ವಕೀಲರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ವಕೀಲ ಎಸ್.ಎನ್. ಸುಬ್ಬಣ್ಣ ಜ್ಯೋತಿ ಬೆಳಗಿಸಿ ಕಾರ್ಯಕ್ರಮದ ಉದ್ಘಾಟಿಸಿದರು.
ಭಾರತೀಯ ದಂಡ ಸಂಹಿತೆ ಮತ್ತು ದಂಡ ಪ್ರಕ್ರಿಯೆ ಸಂಹಿತೆ ತಿದ್ದುಪಡಿ ಕುರಿತು ಹಿರಿಯ ವಕೀಲ ಬಿ.ಎನ್. ರವಿ ಹಾಗೂ ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ಸಂರಕ್ಷಣಾ ಕಾಯ್ದೆ ಕುರಿತು ಹಿರಿಯ ವಕೀಲ ಜೆ.ಎಸ್. ಕೇಶವಮೂರ್ತಿ ಉಪನ್ಯಾಸ ನೀಡಿದರು. ಹಿರಿಯ ವಕೀಲ ವೆಂಕಟೇಶಮೂರ್ತಿ ಮಲ್ಲೇಶ್, ಕೆ.ವಿ. ಹಿರಿಯಣ್ಣ, ಕಲ್ಯಾಣಕುಮಾರ್ ಇತರರು ಇದ್ದರು.
ಪಾರ್ವತಿ ಪಾಟೀಲ್ ಪ್ರಾರ್ಥಿಸಿದರು. ವಕೀಲರ ಸಂಘದ ಕಾರ್ಯದರ್ಶಿ ಶಿವಕುಮಾರ್ ಸ್ವಾಗತಿಸಿದರು. ಲೋಕೇಶ್ ವಂದಿಸಿದರು. ವಿಜಯಕುಮಾರ್ ನಿರೂಪಿಸಿದರು.