ಎಂಇಎಸ್ ಶಾಸಕರ ಅಣಕು ಶವಯಾತ್ರೆ
ಬೇಲೂರು: ಬೆಳಗಾವಿ ಅಧಿವೇಶನದಲ್ಲಿ ಮರಾಠಿ ಭಾಷೆಯಲ್ಲಿ ಮಾತನಾಡಿದ ಹಾಗೂ ಸರ್ಕಾರದ ಬಗ್ಗೆ ಹಗುರವಾಗಿ ಮಾತನಾಡಿರುವ ಎಂಇಎಸ್ ಶಾಸಕರನ್ನು ಕೂಡಲೇ ರಾಜ್ಯಪಾಲರು ವಜಾ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್ ನೇತೃತ್ವದಲ್ಲಿ ಸಂಭಾಜಿ ಪಾಟೀಲ್ ಪ್ರತಿಕೃತಿ ದಹಿಸಿ ರಸ್ತೆ ತಡೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿಜ ಮುಖಂಡರು, ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಎಂಇಎಸ್ ಶಾಸಕರಾದ ಸಂಭಾಜಿ ಪಾಟೀಲ್ ಮತ್ತು ಅರವಿಂದ್ ಪಾಟೀಲ್ ಕನ್ನಡ ನಾಡಿನ ಬಗ್ಗೆ ಅವಹೇಳನ ಮಾತುಗಳನ್ನು ಆಡಿದ್ದು, ಕೂಡಲೇ ವಿಧಾನಸಭಾ ಸದಸ್ಯತ್ವ ರದ್ದು ಮಾಡಬೇಕು, ಕನ್ನಡದ ಬಗ್ಗೆ ಹೀನಾಯವಾಗಿ ಮಾತನಾಡಿರುವ ಈ ಶಾಸಕರ ಬಗ್ಗೆ ನಾಡಿನ ವಿಧಾನಸಭಾ ಸದಸ್ಯರು ಜಾಣ ಮೌನ ವಹಿಸಿದ್ದಾರೆ ಎಂದು ಟೀಕಿಸಿದರು.
ಕಳೆದ ಹಲವು ವರ್ಷದಿಂದ ನಾಡು-ನುಡಿಗೆ ಹೋರಾಟ ನಡೆಸಿದ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಡಿ.2ರಂದು ಪ್ರತಿಭಟನೆ ಹಮ್ಮಿಕೊಂಂಡಿದ್ದು ಸಂಭಾಜಿ ಪಾಟೀಲ್ನಂತಹ ಕನ್ನಡ ವಿರೋಧಿಗಳಿಗೆ ತಕ್ಕಪಾಠ ಕಲಿಸಲಿದ್ದೇವೆ ಎಂದರು.
ಕರವೇ ಮುಖಂಡ ಖಾದರ್ ಮಾತನಾಡಿದರು. ಪ್ರತಿಭಟನೆಯಲ್ಲಿ ಕರವೇ ಕಾರ್ಯಕರ್ತರಾದ ಪ್ರಸನ್ನಕುಮಾರ್, ವಿಜಯಲಕ್ಷ್ಮಿ, ಶೇಖ್, ನಾಗರಾಜ್, ತೀರ್ಥಂಕರ್ ಇದ್ದರು.