ಪೆಟ್ರೋಲಿಯಂ ಬದಲಿ ಇಂಧನ ಸಂಶೋಧನೆ ಅಗತ್ಯ: ನಟರಾಜ್
ಕ.ಪ್ರ.ವಾರ್ತೆ ಅರಸೀಕೆರೆ ನ.28
ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡು ಮುಗಿದು ಹೋಗುತ್ತಿರುವ ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಉಂಟಾಗಲಿದ್ದು, ಈ ಸಂಪನ್ಮೂಲ ಮಿತವಾಗಿ ಬಳಸಿ ಬದಲಿ ಇಂಧನ ಸಂಶೋಧಿಸಬೇಕಾದ ಅಗತ್ಯತೆ ಇದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೆಟ್ರೋಲಿಯಂ ಉತ್ಪನ್ನಗಳು ಮುಗಿದು ಹೋಗುತ್ತಿದ್ದು ಇದರ ಒಂದೊಂದು ಹನಿಯೂ ಅತ್ಯಮೂಲ್ಯವಾಗಿದ್ದು ಇದನ್ನು ಜಾಗರೂಕತೆಯಿಂದ ಮಿತವಾಗಿ ಬಳಸಿ ಎಂದು ಕರೆ ನೀಡಿದರು.
ತೀರ್ಪುಗಾರರಾಗಿ ಭಾಗವಹಿಸಿದ್ದ ಜಿಲ್ಲಾ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಶ್ರೀನಿವಾಸ ನಟೇಕರ್ ಮಾತನಾಡಿ, ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಬೇರೆ ಬೇರೆ ಕಡೆಯಿಂದ ಭಾಗವಹಿಸುತ್ತಾರೆ. ಅಲ್ಲಿ ಆತ್ಮವಿಶ್ವಾಸ ಹಾಗೂ ಪ್ರಾಯೋಗಿಕವಾಗಿ ವಿವರಿಸಬೇಕಾಗುತ್ತದೆ. ಪ್ರತಿಯೊಂದು ಯೋಜನೆಯನ್ನು ಒಗ್ಗಟ್ಟಾಗಿ ಕೈಗೊಳ್ಳಬೇಕಾಗುತ್ತದೆ. ರಾಜ್ಯ ಮಟ್ಟದಲ್ಲಿ ವಿವರಣೆ ನೀಡುವಾಗ ನಾವೆಲ್ಲರೂ ಸಂಶೋಧನೆ ಕೈಗೊಂಡಿದ್ದೇವೆಂದೇ ಹೇಳಬೇಕಾಗುತ್ತದೆ. ಇಲ್ಲದಿದ್ದಲ್ಲಿ ಅಂಕಗಳು ಕಡಿತಗೊಳ್ಳಲಿವೆ ಎಂದು ಎಚ್ಚರಿಸಿದರು.
ಬಾಳೇನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಆರ್. ಸ್ವಾಮಿ ಮಾತನಾಡಿ, ನ.30ರಂದು ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಜಿಲ್ಲೆಯಿಂದ ನಾಲ್ಕು ತಂಡಗಳು ಅರಸೀಕೆರೆಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಬಸವರಾಜೇಂದ್ರ ಡೆಮಾನ್ಟ್ರೇಷನ್ ಪ್ರೌಢಶಾಲೆ, ಆದಿಚುಂಚನಗಿರಿ ಹಾಗೂ ಗುರುಕುಲ ಇಂಟರ್‌ನ್ಯಾಷನಲ್ ಪ್ರೌಢಶಾಲೆಗಳು ಭಾಗವಹಿಸಲಿದ್ದು, ಈ ಮಕ್ಕಳು ಸ್ಪರ್ಧೆಗೆ ತಯಾರಾಗಬೇಕು. ಈ ಬಾರಿ ಇಸಾನ್ ಧೂಮಕೇತು ಆಗಸದಲ್ಲಿ ಗೋಚರಿಸಲಿದ್ದು ವೀಕ್ಷಿಸಲು ಸಿದ್ಧರಾಗಿ ಎಂದು ಕರೆ ನೀಡಿದರು.
ಬಾಳೇನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಸಂತೋಷ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸದಸ್ಯ ಮಹೇಶ್, ಶಿಕ್ಷಕ ದಯಾನಂದ್, ಡಾ. ಜಗದೀಶ್, ಅರುಣ್‌ಕುಮಾರ್, ಶಿಕ್ಷಕರಾದ ಮಂಜುನಾಥ್, ಮಮತಾ ಇದ್ದರು.