ಬಿಇಒ ಆದೇಶಕ್ಕೆ ಕರವೇ ಖಂಡನೆ
ಕನ್ನಡಪ್ರಭ ವಾರ್ತೆ, ಸಕಲೇಶಪುರ, ನ.28
ವಿದ್ಯಾರ್ಥಿಗಳಿಗೆ ಯಾವುದೇ ಸಂದೇಶ ನೀಡದ ಹಿಂದಿ ಭಾಷೆಯ ಕ್ರಿಶ್-3 ಚಿತ್ರ ನೋಡುವಂತೆ ಆದೇಶ ನೀಡಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಆದೇಶ ಅರ್ಥಹೀನವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ಪಟ್ಟಣದ ತೇಜಸ್ವಿ ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿ, ಪ್ರತಿಭಟಿಸಿದ ಘಟನೆ ನಡೆಯಿತು.
3 ದಿನಗಳಿಂದ ಪಟ್ಟಣದ ತೇಜಸ್ವಿ ಚಿತ್ರಮಂದಿರದಲ್ಲಿ ತಾಲೂಕಿನ ಬಹುತೇಕ ಶಾಲಾ ಮಕ್ಕಳನ್ನು ಕರೆತಂದು ಚಿತ್ರ ತೋರಿಸಲಾಗುತ್ತಿದೆ. ಆದರೆ ಹಿಂದಿ ಭಾಷೆಯ ಈ ಚಿತ್ರ ಬಹುತೇಕ ವಿದ್ಯಾರ್ಥಿಗಳಿಗೆ ಅರ್ಥವಾಗುವುದಿಲ್ಲ. ಅಲ್ಲದೆ, ವಿದ್ಯಾರ್ಥಗಳಿಗೆ ಸಂದೇಶ ನೀಡುವಂಥ ಯಾವುದೇ ಕಥೆಯು ಈ ಚಿತ್ರದಲ್ಲಿ ಇಲ್ಲ. ಆದರೂ, ಶಿಕ್ಷಣ ಇಲಾಖೆ ಈ ಚಿತ್ರ ವೀಕ್ಷಿಸುವಂತೆ ಆದೇಶ ಜಾರಿ ಮಾಡಿರುವುದು, ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡದಲ್ಲೇ ಹಲವು ಅತ್ಯುತ್ತಮ ಚಿತ್ರಗಳಿದ್ದರೂ ಈ ಚಿತ್ರಗಳಿಗಿಲ್ಲದ ಮಾನ್ಯತೆ ಹಿಂದಿ ಚಿತ್ರಕ್ಕೆ ಏಕೆ ಎಂದು ಪ್ರಶ್ನಿಸಿದ ಮುಖಂಡರು, ಕಳೆದ ಎರಡು ದಿನಗಳ ಹಿಂದೆಯೇ ಚಿತ್ರ ವೀಕ್ಷಣೆಗೆ ವಿದ್ಯಾರ್ಥಿಗಳನ್ನು ಕರೆತರದಂತೆ ಎಚ್ಚರಿಕೆ ನೀಡಿದ್ದರು. ಶಿಕ್ಷಣ ಇಲಾಖೆ ಹಾಗೂ ಚಿತ್ರಮಂದಿರದ ಮಾಲೀಕರು ಎಚ್ಚರಿಕೆಯನ್ನು ನಿರ್ಲಕ್ಷಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರವೇ ಪ್ರತಿಭಟನೆಗೆ ಮಣಿದ ಚಿತ್ರಮಂದಿರದ ಮಾಲೀಕರು ತಕ್ಷಣವೇ ಈ ಚಿತ್ರವನ್ನು ರದ್ದುಗೊಳಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದೆ ಪಡೆಯಲಾಯಿತು.
ಪ್ರತಿಭಟನೆಯ ನೇತೃತ್ವವವನ್ನು ಕರವೇ ತಾಲೂಕು ಅಧ್ಯಕ್ಷ ಸುರೇಶ್, ಪ್ರತಾಪ್ ವಹಿಸಿದ್ದರು.
ಆದೇಶ ವಾಪಸ್
ಹಿಂದಿ ಸಿನಿಮಾ ಕ್ರಿಶ್-3ನಲ್ಲಿ ವಿಜ್ಞಾನಕ್ಕೆ ಸಂಬಂಧಪಟ್ಟ ವಿಷಯಗಳಿರುವುದರಿಂದ ಶಾಲಾ ಸಮಯ ಹೊರತುಪಡಿಸಿ ಪೋಷಕರು, ಶಿಕ್ಷಕರ ಅನುಮತಿ ಇದ್ದರೆ ಚಿತ್ರ ವೀಕ್ಷಿಸುವಂತೆ ಸೂಚಿಸಲಾಗಿತ್ತು. ಆದರೆ ಕರವೇ ಕಳೆದ ಎರಡು ದಿನಗಳ ಹಿಂದೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಆದೇಶವನ್ನು ವಾಪಸ್ ಪಡೆಯಲಾಗಿದೆ.
- ಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ