ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರೈತನ ಆತ್ಮಹತ್ಯೆ; ಬಿಜೆಪಿ ಧರಣಿ

Mainashree
Updated On : 28 Nov 2013, 9:02 am

ಕ.ಪ್ರ.ವಾರ್ತೆ  ಹಾಸನ  ನ.28
ಬೆಳಗಾವಿ ಸುವರ್ಣ ಸೌಧದ ಎದುರು 3 ದಿನಗಳಿಂದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ರೈತ ವಿಠಲ್ ಅರಭಾವಿ ಅವರು ವಿಷ ಸೇವಿಸಿ ಸಾವನ್ನಪ್ಪಿದ್ದು, ಇದಕ್ಕೆ ರಾಜ್ಯ ಸರ್ಕಾರದ ಧೋರಣೆಯೇ ಕಾರಣ ಎಂದು ಖಂಡಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಬಿಜೆಪಿ ಕಚೇರಿಯಿಂದ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿ ಆಗಮಿಸಿ ಕೆಲಕಾಲ ಧರಣಿ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ನಂತರ ಪಕ್ಷದ ಪ್ರಮುಖರು ಮಾತನಾಡಿ, ಹಗಲು ರಾತ್ರಿ ಎನ್ನದೇ ಸರ್ಕಾರದ ವಿರುದ್ಧ ಕಬ್ಬು ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸಿ ಎಂದು ರೈತ ಸಮೂಹ ಪ್ರತಿಭಟಿಸುತ್ತಿದ್ದರು. 3 ದಿನದಿಂದಲೂ ಸರ್ಕಾರ ಈ ಬಗ್ಗೆ ಗಮನಹರಿಸದ ಕಾರಣ ನಿರಾಸೆಗೊಂಡ ವಿಠಲ ಅರಭಾವಿ ಎಂಬ ರೈತ ಸರ್ಕಾರದ ಧೋರಣೆ ಮತ್ತು ನಿರ್ಲಕ್ಷ್ಯದ ಬಗ್ಗೆ ಹತಾಶೆಗೊಂಡು ವಿಷ ಸೇವಿಸಿ ಆತ್ಮಾರ್ಪಣೆ ಮಾಡಿಕೊಂಡಿದ್ದಾರೆ ಎಂದು ಖಂಡಿಸಿದರು.
ಕಬ್ಬು ಬೆಳೆಗೆ ವೈಜ್ಞಾನಿಕವಾಗಿ ಉತ್ಪಾದನಾ ವೆಚ್ಚಕ್ಕೆ ತಕ್ಕಂತೆ ಬೆಲೆ ನಿಗದಿಪಡಿಸಬೇಕು. ರೈತರ ಎಲ್ಲಾ ಬೆಳೆಗಳಿಗೂ ವೈಜ್ಞಾನಿಕವಾದ ಬೆಲೆ ನಿಗದಿ ಮಾಡಬೇಕು. ದೇಶ ಮತ್ತು ರಾಜ್ಯದಲ್ಲಿ ರೈತರು ಬಹುಸಂಖ್ಯಾತರು ಶೇ.80ರಷ್ಟು ಜನ ರೈತರಿದ್ದು. ಈ ಸಮೂಹದಲ್ಲಿ ಎಲ್ಲ ಜಾತಿ, ವರ್ಗ, ಪಂಗಡದವರೆಲ್ಲರೂ ಇದ್ದಾರೆ. ಈ ರೈತ ಸಮೂಹಕ್ಕೆ ಸವಲತ್ತು ಕೊಟ್ಟರೆ ರಾಜ್ಯದ ಬಹಳಷ್ಟು ಜನತೆಗೆ ನ್ಯಾಯ ಒದಗಿಸಿದಂತಾಗುತ್ತದೆ ಎಂದು ತಿಳಿಸಿದರು.
ಕೂಡಲೇ ಮುಖ್ಯಮಂತ್ರಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ರೈತರ ಪಹಣಿ ಮತ್ತು  ಭೂಮಾಪನದ ಹೆಚ್ಚಿಸಿರುವ ವೆಚ್ಚವನ್ನು ತಕ್ಷಣವೇ ಇಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರೇಣುಕುಮಾರ್, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಜಿ.ಎಂ. ಚಂದ್ರಶೇಖರಪ್ಪ, ನಗರಸಭೆ ಮಾಜಿ ಸದಸ್ಯ ಪ್ರಸನ್ನಕುಮಾರ್, ಯುವ ಮುಖಂಡ ನಾಗೇಶ್ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement