ಸುದ್ದಿ ಸಂಕ್ಷೇಪ
ಕಡೂರಿನಲ್ಲಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ
ಹಾಸನ: ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನ.29ರಂದು ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ನಡೆಯಲಿದೆ. ಕಡೂರಿನ ಕೋಟೆಯಲ್ಲಿರುವ ಶಾರದಾ ಸಮುದಾಯ ಭವನದಲ್ಲಿ ಬೆಳಗ್ಗೆ 10ಕ್ಕೆ ಕಾರ್ಯಕಾರಿಣಿ ನಡೆಯಲಿದ್ದು, ಸಭೆಯಲ್ಲಿ ಬಿಜೆಪಿ ರಾಜ್ಯ ಮುಖಂಡರು ಭಾಗವಹಿಸಲಿದ್ದಾರೆ.
ಮಹಿಳಾ ಮೋರ್ಚಾ ಕಾರ್ಯಕಾರಿಣಿ
ಹಾಸನ: ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನ.30ರಂದು ಬೆಳಗ್ಗೆ 11.30ಕ್ಕೆ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯಕಾರಿಣಿ ನಡೆಯಲಿದೆ. ಬಿಜೆಪಿ ಮಹಿಳಾ ಮೋರ್ಚಾ ಮೈಸೂರು ವಿಭಾಗದ ಪ್ರಭಾರಿ ಹಾಗೂ ರಾಜ್ಯ ಕಾರ್ಯದರ್ಶಿ ವಿದ್ಯಾ ಅರಸ್, ಪ್ರಧಾನ ಕಾರ್ಯದರ್ಶಿ ಮಮತಾ ಉದಯ್, ಕಾರ್ಯದರ್ಶಿ ಪುಲಶ್ಯ ರೈ ಮತ್ತು ಕಾರ್ಯಾಲಯ ಕಾರ್ಯದರ್ಶಿ ಲತಾ ಅವರು ಭಾಗವಹಿಸುವರು.
ರಾತ್ರಿ ವೇಳೆ ವಿದ್ಯುತ್ ಕಡಿತ; ಓದಿಗೆ ತೊಂದರೆ
ಹಾರನಹಳ್ಳಿ: ಹಾರನಹಳ್ಳಿ ಸುತ್ತಮುತ್ತಲೂ ಗ್ರಾಮಗಳಲ್ಲಿ ರಾತ್ರಿ 7ರಿಂದ 8 ಸಮಯದಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡುತ್ತಿದ್ದು, ವಿದ್ಯಾರ್ಥಿಗಳ ಓದಿಗೆ ತೊಂದರೆಯಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಸ್ವಾಮಿ ಆರೋಪಿಸಿದ್ದಾರೆ. ನಿರಂತರ ಜ್ಯೋತಿಕ್ಕಾಗಿ ಲಕ್ಷಾಂತರ ರು. ವ್ಯಯ ಮಾಡಿ ವಿದ್ಯುತ್ ಕಂಬ ವೈರುಗಳನ್ನು ಮಂಜೂರಾಗಿದ್ದರೂ ಇಲ್ಲಿಯವರೆಗೂ ಹಾರನಹಳ್ಳಿ ಚೆಸ್ಕಾಂ ನಿರಂತರ ಜ್ಯೋತಿ ಕೊಡಲು ಸೆಸ್ಕ್ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಹಾರನಹಳ್ಳಿ ಗ್ರಾಮದಲ್ಲಿ ಹಳೆ ಕಾಪರ್ ವಿದ್ಯುತ್ ವೈರು ಕಂಬಗಳ ಬದಲಾವಣೆ ಬಗ್ಗೆ ಚೆಸ್ಕಾಂನ ಅರಸೀಕೆರೆ ಎಇಇ ಗಮನಕ್ಕೆ ತಂದರೂ ಇಲ್ಲಿಯವರೆಗೆ ಆ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಬರೀ ಟೆಂಡರ್ ಕರೆದಿರುವುದಾಗಿ 6 ತಿಂಗಳೊಳಗೆ ಇದೇ ಸಬೂಬು ಹೇಳುತ್ತಿದ್ದಾರೆ. ತಕ್ಷಣ ಹಾರನಹಳ್ಳಿಯಲ್ಲಿ ಹಳೇ ವಿದ್ಯುತ್ ಕಂಬ ಬದಲಾವಣೆ ಹಾಗೂ ರ್ಯಾಬಿಟ್ ವೈರು ಅಳವಡಿಕೆ ಮಾಡುವುದರ ಜತೆ ಕರೆಂಟ್ ಲೋಡ್ ಶೆಡ್ಡಿಂಗ್ ಮಾಡದಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಡಿ.2ರಂದು ಕಾರ್ತಿಕೋತ್ಸವ
ಹಳೇಬೀಡು: ಇಲ್ಲಿನ ಪುಷ್ಪಗಿರಿ ಬೆಟ್ಟದ ಮೇಲೆ ನೆಲೆಸಿರುವ ಪುಷ್ಪಗಿರಿ ಮಲ್ಲಿಕಾರ್ಜುನ ಸ್ವಾಮಿಯವರ ಕಾರ್ತಿಕೋತ್ಸವ ಮತ್ತು ಜಾತ್ರಾ ಮಹೋತ್ಸವವನ್ನು ಡಿ.2ರಂದು ರಾತ್ರಿ ಏರ್ಪಡಿಸಲಾಗಿದೆ. ರಾತ್ರಿ 9ರಿಂದ ಬಿಲ್ವ ಪತ್ರೋತ್ಸವ, ದೇವರಿಗೆ ಪುಷ್ಪಾಲಂಕಾರ ಮುಂತಾದ ಉತ್ಸವ ನೆರವೇರಲಿವೆ. ಮಹೋತ್ಸವದ ಅಂಗವಾಗಿ ದೇವಾಲಯದಲ್ಲಿ ದಾಸೋಹ ಕಾರ್ಯಕ್ರಮ ಏರ್ಪಡಿಸಲಾಗಿದೆ. ಭಕ್ತರು ಎಲ್ಲ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.