ಹಾಡು, ನಾಟಕಗಳಿಂದ ಭಾವನೆಗಳ ಅನಾವರಣ
ಕ.ಪ್ರ.ವಾರ್ತೆ ಹಾಸನ ನ.28
ಸಾಂಸ್ಕೃತಿಕ ಸಂವಹನವಾದ ಜನಸಾಮಾನ್ಯರ ಭಾವನೆಗಳನ್ನು ಹಾಡು, ನಾಟಕ, ಕಲೆ ಮತ್ತು ಸಾಹಿತ್ಯದ ಮೂಲಕ ದಾಖಲಿತ ರೂಪದಲ್ಲಿ ಹೊರತರುವ ಪ್ರಯತ್ನವಾಗಿದೆ. ಈ ಪ್ರಯತ್ನದಲ್ಲಿ ಉತ್ತರ ಬಡಾವಣೆ ವಾರ್ಡಿನ ಜನರು ವಿಶೇಷವಾಗಿ ಮಹಿಳೆಯರ ವ್ಯಕ್ತಿತ್ವ ವಿಕಸನ ವೇದಿಕೆಯಾಗಿದೆ ಎಂದು ಭಾರತ ಜ್ಞಾನ- ವಿಜ್ಞಾನ ಸಮಿತಿಯ ತಾಲೂಕು ಅಧ್ಯಕ್ಷೆ ಮಮತಾ ಶಿವು ಹೇಳಿದರು.
ಇತ್ತೀಚೆಗೆ ಹಾಸನ ನಗರದ ಉತ್ತರ ಬಡಾವಣೆ ಘಟಕವು ನಗರದ ಎಸ್‌ಜಿಆರ್ ಶಾಲೆ ಆವರಣದಲ್ಲಿ ಮಾಸಿಕವಾಗಿ ಹಮ್ಮಿಕೊಳ್ಳುವ ಸಾಂಸ್ಕೃತಿಕ ಸಂವಹನ 2ನೇ ತಿಂಗಳ ಚಟುವಟಿಕೆಯಲ್ಲಿ ಮಾತನಾಡಿದ ಅವರು, ಈ ವೇದಿಕೆಯ ಮೂಲಕ ಪ್ರತಿಯೊಬ್ಬರು ಮಾನಸಿಕವಾಗಿ ತಮ್ಮ ತಮ್ಮ ಹೃದಯಾಂತರಾಳದ ಭಾವನೆಗಳನ್ನು ಸಂವಹನ ಮಾಡುವ ಚಟುವಟಿಕೆಯಾಗಿದೆ ಎಂದರು.
ಮಕ್ಕಳನ್ನು ಶೈಕ್ಷಣಿಕವಾಗಿ ಬೆಳೆಸುವಲ್ಲಿ ತಾಯಂದಿರ ಪಾತ್ರದ ಬಗ್ಗೆ ವಿವರಿಸಿದ ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಕಾರ್ಯದರ್ಶಿ ಅಹಮದ್, ಓದುವ ವಿದ್ಯಾರ್ಥಿಗಿಂತ ತಾಯಿ ಹೆಚ್ಚಾಗಿ ಮಕ್ಕಳ ಬೆಳವಣಿಗೆ ಹಾಗೂ ಅಭಿವೃದ್ಧಿ ಕುರಿತು ಚಿಂತಿತಳಾಗಿರುತ್ತಾಳೆ. ಹಾಗಾಗಿ ಆಕೆ ಸಾಮಾಜಿಕ ಬದುಕು, ಶೈಕ್ಷಣಿಕ ವಿಧಾನ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಹೆಚ್ಚು ವೈಜ್ಞಾನಿಕವಾಗಿ ರೂಢಿಸಿಕೊಳ್ಳಬೇಕಿದೆ. ಆಕೆಯ ಪ್ರೌಢತ್ವ ಮಕ್ಕಳಲ್ಲಿ ಹೊಸ ಚೈತನ್ಯ ತರಲಿದೆ ಎಂದರು.
ಮಕ್ಕಳ ಮಾನಸಿಕ ಸ್ಥೀಮಿತತೆ ಅವರು ಬೆಳೆಯುವ ಪರಿಸರ, ಅವರ ಶಿಕ್ಷಕರ, ಪೋಷಕರ ಹಾಗೂ ಸ್ನೇಹಿತರ ವರ್ತನೆಯ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಪ್ರತಿ ವಿದ್ಯಾರ್ಥಿಯಲ್ಲೂ ಒಳಿತು-ಕೆಡುಕಗಳನ್ನು ಗುರುತಿಸಿ ಸ್ವಾವಲಂಬಿ ಚಿಂತನೆ ಮಾಡುವ ಹಾಗೂ ಸ್ವಯಂ ನಿರ್ಧಾರ ತೆಗೆದುಕೊಳ್ಳುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಿದೆ ಎಂದು ಶಿಕ್ಷಕ ದೇವರಾಜೇಗೌಡ ಮಕ್ಕಳ ಹಾಗೂ ಪೋಷಕರ ಪ್ರಶ್ನೆಗಳಿಗೆ ಉತ್ತರಿಸುತ್ತ ಮಾತನಾಡಿದರು.
ಮಕ್ಕಳ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಘಟಕ ಸಮಿತಿಯು ಹಮ್ಮಿಕೊಂಡಿದ್ದ ನಾನಾ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ತೀರ್ಪುಗಾರರಾಗಿ ಭಾಗವಹಿಸಿದ್ದ ಅರಕಲಗೂಡು ಶಿಕ್ಷಕಿ ಪರ್ವಿನಾ ತಾಜ್ ಹಾಗೂ ಎಸ್‌ಜಿಆರ್ ಶಾಲೆಯ ಆಡಳಿತಾಧಿಕಾರಿ ಶಿವಣ್ಣ ಬಹುಮಾನ ವಿತರಿಸಿದರು. ಸಭೆಯ ಅಧ್ಯಕ್ಷತೆಯನ್ನು ಉತ್ತರ ಬಡಾವಣೆ ಘಟಕದ ಉಪಾಧ್ಯಕ್ಷ ಗೋಪಾಲ್ ವಹಿಸಿದ್ದರು.
ಖಜಾಂಚಿ ರೇಖಾ ನಿರೂಪಿಸಿದರು. ಉತ್ತರ ಬಡಾವಣೆ ಬಿಜಿವಿಎಸ್ ಘಟಕದ ಕಾರ್ಯದರ್ಶಿ ರವೀಶ್ ಎಚ್.ಆರ್ ಸ್ವಾಗತಿಸಿದರು. ಘಟಕ ಸದಸ್ಯೆ ಭಾಗ್ಯ ವಂದಿಸಿದರು.