ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಲ್ಪಸಂಖ್ಯಾತರಿಗೆ ಸೌಲಭ್ಯ ಒದಗಿಸಿ; ಡಿಸಿ ತಾಕೀತು

Rashmi Kasaragodu
Updated On : 29 Nov 2013, 11:54 am

ಕ.ಪ್ರ.ವಾರ್ತೆ   ಹಾಸನ   ನ.29
ಸರ್ಕಾರದಿಂದ ನಾನಾ ಇಲಾಖೆಗಳ ಮೂಲಕ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಜಾರಿಗೆ ತಂದಿರುವ ಯೋಜನೆಗಳನ್ನು ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಪ್ರಮಾಣಿಕವಾಗಿ ಒದಗಿಸುವಂತೆ ವಿವಿಧ ಇಲಾಖೆ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ತಾಕೀತು ಮಾಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಅನುಷ್ಠಾನ ಇಲಾಖೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲ ಇಲಾಖೆಗಳು ಸಭೆಗೆ ಅಂಕಿ-ಅಂಶಗಳನ್ನು ತಯಾರಿಸಿ ಒದಗಿಸುವ ಬದಲು ಸರ್ಕಾರ ನಿಗದಿಗೊಳಿಸಿರುವ ಅಲ್ಪಸಂಖ್ಯಾತರ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ತಮ್ಮ ಗುರಿಯಾಗಿರಬೇಕು ಎಂದರು.
ಅಂಗನವಾಡಿ ಕೇಂದ್ರ ತೆರೆಯಲು ಸೂಚನೆ: ಫಲಾನುಭವಿಗಳ ಆಯ್ಕೆಯನ್ನು ನಿಷ್ಠೆಯಿಂದ ನಿರ್ವಹಿಸಬೇಕು. ಪ್ರತಿ ಯೋಜನೆಗಳ ಮಾಹಿತಿಯನ್ನು ಇಲಾಖಾವಾರು ಅಲ್ಪಸಂಖ್ಯಾತರ ಜನಾಂಗಕ್ಕೆ ತಲುಪಿಸಲು ಹೆಚ್ಚಿನ ಪ್ರಚಾರ ನೀಡುವುದರೊಂದಿಗೆ ಜನಾಂಗದ ಮುಖಂಡರಿಗೂ ಮಾಹಿತಿ ಒದಗಿಸಲು ಜಿಲ್ಲಾಧಿಕಾರಿ ಕರೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಅಂಗನವಾಡಿ ಕೇಂದ್ರಗಳಿಗೆ ಅಲ್ಪಸಂಖ್ಯಾತರ ಮಕ್ಕಳನ್ನು ಕರೆತರಲು ಕಾಳಜಿ ವಹಿಸಬೇಕು. ಅಂಗನವಾಡಿ ಕೇಂದ್ರಕ್ಕೆ ಆಗಮಿಸುವ ಮಕ್ಕಳಿಗೆ ಪೌಷ್ಟಿಕ ಆಹಾರ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಅಲ್ಪಸಂಖ್ಯಾತ ಜನಾಂಗದವರು ವಾಸಿಸುವ ಸ್ಥಳದಲ್ಲಿ ಹೆಚ್ಚುವರಿ ಅಂಗನವಾಡಿ ಕೇಂದ್ರಗಳನ್ನು ತೆರೆಯಲು ಸೂಚಿಸಿದರು.
ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಇಲಾಖೆ ಮತ್ತು ಅಲ್ಪಸಂಖ್ಯಾತರ ನಿಗಮದ ಅಧಿಕಾರಿಗಳು ಖುದ್ದಾಗಿ ಫಲಾನುಭವಿಗಳ ಆಯ್ಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸೌಲಭ್ಯಗಳನ್ನು ಒದಗಿಸುವ ಸಂಬಂಧ ವಿವಿಧ ಇಲಾಖೆಗಳಲ್ಲಿರುವ ತೊಂದರೆಗಳ ನಿವಾರಣೆಗೆ ಸೂಕ್ತ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ಸರ್ಕಾರಕ್ಕೆ ಪ್ರಸ್ತಾವನೆ: ಶಿಕ್ಷಣ ಇಲಾಖೆಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಜಾರಿಗೆ ತಂದಿರುವ ಕೆಜಿಟಿವಿ ಹಾಗೂ ಮದರಸ ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆಗೆ ಹೆಚ್ಚಿನ ಗಮನ ಹರಿಸುವಂತೆ ಹಾಗೂ ಈ ಯೋಜನೆಗೆ ಜನಾಂಗದ ವಿದ್ಯಾರ್ಥಿಗಳ ಸರ್ವೆ ನಡೆಸಿ ಆಯ್ಕೆ ಮಾಡಿ ಸೌಲಭ್ಯ ಒದಗಿಸಬೇಕೆಂದರು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಜಾರಿ ಇರುವ ವಿದ್ಯಾರ್ಥಿಗಳ ಪ್ರೋತ್ಸಾಹಧನ, ವಿದ್ಯಾರ್ಥಿ ನಿಲಯಗಳ ನಿರ್ವಹಣೆ, ಕಾನೂನು ಪದವೀಧರರಿಗೆ ತರಬೇತಿ ಹಾಗೂ ಖಾಸಗಿ ವಿದ್ಯಾರ್ಥಿ ನಿಲಯ ಸ್ಥಾಪನೆ ಮಾಡುವವರಿಗೆ ಸಹಾಯಧನ ಕಲ್ಪಿಸುವಾಗ ನಿಗದಿತ ಗುರಿ ಸಾಧಿಸುವಂತೆ ಇಲಾಖೆ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಜಿಲ್ಲಾ ಪಂಚಾಯ್ತಿ ಮೂಲಕ ಅಲ್ಪಸಂಖ್ಯಾತರ ವಸತಿ ಸೌಲಭ್ಯಕ್ಕಾಗಿ ಜಾರಿಗೊಳಿಸಿರುವ ಇಂದಿರಾ ಆವಾಸ್ ಹಾಗೂ ಬಸವ ವಸತಿ ಯೋಜನೆಗಳಡಿ ಫಲಾನುಭವಿಗಳ ಆಯ್ಕೆ ಗುರಿಯನ್ನು ಪೂರ್ಣಗೊಳಿಸಿ ನಿಗದಿತ ಗುರಿಗಿಂತ ಹೆಚ್ಚುವರಿ ಫಲಾನುಭವಿಗಳ ಬಗ್ಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಮುಸ್ಲಿಮರಿಗೆ 12 ಅಂಶಗಳು: ನಗರಸಭೆ ಪುರಸಭೆ ವ್ಯಾಪ್ತಿಯಲ್ಲಿ ಹೆಚ್ಚು ಅಲ್ಪಸಂಖ್ಯಾತರು ವಾಸಿಸುತ್ತಿದ್ದು, ವಿವಿಧ ಇಲಾಖೆಗಳ ಮೂಲಕ ದೊರೆಯುವ ನಿಗದಿತ ಸೌಲಭ್ಯವನ್ನು ಕಲ್ಪಿಸಲು ಮುಖ್ಯಾಧಿಕಾರಿಯವರು ಗಮನ ಹರಿಸಬೇಕೆಂದು ಹೇಳಿದರು.
ನಾನಾ ಇಲಾಖೆಗಳ ಮೂಲಕ ಅಲ್ಪಸಂಖ್ಯಾತರಿಗೆ ಒದಗಿಸಲಾಗುವ ಸಾಲ ಸೌಲಭ್ಯ, ಸಹಾಯಧನದ ಅರ್ಜಿಗಳನ್ನು ಬ್ಯಾಂಕ್ ಅಧಿಕಾರಿಗಳು ಸಣ್ಣ ಪುಟ್ಟ ಕಾರಣಗಳಿಗೆ ತಿರಸ್ಕರಿಸುತ್ತಿದ್ದಾರೆ. ಇದರಿಂದ ಜನಾಂಗದ ಏಳಿಗೆಗೆ ತೊಡಕಾಗುತ್ತಿದೆ ಎಂದು ಅಲ್ಪಸಂಖ್ಯಾತರ ಮುಸ್ಲಿಂ ಜನಾಂಗದ 15 ಅಂಶಗಳ ಕಾರ್ಯಕ್ರಮದ ಅನುಷ್ಠಾನದ ಜಿಲ್ಲಾ ಸದಸ್ಯ ರಫೀಕ್ ದರ್ಬಾರ್ ಅವರ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಯವರು ಬ್ಯಾಂಕ್ ಅಧಿಕಾರಿಗಳು ಯೋಜನೆ ಕುರಿತ ಸ್ಥೂಲ ಪರಿಶೀಲನೆ ನಡೆಯುವಂತಿಲ್ಲ. ಕಾನೂನಿನಲ್ಲಿ ಎಲ್ಲಾ ನಿಯಮಗಳನ್ನು ಸಂಬಂಧಪಟ್ಟ ಇಲಾಖೆ ಮುಖ್ಯಸ್ಥರು ಪರಿಶೀಲಿಸುತ್ತಾರೆ. ಆರ್ಥಿಕ ಸೌಲಭ್ಯ ಒದಗಿಸುವ ಸಂದರ್ಭದಲ್ಲಿ ಸರಳ ವಿಧಾನಗಳನ್ನು ಬಳಸುವಂತೆ ಸೂಚಿಸಿದರು.
ಅಧಿಕಾರಿಗಳಿಗೆ ಸೂಚನೆ: ಅಲ್ಪಸಂಖ್ಯಾತರಿಗೆ ಸೌಲಭ್ಯ ಒದಗಿಸಲು ಪ್ರತ್ಯೇಕ ಹೆಲ್ಪ್ಲೈನ್ ತೆರೆದು ಈ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕು. ಅಲ್ಪಸಂಖ್ಯಾತರಿಗೆ ಸೌಲಭ್ಯ ಒದಗಿಸುವಲ್ಲಿ ಬ್ಯಾಂಕ್ ಅಧಿಕಾರಿಗಳು ನಿರಾಸಕ್ತಿ ವಹಿಸುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಈ ಬಗ್ಗೆ ಎಚ್ಚರ ವಹಿಸುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಮುಂದಿನ ಸಭೆಗೆ ನಿಖರವಾದ ಪ್ರಗತಿಯ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಮಿತಿ ಸದಸ್ಯರಿಗೆ ಮುಂಚಿತವಾಗಿ ನೀಡುವುದರೊಂದಿಗೆ ಮಾಹಿತಿಯ ಪ್ರತಿಯನ್ನು ಸಭೆಗೆ ತರುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಮುಸ್ಲಿಂ ಜನಾಂಗದ ಸದಸ್ಯರಾದ ರಫೀಕ್ ದರ್ಬಾರ್, ಜೈನ ಜನಾಂಗದ ಸದಸ್ಯರಾದ ಪ್ರೇಮಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಚಿದಾನಂದ್, ಜಿಲ್ಲಾ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾಧಿಕಾರಿ ಜಗದೀಶ್, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ವಿಜಯಲಕ್ಷ್ಮಿ, ಪೌರಾಯುಕ್ತ ಕೃಷ್ಣಮೂರ್ತಿ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು, ಲೀಡ್ ಬ್ಯಾಂಕ್ ವಿಭಾಗೀಯ ಪ್ರಬಂಧಕ ಸಾಲೋಮನ್ ಮನೆಜಸ್ ಹಾಗೂ ನಾನಾ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಅಗತ್ಯ ಮಾಹಿತಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement