ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಆಡಿಸುವಾತನ ಕೈಚಳಕದಲಿ ಎಲ್ಲ ಅಡಗಿದೆ...

Rashmi Kasaragodu
Updated On : 30 Nov 2013, 12:03 pm

ಮಾದಿಹಳ್ಳಿ ವೆಂಕಟೇಶ್
ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿಗೆ ಏತ ನೀರಾವರಿ ಯೋಜನೆಯಿಂದ ರೈತರ ಜಮೀನಿಗೆ ನೀರು ನೀಡುವ ಯೋಜನೆಗೆ ಕಳೆದ 20 ವರ್ಷಗಳಿಂದ ಬಂದ ಸರ್ಕಾರಗಳು ಹಣ ನೀಡುತ್ತಿದ್ದರೂ ಕಾಮಗಾರಿ ಪೂರ್ಣಗೊಳ್ಳುವುದಿರಲೀ ಮಾಡಿರುವ ಕಾಮಗಾರಿಯನ್ನು ಮತ್ತೆ ಮಾಡುವಷ್ಟು ಮಟ್ಟದಲ್ಲಿ ಕಾಮಗಾರಿ ಕಳಪೆಯಿಂದ ಕೂಡಿದೆ.
ಕಾಚೇನಹಳ್ಳಿ ಬಳಿ ನಿರ್ಮಿಸಿರುವ ಜಾಕ್ವೆಲ್ನಿಂದ 5 ಕಿ.ಮೀ. ಮಾತ್ರ ಅಲ್ಪ  ಗುಣಮಟ್ಟದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಅಲ್ಲಿಂದ ಕಾಲುವೆಗಳು, ಎಂಬಾಕ್ಮೆಂಟ್, ಸೇತುವೆ ಹಾಗೂ ಲೈನಿಂಗ್ ನಿರ್ಮಿಸುವ ಕಾರ್ಯದಲ್ಲಿ ದೊಡ್ಡ ಮಟ್ಟದ ಅವ್ಯವಹಾರವಾಗಿದ್ದು, ಇಡೀ ಕಾಮಗಾರಿ ಕಳಪೆಯಿಂದ ಕೂಡಿದೆ.
ಕಳೆದ ಸರ್ಕಾರ ಕಾಚೇನಹಳ್ಳಿ ಏತ ನೀರಾವರಿ ಯೋಜನೆಗೆ 40 ಕೋಟಿ ಬಿಡುಗಡೆ ಮಾಡಿದ್ದು, ಅದರಲ್ಲಿ 30 ಕೋಟಿಗೂ ಅಧಿಕ ವೆಚ್ಚದಲ್ಲಿ ಕಾಮಗಾರಿ ನಿರ್ಮಾಣ ಕಾರ್ಯಕ್ಕೆ ಟೆಂಡರ್ ಕರೆದು ಕಾಮಗಾರಿ ಪೂರ್ಣಗೊಳಿಸಿ ಗುತ್ತಿಗೆದಾರರು ಬಿಲ್ ತೆಗೆದುಕೊಳ್ಳುವ ಮುನ್ನವೇ ಕಾಮಗಾರಿ ಗುಣಮಟ್ಟ ಕಳೆದುಕೊಂಡಿದೆ.
ಲೈನಿಂಗ್ ಕಾಮಗಾರಿ ಬಿರುಕು: ಗುತ್ತಿಗೆದಾರರು ಸಂಪೂರ್ಣ ಮಾಡಿರುವ ಉತ್ತಮ ಕೆಲಸವೆಂದರೆ ನಾಲೆ ತೋಡಿರುವುದು ಬಿಟ್ಟರೆ, ಉಳಿದೆಲ್ಲ ಕಾಮಗಾರಿಗಳೂ ಕೂಡ ಕಳಪೆಯಿಂದ ಕೂಡಿದ್ದು, ಎಂಬಾಕ್ಮೆಂಟ್ ನಿರ್ಮಿಸಿ ಅದನ್ನು ರೋಲ್ ಮಾಡದಿರುವುದರಿಂದ ಕಾಲುವೆ ತೋಡಿದ ಸಂದರ್ಭದಲ್ಲಿಯೇ ಮಣ್ಣು ಕುಸಿದು ಬಿದ್ದಿದೆ.
ಕುಸಿದು ಬಿದ್ದ ಮಣ್ಣನ್ನು ಹೊರತೆಗೆದು ಅದಕ್ಕೆ ಲೈನಿಂಗ್ ಮಾಡಿರುವುದರಿಂದ ಸಂಪೂರ್ಣ ಲೈನಿಂಗ್ ಕಾಮಗಾರಿಯಲ್ಲಿ ಬಿರುಕು ಕಾಣಿಸಿಕೊಂಡರೆ ಕೆಲ ಪ್ರದೇಶದಲ್ಲಿ ಸಂಪೂರ್ಣ ಕುಸಿದು ಬಿದ್ದಿರುವುದು ಎಲ್ಲರಿಗೂ ಕಾಣ ಸಿಗುತ್ತದೆ.
ನಾಲೆ ನೀರು ಹರಿದು ಹೋಗಲು ಕಾಮಗಾರಿ ಮಾಡಿರುವ ನಾಲೆಯಲ್ಲಿ ಮಳೆ ನೀರು ಶೇಖರಣೆಯಾಗಿ ಎಂಬಾಕ್ಮೆಂಟ್ಗಳು ಕುಸಿದಿವೆಯೆಂದರೆ ಅದನ್ನು ನಂಬಲು ಸಾಧ್ಯವಿಲ್ಲವೆಂಬುದು ಎಲ್ಲರೂ ವ್ಯಕ್ತಪಡಿಸಿದರೆ, ಗುತ್ತಿಗೆದಾರರು ಕಾಮಗಾರಿ ಅದ್ಯಾವ ಮಟ್ಟದಲ್ಲಿ ಕಾಮಗಾರಿ ಮಾಡಿಸಿರಬೇಕೆಂದು ಊಹಿಸಲು ಅಸಾಧ್ಯವಾಗಿದೆ.
ಮುಕ್ತಿ ಎಂದು?: ಬಿ. ಸಮುದ್ರವಳ್ಳಿ ಸಮೀಪ ಕಾಚೇನಹಳ್ಳಿ ಏತ ನೀರಾವರಿ ಯೋಜನೆಯ ಎರಡನೇ ಹಂತದ ಕಾಮಗಾರಿಯ ಲೈನಿಂಗ್, ಎಂಬಾಕ್ಮೆಂಟ್ ಸಂಪೂರ್ಣ ಕುಸಿದಿದ್ದು, ಇದನ್ನು ನೋಡಿದ ಸುತ್ತಮುತ್ತಲಿನ ಜನತೆ ಇಂತಹ ಕಾಮಗಾರಿ 20 ವರ್ಷಗಳಿಂದ ನಡೆಯುತ್ತಿದೆ. ಇದಕ್ಕೆ ಮುಕ್ತಿ ಸಿಗುವುದು ಎಂದು ಎಂಬುದನ್ನು ಕಾಯ್ದು ನೋಡಬೇಕಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
2012ರ ಅಂತ್ಯದಲ್ಲಿ ಬಿ. ಸಮುದ್ರವಳ್ಳಿ ಬಳಿ ನಡೆದಿರುವ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದ್ದು, ಪ್ರಸಕ್ತ ವರ್ಷದಲ್ಲಿ  ಸುಮಾರಿಗೆ ಸುರಿದ ಮಳೆಗೆ ಕೆಲವೆಡೆಗಳಲ್ಲಿ ಕುಸಿದು ಹೋದರೆ, ಕಾಮಗಾರಿ ಮಾಡಿದ ದಿನದಿಂದ ಒಂದು ದಿನವೂ ಕ್ಯೂರಿಂಗ್ ಮಾಡದ ಕಾರಣ ಬೆರಳಿನಲ್ಲಿಯೇ ಲೈನಿಂಗ್ಗೆ ಹಾಕಿರುವ ಸಿಮೆಂಟ್ನ್ನು ಕೆರೆದು ಬೀಳಿಸಬಹುದಾದ ಉದಾಹರಣೆಗಳು ಕಂಡು ಬಂದರೆ, ಇನ್ನೂ ಕೆಲವೆಡೆಗಳಲ್ಲಿ ಲೈನಿಂಗ್ ಕಾಮಗಾರಿ ಸಂಪೂರ್ಣ ಬಿರುಕು ಬಿಟ್ಟಿರುವುದು ಸರ್ವೆ ಸಾಮಾನ್ಯವಾಗಿದೆ.
ಕಾಚೇನಹಳ್ಳಿ ಮೊದಲ ಹಂತದ ಏತ ನೀರಾವರಿ ಕಾಮಗಾರಿ ಅಲ್ಪ ಸ್ವಲ್ಪ ಬಾಕಿಯಿದ್ದು, ಅದನ್ನು ಪೂರ್ಣಗೊಳಿಸಿದರೆ ಮೊದಲ ಹಂತದ ನೀರೆತ್ತುವ ಕಾಮಗಾರಿ ಪ್ರಾರಂಭವಾದರೆ ಮೋಟಾರ್ನಿಂದ ಎತ್ತಿದ ನೀರನ್ನು ಯಾವ ಕಾಲುವೆಗೆ ಬಿಟ್ಟರೂ ಅದು ಒಡೆದು ಹಳ್ಳಗಳ ಮುಖೇನ ಹೇಮಾವತಿ ನದಿ ಸೇರುವ ಸಂದರ್ಭಗಳು ಹೆಚ್ಚಿರುವುದರಿಂದ ಇಂತಹ ಕಾಮಗಾರಿಗೆ ಪ್ರತಿ ಸರ್ಕಾರಗಳು 30ರಿಂದ 40 ಕೋಟಿ ಹಣ ನೀಡುವುದು ಕಾಮಗಾರಿಗೋ, ಈ ಭಾಗದ ಜನತೆಯ ಮೆಚ್ಚುಗೆ ಪಡೆಯಲೋ, ಅಥವಾ ಗುತ್ತಿಗೆದಾರರ ಜೇಬು ತುಂಬಿಸಿ ಅವರಿಂದ ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳು ಮಾಮೂಲು ಪಡೆಯಲೋ ತಿಳಿಯದಾಗಿದೆ.
ಹೋರಾಟಕ್ಕಿಳಿದ ಧರ್ಮರಾಜು: ಕಾಚೇನಹಳ್ಳಿ ಏತ ನೀರಾವರಿ ಯೋಜನೆಯಲ್ಲಿ ನಡೆದಿರುವ ಅವ್ಯವಹಾರ ಹಾಗೂ ಕಳಪೆ ಕಾಮಗಾರಿಯನ್ನು ಲೋಕಾಯುಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುವ ಸಂಬಂದ ಸರ್ಕಾರದಿಂದ ಕೆಲ ದಾಖಲೆಗಳನ್ನು ಪಡೆಯಲು ತಿಂಗಳುಗಟ್ಟಲೇ ಶ್ರಮಿಸಿ ನಂತರದಲ್ಲಿ ದಾಖಲೆಗಳನ್ನು ಸಂಗ್ರಹಿಸಿರುವ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಂಡಲದ ಉಪಾಧ್ಯಕ್ಷ  ಧರ್ಮರಾಜು ಲೋಕಾಯುಕ್ತ ಮೊರೆಹೋಗಲು ಮುಂದಾಗಿದ್ದಾರೆ.
ನೀರಾವರಿ ಯೋಜನೆಯನ್ನು ಜಿಲ್ಲಾಧಿಕಾರಿ ಮೊದಲು ವೀಕ್ಷಣೆ ಮಾಡಿ ಸರ್ಕಾರಕ್ಕೆ ಒಂದು ವರದಿ ನೀಡಬೇಕು ಎಂದು ಆಗ್ರಹಿಸಿದ ಧರ್ಮರಾಜು ಲೋಕಾಯುಕ್ತರು ಒಮ್ಮೆ ಕಾಮಗಾರಿಯನ್ನು ಪರಿಶೀಲಿಸಬೇಕು. ಅವರಿಗೆ ಕಳಪೆ ಎಂದು ಕಂಡು ಬಂದಲ್ಲಿ ಗುತ್ತಿಗೆದಾರರು, ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು.
ರೇವಣ್ಣರ ಎಡಗೈ, ಬಲಗೈ: ಕ್ಷೇತ್ರದ ಶಾಸಕ ಎಚ್.ಡಿ. ರೇವಣ್ಣ ಅವರು ವಿರೋಧ ಪಕ್ಷದಲ್ಲಿ ನಿಂತು ರಾಜ್ಯದಲ್ಲಿನ ಕಳಪೆ ಕಾಮಗಾರಿ ಕುರಿತು ಹೇಳಿಕೆ ನೀಡುವುದನ್ನು ಬಿಟ್ಟು, ತಮ್ಮ ಕ್ಷೇತ್ರದಲ್ಲಿ ಆಗಿರುವ ಕಳಪೆ ಕಾಮಗಾರಿ ಬಗ್ಗೆ ಮಾತನಾಡುವುದನ್ನು ಮೊದಲು ಮಾಡಬೇಕಾಗಿದ್ದು, ಅದನ್ನು ಅವರಿಂದ ಮಾಡಲು ಸಾಧ್ಯವಲ್ಲ ಎಂಬುದು ದಂಡಿಗನಹಳ್ಳಿ ಹೋಬಳಿಯ ಜನತೆಗೆ ತಿಳಿದಿದೆ. ನಾಲೆ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರೆಲ್ಲರೂ ರೇವಣ್ಣ ಅವರ ಎಡಗೈ ಮತ್ತು ಬಲಗೈ ಆಗಿರುವುದೇ ಇದಕ್ಕೆ ಕಾರಣವಾಗಿದೆ.
ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಎಚ್.ಡಿ. ದೇವೇಗೌಡ ಅವರು ಕಳಪೆ ಕಾಮಗಾರಿ ಮಾಡಿದವರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಕೆಲ ಗುತ್ತಿಗೆದಾರರ ಹೆಸರನ್ನು ಪ್ರಸ್ತಾಪಿಸಿದ್ದರು. ಆದರೆ ಅವರ ತವರಿನಲ್ಲಿಯೇ ಆಗಿರುವ ಕಳಪೆ ಕಾಮಗಾರಿ ದೇವೇಗೌಡ ಅವರಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು.
ವಿರೋಧ ಪಕ್ಷದ ನಾಯಕರಾಗಿರುವ ಎಚ್.ಡಿ. ಕುಮಾರಸ್ವಾಮಿ ಅವರು ಈ ಕ್ಷೇತ್ರದ ಹುಟ್ಟಿರುವುದರಿಂದ ಕ್ಷೇತ್ರದ ಅರಿವು ಅವರಿಗಿದ್ದು, ಈ ಕಾಮಗಾರಿ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರದ ಗಮನ ಸೆಳೆಯುವಂತೆ ಅವರಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ಕಾಮಗಾರಿ ಬಗ್ಗೆ ಸ್ಥಳೀಯರನ್ನು ಪ್ರಶ್ನಿಸಿದರೆ ಕಾಮಗಾರಿ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅಧಿಕಾರಿಗಳು ನೆಪಮಾತ್ರವಾಗಿದ್ದು, ಗುತ್ತಿಗೆದಾರರಿಗೆ ಎಚ್.ಡಿ. ರೇವಣ್ಣ ಅವರ ಬೆಂಬಲವಿರುವದರಿಂದ ಅಧಿಕಾರಿಗಳು ಯಾವುದೇ ಕಾಮಗಾರಿ ಬಗ್ಗೆ ಪ್ರಶ್ನಿಸುವ ಹಕ್ಕನ್ನು ಕಳೆದುಕೊಂಡಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement