ಎಂಇಎಸ್ ಶಾಸಕರ ಶಿಕ್ಷೆಗೆ ಆಗ್ರಹಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ ಬೇಲೂರು ನ.29
ಕನ್ನಡ ನಾಡು, ನುಡಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಎಂಇಎಸ್ ಶಾಸಕರಿಗೆ ಉಗ್ರ ಶಿಕ್ಷೆಯನ್ನು ನೀಡಬೇಕು ಎಂದು ಕರ್ನಾಟಕ ಕಾವಲು ಪಡೆ ತಾಲೂಕು ಘಟಕದ ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಕಾವಲು ಪಡೆ ತಾಲೂಕು ಅಧ್ಯಕ್ಷ ಪೈಂಟ್ ರವಿ ನೇತೃತ್ವದಲ್ಲಿ ಚನ್ನಕೇಶವಸ್ವಾಮಿ ದೇವಾಲಯದಿಂದ ಹೊರಟ ನೂರಾರು ಕಾರ್ಯಕರ್ತರು ಬಸ್ ನಿಲ್ದಾಣದ ಮುಂಭಾಗ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ನಾಡು- ನುಡಿಯ ಬಗ್ಗೆ ಅವಹೇಳನ ಮಾತುಗಳನ್ನು ಆಡಿದ ಸಂಭಾಜಿ ಪಾಟೀಲ್ ಮತ್ತು ಅರವಿಂದ್ ಪಾಟೀಲ್ಗೆ ಧಿಕ್ಕಾರದ ಘೋಷಣೆ ಹಾಕುತ್ತಾ ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಕಬ್ಬು ಬೆಳೆಗೆ ವೈಜ್ಞಾನಿಕ ಬೆಲೆ ನೀಡಬೇಕು, ಆತ್ಮಹತ್ಯೆ ಮಾಡಿಕೊಂದ ವಿಠಲ್ ಭಿಮಪ್ಪ ಅರಬಾವಿಗೆ ಸೂಕ್ತ ಪರಿಹಾರ ನೀಡಬೇಕು, ನೀಡಿದ ಪರಿಹಾರ ಕುಟುಂಬಕ್ಕೆ ತಲುಪುವ ವ್ಯವಸ್ಥೆ ಸರ್ಕಾರ ಮತ್ತು ಸಂಬಂಧ ಅಧಿಕಾರಿಗಳು ಮಾಡಬೇಕು ಎಂದ ಅವರು, ಮುಂದಿನ ದಿನದಲ್ಲಿ ನಾಡು-ನುಡಿಗೆ ದ್ರೋಹ ಎಸಗಿದವರ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಏಜಾಸ್, ಮಂಜುನಾಥ್, ನಾರಾಯಣ್, ಧರ್ಮೇಗೌಡ, ಕುಮಾರ್, ನಾಗೇಶ್ ಹಾಜರಿದ್ದರು.