ಖಾಸಗಿ ಸಂಸ್ಥೆಗಳಿಗೆ ಸರ್ಕಾರಿ ಜಾಹೀರಾತು ಖಂಡಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ ಅರಸೀಕೆರೆ ನ.29
ರಾಜ್ಯ ಸರ್ಕಾರ ಖಾಸಗಿ ಸಂಸ್ಥೆಗೆ ಜಾಹಿರಾತುಗಳನ್ನು ನೀಡುವ ಮೂಲಕ ತಾಲೂಕಿನಲ್ಲಿನ ಕಾರ್ಯನಿರತ ಪತ್ರಕರ್ತರನ್ನು ದುರುದ್ದೇಶದಿಂದ ಕಡೆಗಣಿಸುತ್ತಿದೆ ಎಂದು ಆರೋಪಿಸಿ ಶುಕ್ರವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಪ್ರತಿಭಟಿಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಬೆಳಗ್ಗೆ ತಾಲೂಕು ಪತ್ರಕರ್ತರ ಸಂಘದ ಸದಸ್ಯರು ಅಧ್ಯಕ್ಷ ರಾಮಚಂದ್ರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಿದರು.
ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ ಬಿ.ಎಸ್. ಸೇತುರಾಮ್ ಮಾತನಾಡಿ, ತಾಲೂಕು ಮಟ್ಟದಲ್ಲಿನ ಪತ್ರಕರ್ತರಿಗೆ ನಿಶ್ಚಿತ ಆದಾಯವಿಲ್ಲ. ಕಾರಣ ಅನೇಕ ರೀತಿಯ ಸಂಕಷ್ಟವನ್ನು ಇಲ್ಲಿನ ಪತ್ರಕರ್ತರು ಎದುರಿಸುತ್ತಿದ್ದಾರೆ. ಅವರಿಗೆ ತಾಲೂಕಿನ ನಾನಾ ಸರ್ಕಾರಿ ಇಲಾಖೆಗಳು ನೀಡುತ್ತಿದ್ದ ಜಾಹೀರಾತುಗಳ ಮೂಲಕ ಬರುತ್ತಿದ್ದ ಕಮೀಷನ್ ಹಣವು ಜೀವನ ಮಾರ್ಗಕ್ಕೆ ಉಪಯುಕ್ತವಾಗಿದ್ದು, ಇತ್ತೀಚೆಗೆ ರಾಜ್ಯ ಸರ್ಕಾರ ಇಲಾಖೆಗಳಲ್ಲಿ ಪಾರದರ್ಶಕ ಆಡಳಿತದ ನಡೆಸುವ ಹೆಸರಿನಲ್ಲಿ ಜಿಲ್ಲಾ ಕೇಂದ್ರಗಳಿಗೆ ಸರ್ಕಾರದ ಜಾಹೀರಾತು ನೀಡುವ ಅನ್ಯಾಯವನ್ನು ಉಂಟು ಮಾಡಿತ್ತು.
ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಮಾಡಾಳು ಶಿವಲಿಂಗಪ್ಪ, ಕಾರ್ಯದರ್ಶಿ ಪಿ. ಶಾಂತಕುಮಾರ್, ಖಜಾಂಚಿ ಎಲ್. ಮಂಜುನಾಥ್, ಪತ್ರಕರ್ತರಾದ ಟಿ. ಆನಂದ್, ಸಂಕೊಂಡನಹಳ್ಳಿ ಶೇಖರಪ್ಪ, ಎಚ್.ಡಿ. ಸೀತಾರಾಮು, ಮೋಹನ್ಕುಮಾರ್, ಆನಂದ್ ಕೌಶಿಕ್, ನವೀನ್ಕುಮಾರ್, ಹೇಮಂತ್ಕುಮಾರ್, ಬಿ.ವಿ. ವೀರಭದ್ರಪ್ಪ, ಕಣಕಟ್ಟೆ ಕುಮಾರ್, ಅಮೋಘ ಮೋಹನ್ ಹಾಜರಿದ್ದರು. ನಂತರ ತಾಲೂಕು ಕಚೇರಿಗೆ ಬಂದು ತಹಸೀಲ್ದಾರ್ ಕೇಶವಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು.