ಗಾಯನ ಸ್ಪರ್ಧೆಯಲ್ಲಿ ದಿವಾಕರ್ ಪ್ರಥಮ
ಹೊಳೆನರಸೀಪುರ: ಶಿಕ್ಷಕರ ಕಲ್ಯಾಣ ನಿಧಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಶಿಕ್ಷಕರಿಗಾಗಿ ಹಾಸನದಲ್ಲಿ ನಡೆದ ಜಿಲ್ಲಾ ಮಟ್ಟದ ಗಾಯನ ಸ್ಪರ್ಧೆಯಲ್ಲಿ ಹೊಳೆನರಸೀಪುರದ(ಪೇಟೆ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೆ.ಎಲ್. ದಿವಾಕರ ಅವರು ಪ್ರಾಥಮಿಕ ಶಾಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಗಾಯನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಕಸ ಸಂಗ್ರಹ ವಾಹನಕ್ಕೆ ಚಾಲನೆ
ಹಾಸನ: ನಗರದ 9ನೇ ವಾರ್ಡಿನಲ್ಲಿ ಕಸ ಸಂಗ್ರಹ ವಾಹನಕ್ಕೆ ಬುಧವಾರ ಆದಿಚುಂಚನಗಿರಿ ಶಾಖಾ ಮಠದ ಆವರಣದಲ್ಲಿ ಶಂಭುನಾಥ ಸ್ವಾಮೀಜಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸ್ವಾಮೀಜಿ ಮಾತನಾಡಿ, ಪ್ರತಿ ಮನೆಯ ಕಸವನ್ನು ರಸ್ತೆ ಬದಿಗೆ ಎಸೆಯದೆ ವಾಹನದಲ್ಲಿ ಹಾಕುವ ಮೂಲಕ ಪರಿಸರವನ್ನು ಕಾಪಾಡಬೇಕಾಗಿದ್ದು, ಪ್ಲಾಸ್ಟಿಕ್ ಅನ್ನು ಬೇರ್ಪಡಿಸಿ ಹಸಿ ಮತ್ತು ಒಣ ಕಸವನ್ನು ಬೇರೆ ಬೇರೆ ಹಾಕಬೇಕು. ಈ ರೀತಿ ಮಾಡುವುದರಿಂದ ನಗರದಲ್ಲಿ ಉತ್ತಮ ವಾತಾವರಣ ಸೃಷ್ಟಿಸಬಹುದು. ಈ ಕಾರ್ಯವನ್ನು ಸ್ವ-ಸಹಾಯ ಸಂಘದ ಸದಸ್ಯರು ನಿರ್ವಹಿಸುತ್ತಿರುವುದು ಮೆಚ್ಚುಗೆಯನ್ನುಂಟು ಮಾಡಿದೆ ಎಂದು ಶ್ಲಾಘಿಸಿದರು ಎಂದರು. 9ನೇ ವಾರ್ಡಿನ ನಗರಸಭೆ ಸದಸ್ಯ ಎಚ್.ಎಸ್. ಅನೀಲ್ಕುಮಾರ್, ಒಕ್ಕಲಿಗ ಸಂಘದ ಅಧ್ಯಕ್ಷ ಮುದ್ದೇಗೌಡ, ನಗರಸಭೆ ಆರೋಗ್ಯಾಧಿಕಾರಿ ಕೃಷ್ಣಮೂರ್ತಿ, ನಿಸರ್ಗ ಸ್ವ-ಸಹಾಯ ಸಂಘದವರು ಇದ್ದರು.