ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬರಕ್ಕೆ ಸೇರಿಸದ ಧೋರಣೆ ಖಂಡಿಸಿ ಡಿ.2ಕ್ಕೆ ಪ್ರತಿಭಟನೆ

Rashmi Kasaragodu
Updated On : 30 Nov 2013, 12:02 pm

ಕ.ಪ್ರ.ವಾರ್ತೆ   ಅರಸೀಕೆರೆ   ನ.29
ಅರಸೀಕೆರೆ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡುವಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಡಿ.2ರಂದು ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ ನಡೆಸಲಾಗುವುದು ಎಂದು ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಜಿ.ವಿ.ಟಿ. ಬಸವರಾಜು, ತಾಲೂಕು ಬಿಜೆಪಿ ಅಧ್ಯಕ್ಷ ಹರಳಕಟ್ಟ ರಮೇಶ್ ಹಾಗೂ ಬಿಜೆಪಿ ವಕ್ತಾರ ಎನ್.ಡಿ. ಪ್ರಸಾದ್ ತಿಳಿಸಿದ್ದಾರೆ.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ತಾಲೂಕಿನಾದ್ಯಂತ ಮಳೆ ಇಲ್ಲದೇ ರೈತರು ತತ್ತರಿಸುತ್ತಿದ್ದಾರೆ. ರಾಜ್ಯದಲ್ಲಿಯೇ ತೀವ್ರವಾದ ಮಳೆಯ ಅಭಾವದ ಕಾರಣ ಬರಗಾಲದ ಬವಣೆಯಲ್ಲಿರುವ ತಾಲೂಕಿನ ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಉಂಟಾಗಿದ್ದು, ಅಂತರ್ಜಲದ ಮಟ್ಟ ಕುಸಿತದಿಂದ ಸುಮಾರು 7 ಲಕ್ಷಕ್ಕೂ ಹೆಚ್ಚಿನ ತೆಂಗಿನ ಮರಗಳು ತೇವಾಂಶ ಕೊರತೆಯಿಂದ ನಾಶವಾಗಿದೆ ಎಂದು ಹೇಳಿದರು.
ಪಕ್ಕದ ಕೇರಳ ರಾಜ್ಯದಲ್ಲಿ ಪ್ರತಿಯೊಂದು ತೆಂಗಿನಮರಕ್ಕೆ ನೀಡುತ್ತಿರುವ 15 ಸಾವಿರ ಪರಿಹಾರ ನೀಡಬೇಕೆಂದು ಆಗ್ರಹಿಸಿದ ಅವರು ಈ ಬಗ್ಗೆ ತಾಲೂಕಿನ ಅನೇಕ ಸಂಘ-ಸಂಸ್ಥೆಗಳು ತೀವ್ರ ತರಹದ ಹೋರಾಟಗಳನ್ನು ಮಾಡಿದ್ದರೂ ರಾಜ್ಯ ಸರ್ಕಾರವು ನಮ್ಮ ತಾಲೂಕಿನ ಬಗ್ಗೆ ನಿರ್ಲಕ್ಷ್ಯ ವಹಿಸಿ ಪಕ್ಷಪಾತ ಧೋರಣೆ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.
ಯಾವುದೇ ಹಿಂಗಾರು ಮತ್ತು ಮುಂಗಾರು ಮಳೆಗಳು ಇಲ್ಲದೇ ವಾಸ್ತವಾಂಶವಾಗಿ ತಾಲೂಕಿನ ಭೂ ಪ್ರದೇಶವು ನೀರಿಲ್ಲದೇ ಪರಿತಪಿಸುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಲತಾಯಿ ಧೊರಣೆ ಮಾಡುತ್ತಿರುವುದಕ್ಕೆ ಹಾಸನ ಜಿಲ್ಲೆಯಲ್ಲಿ ತನ್ನ ಪಕ್ಷದ ಶಾಸಕರಿರುವ ಅರಕಲಗೂಡು ಮತ್ತು ಬೇಲೂರು ಕ್ಷೇತ್ರಗಳನ್ನು ಬರಗಾಲ ಪೀಡಿತವೆಂದು ಅವೈಜ್ಞಾನಿಕವಾಗಿ ಘೋಷಿಸಿರುವುದು ಉದಾಹರಣೆಯಾಗಿದೆ ಎಂದರು.
ಎಲ್ಲಾ ವರ್ಗದ ಕಡುಬಡವರಿಗೆ ಬಿಪಿಎಲ್ ಪಡಿತರ ಕಾರ್ಡ್ಗಳ ವಿತರಣೆ ಹಾಗೂ ಶಾದಿ ಭಾಗ್ಯ ಯೋಜನೆ ಜಾರಿಗೊಳಿಸಬೇಕೆಂದು ಅವರು ಆಗ್ರಹಿಸಿದರು. ನಿರಂತರ ಬರಗಾಲಕ್ಕೆ ತುತ್ತಾಗಿ ರಾಜ್ಯ ಸರ್ಕಾರವು ಅರಸೀಕೆರೆ ಕ್ಷೇತ್ರದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ಡಿ.2ರಂದು ಬೃಹತ್ ಪ್ರತಿಭಟನೆ ಏರ್ಪಡಿಸಲಾಗಿದೆ ಎಂದು ಹೇಳಿದರು.
ಬಿಜೆಪಿ ನಗರಾಧ್ಯಕ್ಷ ಕಲ್ಗುಂಡಿ ಹಿರಿಯಣ್ಣ, ಬಿಜೆಪಿ ಜಿಲ್ಲಾ ವಕ್ತಾರ ಎನ್.ಡಿ. ಪ್ರಸಾದ್ ಮಾತನಾಡಿದರು. ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯ ಡಿ.ಬಿ. ಗಂಗಾಧರ್, ತಾ. ಘಟಕದ ಕಾರ್ಯದರ್ಶಿ ಮನೋಜ್ಕುಮಾರ್, ಮುಖಂಡರಾದ ವೈ. ಕೆ ದೇವರಾಜ್, ಬೋರನಕೊಪ್ಪಲು ರವಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement