ಭೂ ಮಾಪಕರ ನೇಮಕ: ಶ್ರೀನಿವಾಸ್ ಪ್ರಸಾದ್
ಹಾಸನ: ರೈತರ ಜಮೀನುಗಳ ದುರಸ್ತಿಯನ್ನು ಸಕಾಲದಲ್ಲಿ ಮಾಡಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಕಂದಾಯ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಅವರು ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಅವರಿಗೆ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು. ಭೂ ಮಾಪಕರ ಕೊರತೆ ಇದ್ದು ಇದನ್ನು ಸರ್ಕಾರ ಮನಗಂಡು 1869 ಸರ್ಕಾರಿ ಭೂ ಮಾಪಕರ ನೇಮಕಾತಿಯನ್ನು ಪೂರ್ಣಗೊಳಿಸಲಾಗಿದ್ದು, ಈಗಾಗಲೇ ರಾಜ್ಯದ ನಾಲ್ಕು ಕೇಂದ್ರಗಳಲ್ಲಿ ಭೂ ಮಾಪಕರಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ 6 ತಿಂಗಳ ವೃತ್ತಿ ಬುನಾದಿ ತರಬೇತಿಯನ್ನು ನ.5ರಿಂದ ಪ್ರಾರಂಭಿಸಲಾಗಿದ್ದು, ತರಬೇತಿ ಪೂರ್ಣಗೊಂಡ ನಂತರ ರಾಜ್ಯದ ಎಲ್ಲ ತಾಲೂಕುಗಳಿಗೆ ಭೂ ಮಾಪಕರನ್ನು ನೇಮಕ ಮಾಡಿ, ಭೂ ಮಾಪನ ಮಾಡಿಸಿ, ದುರಸ್ತಿಪಡಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಇಂದು ತರಬೇತಿ
ಸಕಲೇಶಪುರ: ಕೃಷಿ ಇಲಾಖೆಯ ಪಕ್ಕದಲ್ಲಿರುವ ಲಯನ್ಸ್ ಸಭಾಂಗಣದಲ್ಲಿ ನ.30ರಂದು ಬೆಳಗ್ಗೆ 10.30ಕ್ಕೆ ರೈತರು, ಡೀಲರ್ಗಳಿಗೆ ಸುರಕ್ಷಿತ ಕೀಟನಾಶಕಗಳ ಬಳಕೆ ಕುರಿತು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾಹಿತಿ ಪಡೆದುಕೊಳ್ಳಲು ಸ. ಕೃಷಿ ನಿರ್ದೇಶಕ ಯೋಗೇಶ್ ಕೋರಿದ್ದಾರೆ.
ಮರಗಳ್ಳರ ಬಂಧನ
ಸಕಲೇಶಪುರ: ಸಿಲ್ವರ್ ಮರಗಳ್ಳರನ್ನು ಬಂಧಿಸಿರುವ ಯಸಳೂರು ಪೋಲಿಸರು ಸುಮಾರು 50 ಸಾವಿರ ಮೌಲ್ಯದ ಸಿಲ್ವರ್ ಮರಗಳನ್ನು ವಶಪಡಿಸಿಕೊಂಡ ಘಟನೆ ಗುರುವಾರ ನಡೆದಿದೆ. ಕಳೆದ ಒಂದು ವಾರದ ಹಿಂದೆ ತಾಲೂಕಿನ ಕೆರೋಡಿ ಗ್ರಾಮದಲ್ಲಿರುವ ಶಬ್ಬಿರ್ ಹುಸೇನ್,ಜಮುನಾ ಎಂಬವರ ಕಾಫಿ ತೋಟದಲ್ಲಿದ್ದ ಸಿಲ್ವರ್ ಮರಗಳನ್ನು ಕದ್ದು ಸಾಗಿಸಿದ್ದ ಆರೋಪಿಗಳನ್ನು ಪತ್ತೆ ಹಚ್ಚಿದ ಯಸಳೂರು ಪಿಎಸ್ಐ ಸಿದ್ದೇಶ್ ನೇತೃತ್ವ ಅಧಿಕಾರಿಗಳ ತಂಡ ಮಾಲು ಸಹಿತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.