ರೈತ, ದಲಿತ ಹೋರಾಟ ಬಲಿಷ್ಠ: ವೆಂಕಟೇಶ್ಮೂರ್ತಿ
ಕ.ಪ್ರ.ವಾರ್ತೆ ಹಾಸನ ನ.29
ಎಂಭತ್ತರ ದಶಕದಲ್ಲಿ ರೈತ ಹಾಗೂ ದಲಿತ ಚಳವಳಿಯ ಉಗ್ರ ಹೋರಾಟದ ಕಾರಣ ಕಾಂಗ್ರೆಸ್ ಸರ್ಕಾರ ಉರುಳಿ ಬಿದ್ದು ಪರ್ಯಾಯ ಸರ್ಕಾರ ಬರಲು ಕಾರಣವಾಯಿತು ಎಂದು ಪ್ರಗತಿಪರ ಚಿಂತಕ ಆರ್.ಪಿ. ವೆಂಕಟೇಶ್ಮೂರ್ತಿ ಹೇಳಿದ್ದಾರೆ.
ನಗರದ ಸಿಐಟಿಯು ಕಚೇರಿಯ ಶ್ರಮದಲ್ಲಿ ಬಿಜಿವಿಎಸ್, ಎಸ್ಎಫ್ ಐ, ಡಿವೈಎಫ್ ಐ, ಕರ್ನಾಟಕ ಪ್ರಾಂತ ರೈತ ಸಂಘ, ಸಿಐಟಿಯು ಹಾಗೂ ಇತರೆ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದುರಂತ ಎಂದರೆ ಸರ್ಕಾರ ಬದಲಾವಣೆಗೆ ಕಾರಣವಾದ ಈ ಎರಡು ಸಂಘಟನೆಗಳು ಪರ್ಯಾಯ ರಾಜಕಾರಣದ ಸೈದ್ಧಾಂತಿಕ ದೃಷ್ಟಿಕೋನ ಹಾಗೂ ರಾಜಕೀಯ ಚಿಂತನೆ ನಡೆಸಲಿಲ್ಲ ಎಂದು ವಿಷಾದಿಸಿದರು.
ರಚನಾತ್ಮಕ ಕಾರ್ಯಸೂಚಿ: ಇದರ ಪರಿಣಾಮ ರೈತ ಮತ್ತು ದಲಿತ ಹೋರಾಟದ ಫಲವನ್ನು ದೇವೇಗೌಡ, ರಾಮಕೃಷ್ಣ ಹೆಗ್ಗಡೆಯಂತಹವರ ಪಾಲಾಯಿತು. ನಂತರ ರೈತ ಹಾಗೂ ದಲಿತ ಚಳವಳಿಗಳು ಕಾಂಗ್ರೆಸಿಗರೊಂದಿಗೆ ಹಾಗು ಸ್ವಾರ್ಥಿಗಳ ಕೈಗೆ ಸಿಲುಕಿ ಹೋರಾಟದ ಹುರುಪು ನಾಮಾವಶೇಷವಾಯಿತು ಎಂದು ತಮ್ಮ ಹೋರಾಟದ ಬದುಕಿನ ಅಳಲನ್ನು ತೋಡಿಕೊಂಡರು.
ಎಲ್ಲ ಅನುಭವಗಳಿಂದ ನೈಜ ಜನಪರ ಹೋರಾಟಗಾರರು ತಮ್ಮ ತಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಡಿಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಹೊರತುಪಡಿಸಿದ ಮೂರನೇ ಪರ್ಯಾಯ ರಾಜಕೀಯ ರಂಗವನ್ನು ಕಟ್ಟಬೇಕಿದೆ. ಅದಕ್ಕಾಗಿ ರಚನಾತ್ಮಕ ಕಾರ್ಯಸೂಚಿಯನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ದೇಶದ ಹಾಗೂ ಕನ್ನಡ ನಾಡಿನ ಬೆಳವಣಿಗೆ ಜಾತಿ ಅಸ್ಪೃಶ್ಯತೆ, ಮೂಢನಂಬಿಕೆ ಹಾಗೂ ಜಾತಿ ಗುರುತಿಸುವಿಕೆಯ ಬೆಳವಣಿಗೆಯಿಂದ ಸಾಧ್ಯವಿಲ್ಲ. ಅದು ಭಾರತದ ಜಾತ್ಯತೀತ ಪರಂಪರೆ ಹಾಗೂ ಸಮಾಜವಾದಿ ದೃಷ್ಠಿಕೋನವನ್ನು ಕ್ಷೀಣಿಸುತ್ತದೆ. ರೈತ, ಕಾರ್ಮಿಕ ಹಾಗೂ ದಲಿತ ಚಳವಳಿಗಳು ಒಂದು ಸಾಮಾನ್ಯ ವೇದಿಕೆಯಡಿ ಒಂದಾಗಿ ಹೋರಾಡುವುದರ ಮೂಲಕ ಹೊಸ ಪರ್ಯಾಯ ಸೃಷ್ಟಿಸಲು ಸಾಧ್ಯ ಎಂದರು.
ಪ್ರಶಸ್ತಿಗಳು ಲಾಬೀಕರಣ: ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮೇಶ್ ಮಾತನಾಡಿ, ಭಾರತದ ಬಹುತೇಕ ಪ್ರತಿಷ್ಠಿತ ಪ್ರಶಸ್ತಿಗಳು ರಾಜಕೀಕರಣಗೊಂಡು ಲಾಬೀಕರಣದ ಮೂಲಕ ಪಡೆಯುವ ವಿಜಯವಾಗಿದೆ. ನೈಜ ಕಾಳಜಿ ಹೊಂದಿ ಕಾರ್ಯಚಟುವಟಿಕೆ ನಡೆಸುವ ಮಂದಿಗಳು ಅರ್ಹ ಪುರಸ್ಕಾರದಿಂದ ವಂಚಿತಗೊಳ್ಳುತ್ತಿರುವ ಸಂದರ್ಭದಲ್ಲಿ ಆರ್ಪಿವಿ ಯವರಿಗೆ ಲಾಬಿಯಿಲ್ಲದೆ ರಾಜ್ಯೋತ್ಸವ ಪ್ರಶಸ್ತಿ ಅವರ ಕೊರಳ ಬಳಸಿರುವುದು ಪ್ರಗತಿಪರ ಹೋರಾಟಗಳಿಗೆ ಸಂದ ಜಯ ಎಂದು ತಿಳಿಸಿದರು.
ಬಿಜಿವಿಎಸ್ನ ಅಹಮದ್, ಮಮತಾ ಶಿವು, ವೇದಶ್ರೀ ರಾಜ್, ಡಿವೈಎಫ್ನ ಗಿರೀಶ್, ಮುಂಜಾನೆ ಮಿತ್ರರ ಸುಧೀರ್, ದಲಿತ ಸಂಘಟನೆಗಳ ಮುಖಂಡರಾದ ಸಂದೇಶ್, ಸಮದ್, ಪತ್ರಕರ್ತ ರಫೀಕ್ ದರ್ಬಾರ್, ಮಾದಿಗ ದಂಡೋರದ ವಿಜಯಕುಮಾರ್, ಕಟ್ಟಡ ಕಾರ್ಮಿಕರ ಸಂಘದ ರಾಮೇಗೌಡ, ಆಜಾದ್ ಟಿಪ್ಪು ಸಂಘರ್ಷ ಸಮಿತಿಯ ಮುಬಷಿರ್ ಅಹ್ಮದ್ ಮುಂತಾದವರು ಭಾಗವಹಿಸಿ ಆರ್ಪಿ ಅವರಿಗೆ ಶುಭಾಶಯ ಕೋರಿ ಮಾತನಾಡಿದರು.
ವೈಚಾರಿಕ ಚಿಂತನೆ ಅನುಭವ: ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಐಟಿಯು ಹಿರಿಯ ಮುಖಂಡ ಜಿ.ಪಿ. ಸತ್ಯನಾರಾಯಣ ವಹಿಸಿ ಆರ್ಪಿವಿ ಅವರಿಗೆ ಪ್ರಶಸ್ತಿ ಬಂದಿರುವುದು ಜಿಲ್ಲೆಯ ಚಳವಳಿಯನ್ನು ಪ್ರಜಾಸತ್ತಾತ್ಮಕ ನೆಲೆಗಟ್ಟಿನಲ್ಲಿ ಕೊಂಡೊಯ್ಯಲು ಹಾಗಾಗಿ ಆರ್.ಪಿ.ಯವರ ಜಾತ್ಯತೀತ, ರೈತ ಮುಖಿ, ವೈಚಾರಿಕ ಚಿಂತನೆಯ ಅನುಭವ ಮುಂದಿನ ಪೀಳಿಗೆ ಜೊತೆಯಲ್ಲಿ ಪ್ರಾತ್ಯಕ್ಷಿಕೆಯಲ್ಲಿರಬೇಕು ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಡಿ.ಟಿ. ಶಿವಣ್ಣ ನಿರೂಪಿಸಿದರು, ಎಸ್ಎಫ್ಐ ಜಿಲ್ಲಾಧ್ಯಕ್ಷ ಎಂ.ಜಿ. ಪೃಥ್ವಿ ಸ್ವಾಗತಿಸಿದರು. ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಶಾವಲ್ ಹಮೀದ್ ವಂದಿಸಿದರು. ಡಿವೈಎಫ್ಐನ ವಸಂತಕುಮಾರ್ ಮತ್ತು ಸಂಗಡಿಗರು ಹೋರಾಟದ ಹಾಡುಗಳನ್ನು ಹಾಡಿದರು.