152 ನ್ಯಾಯಾಧೀಶರು, 1500ಕ್ಕೂ ಹೆಚ್ಚು ಸಿಬ್ಬಂದಿ ಶೀಘ್ರ ನೇಮಕ: ಸಚಿವ ಜಯಚಂದ್ರ
ಚನ್ನರಾಯಪಟ್ಟಣ: ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿಯಿರುವ 152 ನ್ಯಾಯಾಧೀಶರು ಹಾಗೂ 1500ಕ್ಕೂ ಹೆಚ್ಚು ಸಿಬ್ಬಂದಿ ನೇಮಕಾತಿ ಮಾಡಲಾಗುವುದು ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.
ಪಟ್ಟಣದಲ್ಲಿ 3.5 ಕೋಟಿ ವೆಚ್ಚದಲ್ಲಿ ನ್ಯಾಯಾಲಯದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ ನ್ಯಾಯಾಲಯದಲ್ಲಿ ಸಿಬ್ಬಂದಿ ಹಾಗೂ ನ್ಯಾಯಾಧೀಶರ ಕೊರತೆಯಿಂದ ವ್ಯಾಜ್ಯಗಳನ್ನು ಬಗೆಹರಿಸಲು ಹಿನ್ನಡೆಯಾಗುತ್ತಿರುವುದರಿಂದ ನ್ಯಾಯಾಧೀಶರು ಹಾಗೂ ಸಿಬ್ಬಂದಿಯನ್ನು ನೇಮಕ ಮಾಡುವಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದರು.
ನ್ಯಾಯಾಧೀಶರ ಹುದ್ದೆಗಳನ್ನು ತುಂಬುವಲ್ಲಿ ಸರ್ಕಾರ ತೀವ್ರ ಆಸಕ್ತಿ ತೋರಿದ್ದು, 152 ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆ ಮುಗಿದಿದ್ದು, ಆಯ್ಕೆಯಾಗಿರುವವರ ಪೊಲೀಸ್ ವರದಿ ಬಂದ ತಕ್ಷಣ ನ್ಯಾಯಾಲಯಗಳಿಗೆ ನಿಯೋಜನೆ ಮಾಡಲಾಗುವುದು ಎಂದು ತಿಳಿಸಿದರು.
ಜನಸಂಖ್ಯೆ ಹೆಚ್ಚಿದಂತೆ ನ್ಯಾಯಾಲಯದಲ್ಲಿ ಸಣ್ಣ ಪುಟ್ಟ ಪ್ರಕರಣಗಳಿಗೂ ಜನತೆ ನ್ಯಾಯಾಲಯದ ಮೆಟ್ಟಿಲೇರುತ್ತಿದ್ದು, ಎಷ್ಟು ಕೋರ್ಟ್ಗಳನ್ನು ತೆರೆದರೂ ಸಾಲದಾಗಿದ್ದು, ಇಂತಹ ಸಂದರ್ಭದಲ್ಲಿ ಸಾಮಾನ್ಯ ಜನತೆಯ ಪ್ರಕರಣಗಳನ್ನು ಹೆಚ್ಚು ದಿನಗಳ ಕಾಲ ನಡೆಸದೆ ರಾಜಿ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸುವ ಕಾರ್ಯ ಮಾಡಬೇಕಾಗಿದೆ.
ಕಟ್ಟಡ ಗುಣಮಟ್ಟ ಮುಖ್ಯ: ಜನಪ್ರತಿನಿಧಿಗಳು ಹಾಗೂ ನ್ಯಾಯಾಧೀಶರು ನ್ಯಾಯಾಲಯದ ಕಟ್ಟಡಗಳ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ಅವುಗಳ ವೀಕ್ಷಣೆ ಮಾಡಿದರೆ ಮಾತ್ರ ಕಟ್ಟಡದ ಗುಣಮಟ್ಟ ಕಾಣಸಿಗುತ್ತವೆ. ಕೇವಲ ಗುತ್ತಿಗೆದಾರರ ಹಿತ ನೋಡದೆ ಸಾರ್ವಜನಿಕ ಆಸ್ತಿಯ ಜವಬ್ದಾರಿ ಮುಖ್ಯವಾಗಿದೆ.
ಉತ್ತರ ಕರ್ನಾಟಕದಲ್ಲಿ ಕೆಲ ನ್ಯಾಯಾಲಯದ ಕಟ್ಟಡಗಳು ನಿರ್ಮಾಣವಾಗಿದ್ದು, ಕೆಲವೊಂದನ್ನು ಹೊರತುಪಡಿಸಿದರೆ ಇನ್ನೂ ಕೆಲವು ಕಟ್ಟಡಗಳು ಕಳಪೆಯಾಗಿದ್ದು ಕಂಡು ಬಂದ ಹಿನ್ನೆಲೆಯಲ್ಲಿ ಅವುಗಳನ್ನು ನೆಲಸಮ ಮಾಡಿಸಿ ಹೊಸದಾಗಿ ನಿರ್ಮಾಣ ಮಾಡುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಯಚಂದ್ರ ಅವರು ತಿಳಿಸಿದರು.
ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಮಾತನಾಡಿ, ಸಣ್ಣಪುಟ್ಟ ಕಾರಣಗಳಿಗೂ ಇಂದು ಜನತೆ ನ್ಯಾಯಾಲಯದ ಮೆಟ್ಟಿಲೇರುತ್ತಿರುವುದರಿಂದ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಣ್ಣ ಪುಟ್ಟ ಪ್ರಕರಣಗಳನ್ನು ಬಗೆಹರಿಸಲು ತ್ವರಿತ ವಿಲೇವಾರಿ ನ್ಯಾಯಾಲಯಗಳು ಹಾಗೂ ಮಧ್ಯಸ್ಥಿಕೆ ಕೇಂದ್ರಗಳನ್ನು ತೆರೆದು ರಾಜೀ ಮುಖೇನ ಪ್ರಕರಣಗಳನ್ನು ಬಗೆಹರಿಸಲಾಗುತ್ತಿದೆ ಎಂದು ತಿಳಿಸಿದರು.
ಕೆಲವೆಡೆಗಳಲ್ಲಿ ಸಮಿತಿಗಳೇ ರಚನೆಯಾಗಿಲ್ಲ: ವಕೀಲರು ತಮ್ಮ ಹಿತಕ್ಕಿಂತ ಕಕ್ಷಿದಾರರ ಹಿತವನ್ನು ಕಾಪಾಡುವುದರ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಕೇಸಿಗೆ ಸಂಬಂಧಿಸಿದಂತೆ ಎದುರಿನ ವ್ಯಕ್ತಿಯ ಸ್ಥಿತಿ ಹಾಗೂ ನ್ಯಾಯ ಯಾರ ಕಡೆಯಿದೆ ಎಂಬುದನ್ನು ವಕೀಲರು ಗಮನಿಸಿ ಮಾನವೀಯತೆ ಕಡೆಗೆ ತಾವು ನಿಲ್ಲಬೇಕು ಎಂದು ತಿಳಿಸಿದರು.
ರೈತರು ಕಳೆದ 40-50 ವರ್ಷಗಳಿಂದ ಬಗರ್ಹುಕುಂ ಜಮೀನನ್ನು ತಮಗೆ ನೀಡಬೇಕೆಂದು ದಾಖಲೆಗಳೊಂದಿಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ಈ ಬಗ್ಗೆ ಸರ್ಕಾರ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಸಮಿತಿ ರಚಿಸಿದ್ದರೂ ಅವುಗಳನ್ನು ಇತ್ಯರ್ಥಪಡಿಸಲು ಸಾಧ್ಯವಾಗಿಲ್ಲ. ಕೆಲವೆಡೆಗಳಲ್ಲಿ ಸಮಿತಿಗಳೇ ರಚನೆಯಾಗಿಲ್ಲದ ಕಾರಣ ಪ್ರಕರಣಗಳು ನ್ಯಾಯಾಲಯದ ಮೆಟ್ಟಲೇರಿವೆ. ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಕಾನೂನು ಸಚಿವರಿಗೆ ಸೂಚನೆ ನೀಡಿದರು.
ದಿನಾಂಕ ನಿಗದಿಯಾಗಲಿ: ಜಿಲ್ಲೆಯ ಹೇಮಾವತಿ ಜಲಾಶಯ ನಿರ್ಮಾಣಕ್ಕೆ ಭೂ ಸ್ವಾಧೀನದಿಂದ ನಾಲೆ ಹಾಗೂ ಇತರೆ ಕಾರಣಗಳಿಗೆ ರೈತರಿಂದ ಭೂ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಸೂಕ್ತ ಪರಿಹಾರ ನೀಡಿಲ್ಲವೆಂದು ರೈತರು ಪ್ರಕರಣವನ್ನು ನ್ಯಾಯಾಲಯದಲ್ಲಿ ಹೂಡಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿಗಳು ತಹಸೀಲ್ದಾರ್ ಹಾಗೂ ನ್ಯಾಯಾಲಯದ ಸಿಬ್ಬಂದಿ ಒಂದೆಡೆ ಸೇರಿ ಅಲ್ಲಿಗೆ ರೈತರನ್ನು ಕರೆಸಿ ಪ್ರಕರಣಗಳನ್ನು ಇತ್ಯರ್ಥಪಡಿಸುವಲ್ಲಿ ಒಂದು ಹೊಸ ಹೆಜ್ಜೆ ಇಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ದಿನಾಂಕ ನಿಗದಿ ಮಾಡಬೇಕು ಎಂದು ಕೋರಿದರು.
ಹೈಕೋರ್ಟ್ ನ್ಯಾಯಾಧೀಶರಾದ ಬಿ.ಎಸ್. ಪಾಟೀಲ್, ಕೇಶವನಾರಾಯಣ್, ಎ.ವಿ. ಚಂದ್ರಶೇಖರ್, ಶಾಸಕ ಸಿ.ಎನ್. ಬಾಲಕೃಷ್ಣ, ಜಿಲ್ಲಾಧಿಕಾರಿ ಅನ್ಪುಕುಮಾರ್, ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಸೋಮಶೇಖರ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ವೈ.ಕೆ. ಪುಟ್ಟಸ್ವಾಮಿಗೌಡ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.