ಉಪಗ್ರಹಗಳ ವೀಕ್ಷಣೆ
ಕನ್ನಡಪ್ರಭ ವಾರ್ತೆ, ಹಾಸನ, ನ.30
ಜಿಲ್ಲಾ ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ಹಾಸನ ಜಿಲ್ಲಾ ವಿಜ್ಞಾನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ಬೆಳಗಿನ ಆಗಸದಲ್ಲಿ ಟೆಲಿಸ್ಕೋಪಿನ ಮೂಲಕ ಗುರು ಗ್ರಹ ಮತ್ತದರ ಪ್ರಖ್ಯಾತ 4 ಗೆಲಿಲಿಯನ್ ಉಪಗ್ರಹಗಳಾದ ಐಯೋ, ಕ್ಯಾಲೆಸ್ಟಾ, ಗ್ಯಾನಿಮೆಡಾ ಹಾಗೂ ಯುರೋಪಗಳನ್ನು ತೋರಿಸಲಾಯಿತು.
ಈ ಉಪಗ್ರಹಗಳು ಬಹಳ ಅಪರೂಪಕ್ಕೆಂಬಂತೆ ಗುರು ಗ್ರಹದ ಒಂದೇ ಮಗ್ಗುಲಲ್ಲಿ ಸಾಲಾಗಿ ಗೋಚರಿಸುತ್ತಿದುದನ್ನು ಸಾರ್ವಜನಿಕರು ನೋಡಿ ಆನಂದಪಟ್ಟರು, ಚಂದ್ರನ ಕಲೆಗಳನ್ನು ತೋರಿಸಲಾಯಿತು.
ಜೀವಮಾನದಲ್ಲಿ ಏಕೈಕ ಬಾರಿ ಭೂ ಗ್ರಹದ ಬಳಿ ತುಂಬಾ ಹತ್ತಿರ ಬಂದಿದ್ದ ನೀಡುವ ಐಸಾನ್ ಧೂಮಕೇತುವನ್ನು ವೀಕ್ಷಿಸಲು ಜನತೆ ಕಾಯುತ್ತಿದ್ದರು. ಆದರೆ ಮೋಡ ಮುಸುಕಿದ ಕಾರಣ ಧೂಮಕೇತು ದರ್ಶನವಾಗಲಿಲ್ಲ. ಈಗ ಧೂಮಕೇತು ಸೂರ್ಯನ ಸಮೀಪ ಧಾವಿಸಿ ಬರುತ್ತಿರುವುದರಿಂದ ಸೂರ್ಯನಿಗೆ ಪ್ರದಕ್ಷಿಣೆ ಹಾಕಿ ಡಿ.7ರ ನಂತರ ಬಹುದಿನಗಳ ಕಾಲ ಗೋಚರಿಸಲಿದೆ. ಆಗ ಎಲ್ಲರಿಗೂ ಧೂಮಕೇತು ತೋರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹಾಸನ ಜಿಲ್ಲಾ ವಿಜ್ಞಾನ ಕೇಂದ್ರದ ಸಂಪನ್ಮೂಲ ವ್ಯಕ್ತಿ ಶಿವು ಪಾಟೀಲ ಹೇಳಿದರು.
ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಅಹಮದ್ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಬೆಳಗಿನ ಆಕಾಶದ ನಕ್ಷತ್ರ ಪುಂಜಗಳನ್ನು ತೋರಿಸಿ ಶನಿ, ಮಂಗಳ, ಬುಧ ಹಾಗೂ ಗುರು ಗ್ರಹಗಳು ಏಕಕಾಲದಲ್ಲಿ ಗೋಚರಿಸುವುದು ಅಪರೂಪ ಎಂದು ತಿಳಿಸಿದರು. ಗ್ರಹ ಹಾಗೂ ನಕ್ಷತ್ರಗಳಿಗಿರುವ ವ್ಯತ್ಯಾಸವನ್ನು ತೋರಿಸಿದರು. ಧೂಮಕೇತು ಅಪರೂಪ ಏಕೆ? ಬಾಲ ಬರುವುದು ಏಕೆ ಎಂದು ತಿಳಿಸಿದರು.
ಹಾಸನ ಜಿಲ್ಲಾ ವಿಜ್ಞಾನ ಕೇಂದ್ರದ ಮಲ್ಲಿಕಾರ್ಜುನ ಟೆಲೆಸ್ಕೋಪಿನಲ್ಲಿ ಗ್ರಹ-ತಾರೆಗಳನ್ನು ನೋಡುವುದು ಹೇಗೆಂದು ತಿಳಿಸಿ ತೋರಿಸಿದರು. ಈ ಸಂದರ್ಭದಲ್ಲಿ ಬಿಜಿವಿಎಸ್ ತಾಲೂಕು ಅಧ್ಯಕ್ಷೆ ಮಮತಾ ಶಿವು, ಶಾಂತಿನಗರ ಬಿಜಿವಿಎಸ್ ಕಾರ್ಯದರ್ಶಿ ವೇದಶ್ರಿರಾಜ್, ಉತ್ತರ ಬಡಾವಣೆ ಘಟಕ ಖಜಾಂಚಿ ರೇಖ, ರಂಗೋಲಿ ಹಳ್ಳ ಬಿಜಿವಿಎಸ್ ಅಧ್ಯಕ್ಷೆ ವೇದ ಕಾರ್ಯದರ್ಶಿ ಸುಧಾ ಹಾಗೂ ಮುಂಜಾನೆ ಮಿತ್ರ ಅಧ್ಯಕ್ಷ ವೆಂಕಟೇಗೌಡ ಹಾಗೂ ಕಾರ್ಯದರ್ಶಿ ಸುಧೀರ್ ಇದ್ದು, ಜನರಿಗೆ ಆಕಾಶ ವೀಕ್ಷಿಸಲು ನೆರವಾದರು.