ಕ್ರೀಡಾಕೂಟಕ್ಕೆ ವಿಜಯ್ ಚಾಲನೆ
ಹಾಸನ: ನಗರದ ಎಚ್ಕೆಎಸ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಇತ್ತೀಚೆಗೆ ವಾರ್ಷಿಕ ಕ್ರೀಡಾಕೂಟ 'ಲುಡಸ್-2013'ನ್ನು ಇತ್ತೀಚೆಗೆ ಆಚರಿಸಲಾಯಿತು.
ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ, ಕರ್ನಾಟಕ ರಣಜಿ ತಂಡದ ತರಬೇತುದಾರ ವಿಜಯ್ ಭಾರದ್ವಾಜ್ ಅವರು ಬಿಲ್ಲಿನಿಂದ ಬಾಣವನ್ನು ಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕ್ರೀಡಾಜ್ಯೋತಿಯನ್ನು ಶಾಲೆಯ ಆವರಣ ಮತ್ತು ಕ್ರಿಕೆಟ್ ಸ್ಟೇಡಿಯಂನಲ್ಲಿ ಕೊಂಡೊಯ್ದು ವಿಜಯ್ ಭಾರದ್ವಾಜ್ ಅವರಿಗೆ ನೀಡಲಾಯಿತು. ಶಾಲಾ ಕ್ರೀಡಾ ಕಾರ್ಯದರ್ಶಿ ಶಿವಪ್ರಸಾದ್ ಕುದುರೆಯಿಂದ ಬಂದು ಕ್ರೀಡಾಜ್ಯೋತಿ ಸ್ವೀಕರಿಸಿ ಸ್ಟೇಡಿಯಂನ ಇನ್ನೊಂದು ತುದಿಯಲ್ಲಿದ್ದ ಕ್ರೀಡಾ ಕುಂಡವನ್ನು ಬೆಳಗಿಸಿದರು.
ಮಕ್ಕಳಿಂದ ಆರಕ್ಷಕ ಪಥ ಸಂಚಲನ, ಗೌರವ ವಂದನೆ ಮತ್ತು ಧ್ವಜವಂದನೆ ನಡೆಯಿತು. ಶಾಲೆಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ದೈಹಿಕ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಅಮೆರಿಕ ಮೂಲದ 'ಲೀಪ್ ಸ್ಟಾರ್ಟ್- ಕ್ರೀಡಾ ಅಭಿವೃದ್ಧಿ ಕಾರ್ಯಕ್ರಮವನ್ನು ವಿಜಯ್ ಭಾರದ್ವಾಜ್ ಉದ್ಘಾಟಿಸಿದರು. ಶಾಲಾ ಆವರಣದಲ್ಲಿರುವ ಸುಸಜ್ಜಿತ ಕ್ರಿಕೆಟ್ ಸ್ಟೇಡಿಯಂನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಜೊತೆ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಸಹಯೋಗದೊಂದಿಗೆ ಎಚ್.ಕೆ.ಎಸ್. ಕ್ರಿಕೆಟ್ ಅಕಾಡೆಮಿಯನ್ನು ಪ್ರಾರಂಭಿಸಿ ಮಕ್ಕಳಿಗೆ ಹೆಚ್ಚಿನ ಅವಕಾಶವನ್ನು ನೀಡಿ ಎಂದು ಸಲಹೆ ನೀಡಿದರು. ಪದ್ಮಶ್ರೀ ಶಿಕ್ಷಣ ಸಮೂಹ ಸಂಸ್ಥೆಗಳ ನಿರ್ದೇಶಕ ಪ್ರೊ. ರಾಜೇಶ್ ಶೆಣೈ, ಶಾಲೆಯ ಕಾರ್ಯದರ್ಶಿ ಎಚ್.ಕೆ. ಸುರೇಶ್, ಪ್ರಾಂಶುಪಾಲ ಡಾ. ರವಿಕುಮಾರ್ ಇದ್ದರು. ಮಕ್ಕಳಿಗೆ ಮತ್ತು ಪೋಷಕರಿಗೆ ನಾನಾ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು.