ಗೂಡ್ಸ್ ವಾಹನ ಡಿಕ್ಕಿ; ಮಹಿಳೆ ಸಾವು
ಹಾಸನ: ಗೂಡ್ಸ್ ವಾಹನ ಡಿಕ್ಕಿ ಮಾಡಿದ ಪರಿಣಾಮ ಪಾದಚಾರಿ ಮಹಿಳೆ ಸಾವನ್ನಪ್ಪಿರುವ ಘಟನೆ ಆಲೂರು ತಾಲೂಕಿನಲ್ಲಿ ಇತ್ತೀಚೆಗೆ ನಡೆದಿದೆ. ಆಲೂರು ತಾಲ್ಲೂಕಿನ ಎಂ. ಹೊಸಳ್ಳಿ ಕಾಲೋನಿ ವಾಸಿ ಮಲ್ಲಮ್ಮ(50) ಸಾವನ್ನಪ್ಪಿದ ದುರ್ದೈವಿ. ಮಲ್ಲಮ್ಮ ರವರು ತಮ್ಮ ಪತಿ ದ್ಯಾವಯ್ಯ, ಗ್ರಾಮದ ಸಂಗಯ್ಯ, ನಾಗಮ್ಮ ರವರು ಬಿಕ್ಕೋಡು ಗ್ರಾಮಕ್ಕೆ ಹೋಗಲು ಆಲೂರು-ಬಿಕ್ಕೋಡು ರಸ್ತೆ ಎಂ. ಹೊಸಳ್ಳಿ ಗೇಟ್ ಹತ್ತಿರ ಮಾತನಾಡುತ್ತಾ ನಿಂತಿದ್ದಾಗ ಆಲೂರು ಕಡೆಯಿಂದ ಬಂದ ಗೂಡ್ಸ್ ವಾಹನ ಚಾಲಕನ ನಿರ್ಲಕ್ಷ್ಯದಿಂದ ಗುದ್ದಿದ ಪರಿಣಾಮ ತೀವ್ರ ಗಾಯವಾಗಿದ್ದ ಮಲ್ಲಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ದ್ಯಾವಯ್ಯ ಆಲೂರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಆರೋಪಿಗಳ ಬಂಧನ
ಹಾಸನ: ವಾಹನಗಳ ಬಿಡಿ ಭಾಗಗಳನ್ನು ಬಿಚ್ಚಿ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದು, ಅವರಿಂದ 1.5 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಾದ ದುದ್ದ ಹೋಬಳಿಯ ಯೋಗೀಶ್, ಎಂ. ಹೊಸಕೊಪ್ಪಲು ಗ್ರಾಮದ ಅನಿಲ್ಕುಮಾರ್, ಬೋಗಾರಹಳ್ಳಿ ಕೊಪ್ಪಲಿನ ಜಗದೀಶ್, ಕವಳಿಕೆರೆ ಗ್ರಾಮದ ಮಧು ಅವರನ್ನು ಬಂಧಿಸಿದ್ದಾರೆ.
ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಮತ್ತು ಅಪರ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ರಶ್ಮಿ ಮಾರ್ಗದರ್ಶನದಲ್ಲಿ ಹಾಸನ ಉಪ ವಿಭಾಗದ ಡಿವೈಎಸ್ಪಿ ಪರಮೇಶ್ ಎಚ್. ಭೀಮಕ್ಕನವರ್ ನೇತೃತ್ವದಲ್ಲಿ ಸಿಪಿಐ ಸಂಜೀವೇಗೌಡ, ಬಡಾವಣೆ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಸಿ. ವೆಂಕಟೇಶ್ ಮತ್ತು ಸಿಬ್ಬಂದಿಗಳಾದ ಎಎಸ್ಐ ರಾಜೇಗೌಡ, ಹೆಡ್ ಕಾನ್ಸ್ಟೇಬಲ್ ರಂಗಸ್ವಾಮಿ, ಸುನೀಲ್, ಕಿರಣ್, ಲೋಹಿತ್ ತಂಡ ಕಾರ್ಯಾಚರಣೆ ನಡೆಸಿದ್ದಾರೆ. ಟ್ಯಾಂಕರ್ ಲಾರಿಯಲಿದ್ದ 4 ಟೈರ್ಗಳನ್ನು ಡಿಸ್ಕ್ ಸಮೇತ ಬಿಚ್ಚಿಕೊಂಡು ಕಳ್ಳತನ ಮಾಡಿಕೊಂಡು ಹೋಗಿ ಅದನ್ನು ಮಾರಾಟ ಮಾಡಲು ಯತ್ನಿಸಿ ಹಾಸನ ನಗರ ಬೂವನಹಳ್ಳಿ ಕೂಡಿನ ಹತ್ತಿರ ಸಿಕ್ಕಿ ಬಿದ್ದಿದ್ದಾರೆ. ಇವರಿಂದ 1,50,000 ಮೌಲ್ಯದ ಟ್ಯಾಂಕರ್ ಲಾರಿಯ 4 ಡಿಸ್ಕ್ ಸಮೇತ ಟೈರ್ ಗಳು, ಒಂದು ಜಾಕ್, ಜಾಕ್ ಕ್ಲಿವರ್ ಮತ್ತು ವೀಲ್ ಬಾಕ್ಸ್ಗಳನ್ನು ಹಾಗೂ ಕಳ್ಳತನ ಮಾಡಿದ ಮಾಲುಗಳನ್ನು ಸಾಗಿಸಲು ಬಳಸುತ್ತಿದ್ದ ಸುಮಾರು 3 ಲಕ್ಷ ಬೆಲೆ ಬಾಳುವ ಒಂದು ಟಾಟಾ ಎಸಿ ವಾಹನವನ್ನು ಪೊಲೀಸರು ವಶಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪತ್ತೆ ಕಾರ್ಯದಲ್ಲಿ ಕೆಲಸ ನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗೆ ಪೊಲೀಸ್ ವರಿಷ್ಠಾಧಿಕಾರಿ ಬಹುಮಾನವನ್ನು ಘೋಷಿಸಿರುತ್ತಾರೆ.
ಜೂಜಾಟ; 4 ಬಂಧನ, 580 ನಗದು ವಶ
ಹಾಸನ: ಅಕ್ರಮವಾಗಿ ಜೂಜಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಘಟನೆ ಹಾಸನದಲ್ಲಿ ಇತ್ತೀಚೆಗೆ ನಡೆದಿದೆ. ನಗರದ ಸಂತೇಪೇಟೆ ಎಪಿಎಂಸಿ ಯಾರ್ಡ್ನಲ್ಲಿ ಅಂದರ್ ಬಾಹರ್ ಜೂಜಾಡುತ್ತಿದ್ದಾರೆಂದು ಪಿಎಸ್ಐ ಎಸ್.ಕೆ. ಕೃಷ್ಣ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದಾಳಿ ನಡೆಸಿ ಮಂಜ(31), ಮಧು(30), ಪ್ರಕಾಶ್(28) ಮತ್ತು ನಾಗರಾಜ(40) ಎಂಬವರನ್ನು ಬಂಧಿಸಿದ್ದು, ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 580 ರು. ನಗದನ್ನು ವಶಪಡಿಸಿಕೊಂಡು ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿ ನಾಪತ್ತೆ
ಹಾಸನ: ಬೆಂಗಳೂರಿನ ಮುನೇಶ್ವರ ಬ್ಲಾಕ್ ನಿವಾಸಿ ರಾಜಣ್ಣ ಪುತ್ರ ಶ್ರೀವತ್ಸ ಭಾರದ್ವಾಜ್(20) ಹಾಸನ ಎಂಸಿಇ ಕಾಲೇಜಿನಲ್ಲಿ 5ನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದು ನ.26ರಂದು ಸಂಜೆ ಸ್ನೇಹಿತ ರಮಾನಾಥ ಶಣೈಗೆ ಬೆಂಗಳೂರಿಗೆ ಹೋಗುವುದಾಗಿ ಹೇಳಿ ಹೋದವನು ಬೆಂಗಳೂರಿಗೆ ಹೋಗದೆ ಕಾಲೇಜಿಗೆ ಬಾರದೆ ಕಾಣೆಯಾಗಿದ್ದಾನೆ. ಪ್ರಕರಣ ದಾಖಲಾಗಿದೆ.