ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ದಲಿತ ವಿದ್ಯಾರ್ಥಿ ಒಕ್ಕೂಟದಿಂದ ಪ್ರತಿಭಟನೆ

Rashmi Kasaragodu
Updated On : 1 Dec 2013, 1:12 am

ಕ.ಪ್ರ.ವಾರ್ತೆ   ಹಾಸನ   ನ.30
ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟದ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ನಗರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಕಳೆದ ಮೂರು ದಶಕಗಳಿಂದ ದಲಿತ ಚಳವಳಿಯು ದಲಿತರು, ವಿದ್ಯಾರ್ಥಿಗಳು, ಮಹಿಳೆಯರ ಪರವಾದ ಅನೇಕ ಹೋರಾಟಗಳನ್ನು ರೂಪಿಸಿದೆ. ವಿದ್ಯಾರ್ಥಿಗಳಿಗೆ ಹಾಸ್ಟೆಲ್ಗಳ ನಿರ್ಮಾಣ, ವಿದ್ಯಾರ್ಥಿ ವೇತನದ ಹೆಚ್ಚಳಕ್ಕಾಗಿ ಹೋರಾಟಗಳನ್ನು ಮಾಡಿದ್ದರೂ ಸಹ ಇನ್ನೂ ಅನೇಕ ಸಮಸ್ಯೆಗಳು ಜೀವಂತವಾಗಿಯೇ ಉಳಿದಿವೆ. ದಲಿತ ವಿದ್ಯಾರ್ಥಿಗಳು ಮತ್ತು ಯುವ ಜನತೆ ಅಂಬೇಡ್ಕರ್ ತತ್ವ, ಸಿದ್ಧಾಂತಗಳನ್ನು ಮರೆಮಾಚಿ ಕೋಮುವಾದಿ ವಿದ್ಯಾರ್ಥಿಗಳ ಸಂಘಟನೆಗಳೊಂದಿಗೆ ಗುರುತಿಸಿಕೊಳ್ಳುತ್ತಿರುವುದು ಬಹಳ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದರು.
ಪದವೀಧರರಿಗೆ ಭತ್ಯೆ ನೀಡಿ: ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ ಕೇಂದ್ರಗಳನ್ನು ಸ್ಥಾಪಿಸಬೇಕು. ಸರ್ಕಾರದ ಹಾಸ್ಟೆಲ್ಗಳು ನಿಲಯ ಪಾಲಕರ ಸಮಸ್ಯೆಗಳಿಂದ ಬಳಲುತ್ತಿವೆ. ಕೂಡಲೇ ನಿಲಯಪಾಲಕರ ಸಮಸ್ಯೆಯನ್ನು ಬಗೆಹರಿಸಬೇಕು. ಸರ್ಕಾರದ ನಾನಾ ಇಲಾಖೆಯ ಖಾಲಿ ಇರುವ ಬ್ಯಾಕ್ಲಾಗ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಮತ್ತು ಎಸ್ಸಿ, ಎಸ್ಟಿ ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡಬೇಕು.
ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳನ್ನು ಸ್ಥಾಪಿಸಬೇಕು. ಮೆಡಿಕಲ್ ಮತ್ತು ಎಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ನೀಡಬೇಕು. ಉನ್ನತ ಶಿಕ್ಷಣ ಪಡೆಯುತ್ತಿರುವ ಎಲ್ಲಾ ಬಡ ವಿದ್ಯಾರ್ಥಿಗಳಿಗೆ ಬ್ಯಾಂಕ್ಗಳಿಂದ ಯಾವುದೇ ಜಾಮೀನು ಪಡೆಯದೆ ಬಡ್ಡಿ ರಹಿತ ಸಾಲ ನೀಡಬೇಕು. ಹೋಬಳಿಗೊಂಡು ಬಾಲಕ ಮತ್ತು ಬಾಲಕಿಯರ ವಸತಿ ಶಾಲೆಗಳನ್ನು ತೆರೆಯಬೇಕು.
ಪ್ರಥಮ ದರ್ಜೆ ಕಾಲೇಜುಗಳಿಗೆ ಯುಜಿಸಿ ಯಿಂದ ನೀಡುತ್ತಿರುವ ಎಸ್ಸಿ, ಎಸ್ಟಿ ಅನುದಾನ ದುರ್ಬಳಕೆ ಮಾಡಿಕೊಳ್ಳುತ್ತಿರುವ ಆಡಳಿತ ಅಧಿಕಾರಿಯ ವಿರುದ್ಧ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯನ್ನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಒಕ್ಕೂಟದ ಜಿಲ್ಲಾ ಸಂಚಾಲಕರಾದ ಜಯರಾಮ ನಾಯಕರಹಳ್ಳಿ, ಚಲುವರಾಜು, ಮಂಜಯ್ಯ, ಮಲ್ಲೇಶ್ ಅಂಬುಗ, ಬಿ.ಎಲ್. ಲಕ್ಷ್ಮಣ್, ಹುಲಿಯಪ್ಪ, ಚಿಕ್ಕಣ್ಣ, ಹರೀಶ್, ಮಾದುರಾಜ್ ಕೆರೆಗೋಡು, ಲೋಕೇಶ್, ವೆಂಟಕೇಶ್ ಚನ್ನಾಪುರ, ಎಂ.ಡಿ. ಮಂಜು ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement