'ಸಂಚಾರಿ ವ್ಯವಸ್ಥೆ ಪಾಲನೆ ಜನರ ಕರ್ತವ್ಯ'
ಹಾಸನ: ಸಂಚಾರಿ ವ್ಯವಸ್ಥೆ ತೊಂದರೆ ಹೋಗಲಾಡಿಸುವುದು ನಮ್ಮೆಲ್ಲರ ಕರ್ತವ್ಯ. ಆ ನಿಟ್ಟಿನಲ್ಲಿ ಸಂಚಾರಿ ನಿಯಮಗಳು ಮತ್ತು ಅಜಾಗರೂಕತೆಯಿಂದ ನಡೆಯುವ ರಸ್ತೆ ಅಪಘಾತ ಹಾಗೂ ಅದರ ಪರಿಣಾಮದ ಕುರಿತು ಸಾರಿಗೆ ಸಂಚಾರಿ ಇಲಾಖೆಯ ಸಬ್ ಇನ್ಸ್ಪೆಕ್ಟರ್ ರಾಘವೇಂದ್ರ ಬಾಬು ಅವರು ಸಾಕ್ಷ್ಯಚಿತ್ರದೊಂದಿಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ನಗರದ ಅಶೋಕ ನಗರ ನಮ್ಮ ಟೈಮ್ಸ್ ಶಾಲೆಯಲ್ಲಿ ಇತ್ತೀಚೆಗೆ ತೆರೆಮನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಸಂಚಾರಿ ವ್ಯವಸ್ಥೆ ಕುರಿತು ಅನುಸರಿಸಬೇಕಾದ ರೀತಿ ನೀತಿಗಳನ್ನು ವಿವರಿಸಿದರು.
ವಿಶ್ವ ವಿಕಲಚೇತನರ ದಿನಾಚರಣೆ
ಹಾಸನ: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯ್ತಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಹಾಸನ ಹಾಗೂ ಜಿಲ್ಲೆಯ ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ವಿಕಲಚೇತನರ ಸಂಘ- ಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಡಿ.3ರಂದು ನಗರದ ಅಂಬೇಡ್ಕರ್ ಭವನದಲ್ಲಿ ಬೆಳಗ್ಗೆ 10ಕ್ಕೆ ಆಯೋಜಿಸಲಾಗಿದೆ.
ಜಿಲ್ಲೆಯ ವಿಕಲಚೇತನರು, ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸಂಘ- ಸಂಸ್ಥೆಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿಶ್ವ ವಿಕಲಚೇತನರ ದಿನಾಚರಣೆ ಯಶಸ್ವಿಯಾಗಿ ನಡೆಯಲು ಸಹಕರಿಸಬೇಕೆಂದು ಕೋರಲಾಗಿದೆ. ವಿವರಕ್ಕೆ ದೂ. 08172-264546 ಸಂಪರ್ಕಿಸಬಹುದು.