ಅರಕಲಗೂಡು ಬಳಿ ನಾಲಾ ಕಾಲುವೆ ಒಡೆದು ಅಪಾರ ಬೆಳೆ ಹಾನಿ
ಕನ್ನಡಪ್ರಭವಾರ್ತೆ ಅರಕಲಗೂಡು ಅ.1
ತಾಲೂಕಿನ ಅಡಿಕೆ ಬೊಮ್ಮನಹಳ್ಳಿ ಏತನೀರಾವರಿ ಯೋಜನೆಯ ನೀರಾವರಿ ಕಾಲುವೆ ಒಡೆದು, ಜಮೀನು ಮತ್ತು ರಸ್ತೆಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿದು, ಜಮೀನಿನಲ್ಲಿನ ಬೆಳೆ ಮತ್ತು ರಸ್ತೆಗಳು ಹಾಳಾಗಿವೆ.
ಸೋಮವಾರ ಪಟ್ಟಣದ ಕೆಇಬಿ ರಸ್ತೆಯಿಂದ ಬಾಣದಹಳ್ಳಿಗೆ ತೆರಳುವ ಮಾರ್ಗ ಮಧ್ಯೆ ಸಿಗುವ ಏತ ನೀರಾವರಿ ಛಾನಲ್ ಏರಿ ಒಡೆದಿರುವುದರಿಂದ ವ್ಯಾಪಕ ಪ್ರಮಾಣದ ನೀರು ಹರಿದು ಪೋಲಾಗುತ್ತಿದೆ. ಅಲ್ಲದೆ ಸನಿಹದ ಜಮೀನಿನಲ್ಲಿನ ಜೋಳ ಮತ್ತು ರಾಗಿ ಬೆಳೆ ನಾಶವಾಗಿದೆ. ರಸ್ತೆಯ ಮೇಲೆಲ್ಲ ನೀರು ಹರಿಯುತ್ತಿದ್ದು ರಸ್ತೆಗಳು ಕೊರಕಲು ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಕಳಪೆ ಕಾಮಗಾರಿಯಿಂದಾಗಿ ಏರಿ ಒಡೆದಿದೆ. ಈ ಕುರಿತು ಗ್ರಾಮಸ್ಥರು ನೀರಾವರಿ ನಿಗಮ ಅಧಿಕಾರಿಗಳಿಗೆ ತಿಂಗಳ ಹಿಂದೆಯೇ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮದ ರವಿ, ಮಧು ದೂರಿದ್ದಾರೆ.ಆದರೆ ಸಂಬಂಧಪಟ್ಟ ಇಲಾಖಾ ಎಂಜಿನಿಯರ್ ಅವರನ್ನು ಕನ್ನಡಪ್ರಭ ಮಂಗಳವಾರ ಸಂಪರ್ಕಿಸಿದಾಗ ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿಸಿದರು.ಅದೇ ರೀತಿ ಬೆಳೆ ನಷ್ಟ ಸಂಭವಿಸಿರುವ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ ತಮಗೂ ಈ ವಿಷಯ ತಿಳಿದಿಲ್ಲ,ಕಂದಾಯ ಇಲಾಖೆ ಅಧಿಕಾರಿಗಳನ್ನು ಕಳುಹಿಸುವುದಾಗಿ ಹೇಳಿದರು.
ಬಾಣದಹಳ್ಳಿ ಗ್ರಾಮ, ಕತ್ತಿಮಲ್ಲೇನಹಳ್ಳಿ ಪಂಚಾಯ್ತಿಗೆ ಸೇರಿದ್ದು ಹಲವು ದಿನಗಳಿಂದ ನೀರು ಸರಬರಾಜಿಲ್ಲ. ಕುಡಿಯುವ ನೀರಿನ ಮೋಟಾರು ಕೆಟ್ಟಿದ್ದು ಅದನ್ನು ದುರಸ್ಥಿಪಡಿಸುವಲ್ಲಿ ಪಂಚಾಯ್ತಿ ವಿಫಲವಾಗಿದೆ. ಗ್ರಾಮದಲ್ಲಿ ಚರಂಡಿ ವ್ಯವಸ್ಥೆಯಿಲ್ಲದೇ ನೈರ್ಮಲ್ಯದ ಕೊರತೆ ಎದುರಾಗಿದೆ. ಬೀದಿ ದೀಪವಿಲ್ಲ ಗ್ರಾಮ ಪಂಚಾಯ್ತಿ ಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.