ಚನ್ನರಾಯಪಟ್ಟಣ: ಮುಖ್ಯ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ
ಚನ್ನರಾಯಪಟ್ಟಣ: ಸರ್ಕಾರಿ ನೌಕರಿಯಲ್ಲಿ ವರ್ಗಾವಣೆ ಖಚಿತ. ಆದರೆ ಸರ್ಕಲ್ ಇನ್ಸ್ಪೆಕ್ಟರ್ ವರ್ಗಾವಣೆಯಾಗಿ ಸ್ಥಾನ ತ್ಯಜಿಸುವ ಕಡೆಗಳಿಗೆಯಲ್ಲಿಯೂ ಉತ್ತಮ ಕಾರ್ಯಕ್ಕೆ ಚಾಲನೆ ನೀಡಿದ ಪ್ರಸಂಗ ಪಟ್ಟಣದಲ್ಲಿ ನಡೆಯಿತು.ಸಿಪಿಐ ಮಾರಪ್ಪ ಅವರು ಬೆಂಗಳೂರಿಗೆ ವರ್ಗಾವಣೆಗೊಂಡು ಬೇರೆಯವರಿಗೆ ತಮ್ಮ ಕುರ್ಚಿ ನೀಡುವ ಕಡೆ ಕ್ಷಣದಲ್ಲಿ ತಾವು ಪಟ್ಟಣದಲ್ಲಿ ರೌಡಿ ನಿಗ್ರಹ ಹಾಗೂ ಕಳವು ಪ್ರಕರಣಗಳನ್ನು ನಿಗ್ರಹಿಸಲು ಉದ್ದೇಶಿಸಿದ್ದ ಸಿಸಿ ಕ್ಯಾಮೆರಾ ಅಳವಡಿಸಿ ತಾಲೂಕಿಗೆ ನಿಯೋಜನೆಗೊಂಡಿರುವ ಶೈಲೇಂದ್ರ ಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಮಾರಪ್ಪ ಮಾತನಾಡಿ ಪಟ್ಟಣದಲ್ಲಿ ರೌಡಿಸಂ,ಹಾಗೂ ಕಳವು ಪ್ರಕರಣ ಸೇರಿದಂತೆ ಹಲವು ಘಟನೆಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಮೊದಲ ಹಂತವಾಗಿ 6 ಕಡೆಗಳಲ್ಲಿ ಸಿಸಿ ಕ್ಯಾಮೆರೊ ಅಳವಡಿಸಲು ನಿರ್ಧರಿಸಿ ದಾನಿಗಳಿಂದ ಅಳವಡಿಸಲಾಗಿದೆ ಎಂದು ತಿಳಿಸಿದರು. ಪ್ರತಿ ಕ್ಯಾಮೆರಾಗಳಲ್ಲಿ ದಿನದ 24 ಗಂಟೆಗಳು ಸೇರಿದಂತೆ ಮೂರು ತಿಂಗಳುಗಳ ಕಾಲ ವಿಡಿಯೋ ಚಿತ್ರೀಕರಣ ಶೇಖರಿಸುವ ಸಾಮರ್ಥ್ಯವನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಪ್ರತಿ ಕ್ಯಾಮೆರೊಗಳು ಚಿತ್ರಿಸುವ ಚಿತ್ರಣವನ್ನು ಠಾಣೆಯಲ್ಲಿ ಕುಳಿತು ವೀಕ್ಷಿಸಬಹುದಾಗಿದೆ ಎಂದು ಹೇಳಿದರು. ಪಟ್ಟಣದ ಗಾಂಧಿ ಸರ್ಕಲ್, ನವೋದಯ ಸರ್ಕಲ್, ಹೊಸ ಬಸ್ನಿಲ್ದಾಣ, ಬಾಗೂರು ರಸ್ತೆ ಕ್ಷಮಾ ಬೇಕರಿ, ಕೆ.ಆರ್ ಸರ್ಕಲ್, ಹಾಗೂ ಮೈಸೂರು ಸರ್ಕಲ್ನಲ್ಲಿ ಪ್ರಥಮ ಹಂತವಾಗಿ ಅಳವಡಿಸಲಾಗುವುದು ಎಂದು ಅವರು ಹೇಳಿದರು.