ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜನಪರ ಧೋರಣೆ ಅತಿ ಮುಖ್ಯ

Rashmi Kasaragodu
Updated On : 2 Oct 2013, 1:30 am

ಕನ್ನಡಪ್ರಭ ವಾರ್ತೆ೤ ಹಾಸನ೤ ಅ.1
ದೇಶದ ಸಮಸ್ಯೆಗಳನ್ನು ಕಾಂಗ್ರೆಸ್, ಬಿಜೆಪಿಯಿಂದ ಬಗೆಹರಿಸಲು ಸಾಧ್ಯವಾಗುವುದಿಲ್ಲ. ದೇಶದ ಜನತೆಗೆ ಬೇಕಾಗಿರುವುದು ಕೇವಲ ಪಕ್ಷಗಳ ನಾಯಕತ್ವ ಬದಲಾವಣೆಯಲ್ಲ. ಜನಪರವಾದ ಧೋರಣೆಗಳು. ಇದನ್ನು ಎಡಪಕ್ಷಗಳಿಂದ ಹೊರತುಪಡಿಸಿ ಬೇರಾರಿಂದಲೂ ನಿರೀಕ್ಷಿಸಲು ಸಾಧ್ಯವಿಲ್ಲವೆಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ನಿತ್ಯಾನಂದ ಸ್ವಾಮಿ ತಿಳಿಸಿದರು.
ನಗರದ ಹಳೇ ಮಟನ್ ಮಾರುಕಟ್ಟೆ ಪ್ರದೇಶ ನಿರ್ಮಲ ನಗರದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ - ಬಿಜೆಪಿ  ತಿರಸ್ಕರಿಸೋಣ ಪರ್ಯಾಯ ಧೋರಣೆಯ ಎಡಪಕ್ಷಗಳ ರಾಜಕೀಯ ವೇದಿಕೆಯನ್ನು ಬಲಪಡಿಸೋಣ ಎಂಬ ಸಿಪಿಎಂ ಪಕ್ಷದ ಪ್ರಚಾರಾಂದೋಲನ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ಪಿಡುಗು:  ಸ್ವಾತಂತ್ರ್ಯ ಬಂದು 65 ವರ್ಷಗಳು ಕಳೆದರೂ ಇದುವರೆಗೆ ಅಧಿಕಾರ ನಡೆಸಿದ ಕಾಂಗ್ರೆಸ್ - ಬಿಜೆಪಿ ಪಕ್ಷವಾಗಲಿ ಅಥವಾ ಇನ್ಯಾವುದೆ ಬಂಡವಾಳಶಾಹಿ ಪಕ್ಷಗಳಿಂದ ಈ ದೇಶದ ಜನರ ಸಂಕಷ್ಟಗಳನ್ನು ಬಗೆಹರಿಸಲು ಸಾಧ್ಯವಾಗಿಲ್ಲ. ಬದಲಾಗಿ ಬೆಲೆ ಏರಿಕೆ, ನಿರುದ್ಯೋಗ, ಬಡತನ, ಅನಕ್ಷರತೆ, ಜಾತಿಭೇದ ಮತ್ತು ಕೋಮುವಾದದಂತಹ ಸಾಮಾಜಿಕ ಪಿಡುಗುಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈ ಎಲ್ಲ ಪಕ್ಷಗಳು ಜನವಿರೋಧಿ ನವ ಉದಾರೀಕರಣ ನೀತಿಗಳನ್ನು ಜಾರಿಗೆ ತರುತ್ತಿವೆ. ಆದ್ದರಿಂದ ಆಳುವ ವರ್ಗಗಳು ಅನುಸರಿಸುತ್ತಿರುವ ನೀತಿಗಳಿಂದಾಗಿ ಶ್ರಿಮಂತರು ಶ್ರೀಮಂತರಾಗಿ ಬಡವರು ಕಡು ಬಡವರಾಗುತ್ತಿದ್ದಾರೆ ಎಂದು ಹೇಳಿದರು.
ಮೂರ್ಖತನದ ಪರಮಾವಧಿ: ಕೇಂದ್ರದ ಕಾಂಗ್ರೆಸ್ ಸರ್ಕಾರದ ಯೋಜನಾ ಆಯೋಗದ ವರದಿ ಪ್ರಕಾರ ದೇಶದ ಬಡತನ ಕಡಿಮೆಯಾಗಿದ್ದು ಗ್ರಾಮೀಣ ಪ್ರದೇಶದಲ್ಲಿ ಒಬ್ಬ ವ್ಯಕ್ತಿ ದಿನಕ್ಕೆ 27 ರು. ಅದೇ ರೀತಿ ನಗರ ಪ್ರದೇಶದಲ್ಲಿ ದಿನಕ್ಕೆ 33 ರು.ಗಿಂತ ಹೆಚ್ಚು ಖರ್ಚು ಮಾಡಿದರೆ ಅವರು ಬಡವರಲ್ಲ ಎಂಬ ನಿರ್ಧಾರಕ್ಕೆ ಬಂದಿರುವುದು ಮೂರ್ಖತನದ ಪರಮಾವಧಿ ಎಂದು ತಿಳಿಸಿದರು.
ಬಹುರಾಷ್ಟ್ರೀಯ ಕಂಪನಿಗಳ ಲಾಭವನ್ನು ಹೆಚ್ಚಿಸಲು ನಿರಂತರ ಶ್ರಮಿಸುತ್ತಿರುವ ಇಂತಹವರಿಂದ ಬೇರೆ ಏನನ್ನು ನಿರೀಕ್ಷಿಸಲು ಸಾಧ್ಯ. ಮತ್ತೊಂದು ಕಡೆ ಬಿಜೆಪಿ ನರೇಂದ್ರ ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವ ಮೂಲಕ ದೇಶ ಮುಂದುನ ಚುನಾವಣೆಯಲ್ಲಿ ಜನರ ಬದುಕು ಬವಣೆಗಳ ಬಗ್ಗೆ ನಡೆಸಬೇಕಾಗಿದ್ದ ಚರ್ಚೆಯನ್ನು ಕೋಮುಭಾವನೆಗೆ ವರ್ಗಾಯಿಸುತ್ತಿದೆ ಎಂದು ನುಡಿದರು.
ಎಡಪಕ್ಷಗಳ ಪರ್ಯಾಯ ಧೋರಣೆಗಳಿಂದ ಸಾಧ್ಯ:  ಇಂತಹ ಅಪಾಯದ ಸನ್ನಿವೇಶದಲ್ಲಿ ದೇಶದ ಜನತೆಯನ್ನು ಸಂಕಷ್ಟಗಳಿಂದ ಹೊರತರಲು ಕೇವಲ ಎಡಪಕ್ಷಗಳ ಪರ್ಯಾಯ ಧೋರಣೆಗಳಿಂದ ಮಾತ್ರ ಸಾಧ್ಯ. ಅದನ್ನು ಈ ಹಿಂದೆ ಅಧಿಕಾರದಲ್ಲಿದ್ದ ಕೇರಳ, ಪಶ್ಚಿಮ ಬಂಗಾಳ ಮತ್ತು ಈಗ ಅಧಿಕಾರದಲ್ಲಿರುವ ತ್ರಿಪುರಾ ರಾಜ್ಯಗಳಲ್ಲಿ ಮಾಡಿ ತೋರಿಸಲು ಸಾಧ್ಯವಾಗಿದೆ.
ಇದರ ಭಾಗವಾಗಿ ಎಡಪಕ್ಷಗಳು ದೇಶಾದ್ಯಂತ ಪ್ರಚಾರಾಂದೋಲನ ಕೈಗೊಂಡಿದ್ದು ಅಕ್ಟೋಬರ್ 8 ರಂದು ಬೆಂಗಳೂರಿನಲ್ಲಿ ಎಡಪಕ್ಷಗಳ ರಾಜ್ಯ ಮಟ್ಟದ ಬೃಹತ್ ರ್ಯಾಲಿ ಮತ್ತು ಬಹಿರಂಗ ಸಭೆಯನ್ನು ಏರ್ಪಡಿಸಿದ್ದು ಈ ಸಭೆಗೆ ಸಿಪಿಐಎಂನ ಪೋಲಿಟ್ಬ್ಯೂರೋ ಸದಸ್ಯ ಬಂೃದಾಕಾರಟ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಪ್ರಚಾರಾಂದೋಲನ ಸಭೆಯ ಅಧ್ಯಕ್ಷತೆಯನ್ನು ಪಕ್ಷದ ಜಿಲ್ಲಾ ಸಂಘಟನಾ ಸಮಿತಿ ಕಾರ್ಯದರ್ಶಿ ವಿ.ಸುಕುಮಾರ್ ವಹಿಸಿದ್ದರು. ಜಿಲ್ಲಾ ಸಂಘಟನಾ ಸಮಿತಿ ಸದಸ್ಯ ಧರ್ಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನವೀನ್ಕುಮಾರ್ ವಂದಿಸಿದರು. ಇದೇ ವೇಳೆ ಕಾರ್ಯಕರ್ತರು ಮನೆಮನೆಗಳಿಗೆ ತೆರಳಿ ಕರಪತ್ರಪ ಹಂಚಿದರು.


ಬೆಲೆ ಏರಿಕೆ, ನಿರುದ್ಯೋಗ, ಬಡತನ, ಅನಕ್ಷರತೆ, ಜಾತಿಭೇದ ಮತ್ತು ಕೋಮುವಾದದಂತಹ ಸಾಮಾಜಿಕ ಪಿಡುಗುಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈ ಎಲ್ಲ ಪಕ್ಷಗಳು ಜನವಿರೋಧಿ ನವ ಉದಾರೀಕರಣ ನೀತಿಗಳನ್ನು ಜಾರಿಗೆ ತರುತ್ತಿವೆ. ಆದ್ದರಿಂದ ಆಳುವ ವರ್ಗಗಳು ಅನುಸರಿಸುತ್ತಿರುವ ನೀತಿಗಳಿಂದಾಗಿ ಶ್ರಿಮಂತರು ಶ್ರೀಮಂತರಾಗಿ ಬಡವರು ಕಡು ಬಡವರಾಗುತ್ತಿದ್ದಾರೆ
ಟಿ  ನಿತ್ಯಾನಂದ ಸ್ವಾಮಿ,
ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement