ರಾಜಕೀಯ ದುರುದ್ದೇಶದಿಂದ ಜಾಗ ಒತ್ತುವರಿ ಆರೋಪ
ಕನ್ನಡಪ್ರಭ ವಾರ್ತೆ ಬೇಲೂರು ಅ.1
ರಾಜಕೀಯ ದುರುದ್ದೇಶದಿಂದ ತಮ್ಮ ವಿರುದ್ಧ ಜಾಗ ಒತ್ತುವರಿ ಆರೋಪ ಮಾಡಲಾಗಿದ್ದು, ತಮ್ಮ ಮನೆ ನಿರ್ಮಾಣದಲ್ಲಿ ಯಾವುದೇ ಕಾನೂನು ಗಾಳಿಗೆ ತೂರಿಲ್ಲ ಎಂದು ಅರೇಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗೇಶ್ ಶೆಟ್ಟಿ ಸ್ವಷ್ಟನೆ ನೀಡಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಮನೆ ನಿರ್ಮಾಣ ಸಂದರ್ಭದಲ್ಲಿ ಕಾನೂನು ಕಟ್ಟಳೆಯನ್ನು ಮೀರಲಾಗಿದೆ ಎಂದು ಗ್ರಾಪಂ ಸದಸ್ಯ ಮುಸ್ತಫಾ ಹಾಗೂ ಮಾಜಿ ಅಧ್ಯಕ್ಷ ಸರ್ದಾರ್ಪಾಷ ಆರೋಪಿಸಿದ್ದಾರೆ.
ಆದರೆ ತಾವು ಮನೆ ನಿರ್ಮಾಣ ಸಂದರ್ಭದಲ್ಲಿ ಅರೇಹಳ್ಳಿ ಗ್ರಾಮ ಪಂಚಾಯಿತಿಯಿಂದ ಲೈಸೆನ್ಸ್ ಪಡೆಯಲಾಗಿದೆ. ಅಲ್ಲದೆ ಮನೆ ಕಟ್ಟುತ್ತಿರುವ ಜಾಗವನ್ನು ಅಲಿಮಾಬಿ ಎಂಬುವರಿಂದ ತಾವು ಕ್ರಯಕ್ಕೆ ತೆಗೆದುಕೊಂಡಿದ್ದು, ಇದಕ್ಕೆ ಸಾಕ್ಷಿಯಾಗಿ ಅವರೂ ಇಲ್ಲಿಗೆ ಬಂದಿದ್ದಾರೆ. ತಾವು ಕಳೆದ ವರ್ಷ ಜಾಗ ಖರೀದಿಸುವಾಗ ಗ್ರಾಪಂ ಸದಸ್ಯ ಮುಸ್ತಫಾ ಕೂಡಾ ಪ್ರತಿಸ್ಪರ್ಧಿಯಾಗಿದ್ದರು ಎಂದು ಹೇಳಿದರು.
ತಾವು 50-28 ರ ವಿಸ್ತೀರ್ಣದ ಜಾಗದಲ್ಲಿ ಮನೆಯನ್ನು ನಿರ್ಮಾಣ ಮಾಡುತ್ತಿದ್ದು ಪಿಡಬ್ಲೂಡಿ ರಸ್ತೆಗಿಂತ ಹಿಂದೆ ಇದೆ. ಅಲ್ಲದೆ ಉಲ್ಲಾಸ ನಗರದಲ್ಲಿ ಬರುವ ಸಾಕಷ್ಟು ಮನೆಗಳು ಯಾವ ರೀತಿಯಲ್ಲಿವೆಯೋ ಅದೇ ರೀತಿಯಲ್ಲಿ ತಮ್ಮ ಮನೆ ಇದೆ. ಅಲ್ಲದೆ ಪಿಡಬ್ಲ್ಯುಡಿ ರಸ್ತೆ ಜಿಲ್ಲಾ ಹೆದ್ದಾರಿ ಆಗುವ ಬಗ್ಗೆ ಯಾವುದೇ ಸರ್ವೆ ಕಾರ್ಯ ನಡೆದಿಲ್ಲ. ಒಂದು ವೇಳೆ ನಡೆದರೂ ತಿರುವ ರಸ್ತೆ ಕಾರಣ ಪಕ್ಕದ ಕಾಫಿ ತೋಟ ಅಂಚಿನ ಮಾರ್ಗ ನೆರವಾದ ರಸ್ತೆ ಮಾಡುವ ಬಗ್ಗೆ ಮಾಹಿತಿಯಿದೆ ಎಂದು ತಿಳಿಸಿದರು.
ತಮ್ಮ ಮೇಲೆ ಹುರುಳಿಲ್ಲದ ಆರೋಪ ಮಾಡುತ್ತಿರುವ ಮುಸ್ತಫಾ ಕಳೆದ 2 ವರ್ಷದಿಂದ ತಮ್ಮ ಕಾರನ್ನು ರಿಜಿಸ್ಟ್ರೇಷನ್ ಮಾಡಿಸದೇ ತಾತ್ಕಾಲಿಕ ರಿಜಿಸ್ಟರ್ ನಂಬರ್ ಬಳಸಿಕೊಂಡು ಓಡಾಡುತ್ತಿದ್ದಾರೆ. ಅವರ ಟಾಟಾ ಮಾಂಜಾ ಕಾರು ಕೆ.ಎ 13 ಟಿ.ಸಿ 41 ಎಂಬ ನಂಬರ್ ಪ್ಲೇಟಿನಲ್ಲೇ ಓಡಾಡುತ್ತಿದ್ದು ಆ ಕಾರಿಗೆ ಯಾವುದೇ ಅಧಿಕೃತ ದಾಖಲೆ, ವಿಮೆ ಇಲ್ಲವಾಗಿದೆ. ತಮ್ಮ ವಿರುದ್ಧ ಆರೋಪ ಮಾಡಲು ಮುಸಾಫಾರೊಟ್ಟಿಗೆ ಬಂದವರು ಈ ಹಿಂದಿನ ಚುನಾವಣೆಯಲ್ಲಿ ಜನತೆಯಿಂದ ತಿರಸ್ಕೃತ ಗೊಂಡರು ಎಂದು ಹೇಳಿದರು.
ಕಳೆದ ಬಾರಿ ಅಧ್ಯಕ್ಷ, ಉಪಾಧ್ಯಕ್ಷರಾಗಿದ್ದಾಗ ಅರೇಹಳ್ಳಿ ಮತದಾರರು ಇವರಿಗೆ ಠೇವಣಿ ಸೋಲನ ರುಚಿಯನ್ನು ತೋರಿಸಿದ್ದಾರೆ. ಮಾಜಿ ಗ್ರಾಪಂ ಅಧ್ಯಕ್ಷ ಸರ್ದಾರ್ಪಾಷ ಅರೇಹಳ್ಳಿಯಲ್ಲಿನ ಒಂದೆರಡು ಶೌಚಾಲಯವನ್ನು ತಿರುಗಾ ಮುರುಗಾ ಎಂಬಂತೆ 20 ರಿಂದ 30 ಶೌಚಾಲಯ ರೀತಿಯಲ್ಲಿ ಫೋಟೋವನ್ನು ತೆಗೆಸಿ ಅದರಲ್ಲಿ ಲಕ್ಷಾಂತರ ರು.ಗಳನ್ನು ಗುಳುಂ ಮಾಡಿದ್ದು ಈಗಾಗಲೇ ಅದರ ಸಂಪೂರ್ಣ ವಿವರ ಪಡೆಯಲಾಗಿದ್ದು ಲೋಕಾಯುಕ್ತರಿಗೆ ವರದಿ ನೀಡಲಾಗುವುದು ಎಂದು ನುಡಿದರು.
ತಮ್ಮ ಆಡಳಿತಾವಧಿಯಲ್ಲಿ ನಿರ್ಮಿಸಿರುವ ರಾಜೀವ್ಗಾಂಧಿ ಸೇವಾ ಕೇಂದ್ರ ಜಾಗವನ್ನು ಆಗಿನ ಅಧ್ಯಕ್ಷ ಸರ್ದಾರ್ಪಾಷ ಉಪಾಧ್ಯಕ್ಷರಿಗೆ ಮಾರಾಟ ಮಾಡಿ ಅಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾದಾಗ ಎಸಿ ಗಮನಕ್ಕೆ ಬಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಛೀಮಾರಿ ಹಾಕಿಸಿಕೊಂಡಿರುವ ಇಂತಹವರಿಗೆ ನನ್ನ ವಿರುದ್ಧ ವೃಥಾ ಆರೋಪ ಮಾಡುವ ನೈತಿಕತೆಯಿಲ್ಲ ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಅಮಿತ್ಶೆಟ್ಟಿ ಮಾತನಾಡಿ, ಅರೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ಶೆಟ್ಟಿ ಅವರ ಉತ್ತಮ ಕಾರ್ಯ ವೈಖರಿಯನ್ನು ಕಂಡು ವಿರೋಧಿಗಳಿಗೆ ಹೊಟ್ಟೆ ಉರಿ ಆರಂಭವಾಗಿದೆ. ನಾಗೇಶ್ಶೆಟ್ಟಿ ಈಗಾಗಲೇ 30 ಲಕ್ಷ ರು. ಅನುದಾನದಲ್ಲಿ ಹಲವಾರು ಅಭಿವೃದ್ಧಿ ಕಾರ್ಯವನ್ನು ಮಾಡಿದ್ದಾರೆ. ಅಲ್ಲದೆ ಹೋಬಳಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ತಾವು ಹಾಗೂ ನಾಗೇಶ್ ಅವರು ಡಿಸಿ ಹಾಗೂ ಎಸಿ ಮೇಲೆ ಒತ್ತಡ ತಂದು ತಹಬಂದಿಗೆ ತಂದಿರುವ ಹಿನ್ನೆಲೆಯಲ್ಲಿ ಬೇರೆ ದಾರಿ ಕಾಣದೆ ಅಧ್ಯಕ್ಷರ ತೇಜೋವಧೆ ಮಾಡಲು ಸಲ್ಲದ ಆರೋಪ ಮಾಡುತ್ತಿದ್ದಾರೆ. ಆದರೆ, ಜನತೆಗೆ ಆರೋಪ ಮಾಡುತ್ತಿರುವವರ ಸತ್ಯಾಸತ್ಯತೆಗಳು ತಿಳಿದಿದೆ ಎಂದರು.
ಗ್ರಾಪಂ ಸದಸ್ಯ ರಂಗನಾಥ್, ಬಾಲಸುಬ್ರಹ್ಮಣ್ಯ, ಮಹಮದ್ ಇಸಾಕ್, ಕರವೇ ಹೋಬಳಿ ಅಧ್ಯಕ್ಷ ಅಬ್ದುಲ್ ಶೇಖ್, ಬಿಜೆಪಿ ಮುಖಂಡ ಚಿದಾನಂದ್ ಇದ್ದರು.