'ಸಕಾಲ'ದಿಂದ ಸರ್ಕಾರಿ ಇಲಾಖೆ ಪಾರದರ್ಶಕತೆ ಸಾಧ್ಯ: ಮನೋಹರ್
ಹೊಳೆನರಸೀಪುರ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸಕಾಲ ಕಾರ್ಯಕ್ರಮದಿಂದ ಮಾತ್ರ ಇಲಾಖೆಗಳು ಪಾರದರ್ಶಕವಾಗಿರಲು ಸಾಧ್ಯ ಎಂಬುದನ್ನು ಯಾರೂ ಆಲ್ಲಗೆಳೆಯುವಂತಿಲ್ಲ ಎಂದು ಜಿಲ್ಲಾ ಸಕಾಲ ತಂತ್ರಜ್ಞಾನ ಘಟಕದ ಸಮಾಲೋಚನಾಗಾರ ಪಿ.ವಿ.ಮನೋಹರ್ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸಕಾಲ ಯೋಜನೆಯ ಅರಿವು ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಹಿಂದೆ ಇದ್ದ ರಾಜ್ಯ ಸರ್ಕಾರ ವಿಳಂಬರಹಿತ ಆಡಳಿತ ಸೇವೆ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿತು. ಪ್ರಸ್ತುತ ಕರ್ನಾಟಕದಲ್ಲಿ 375 ಸೇವೆಗಳು ಈ ಸಕಾಲ ಯೋಜನೆಯಡಿ ಬರಲಿದ್ದು, ಗ್ರಾಮೀಣ ಪ್ರದೇಶದ ಜನರಿಗೆ ಇದು ಅತ್ಯಂತ ಉಪಯುಕ್ತತೆ ಕಂಡಿದೆ ಎಂದರು.
ಇದೀಗ 2013 ರಲ್ಲಿ ಉನ್ನತ ಶಿಕ್ಷಣ ಇಲಾಖೆಗೂ ಸಕಾಲವನ್ನು ಅಳವಡಿಸಲಾಗಿದೆ. ಇದರಿಂದಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಈ ಸೇವೆ ಲಭ್ಯವಾಗುವುದರಿಂದ ಶೈಕ್ಷಣಿಕ ಪ್ರಗತಿಗೆ ಭಾರಿ ಸಹಕಾರ ಆಗಲಿದೆ. ಇತ್ತೀಚೆಗೆ ರಾಜ್ಯದ ಎಲ್ಲ ತಾಲೂಕುಗಳಲ್ಲಿಯೂ ಸಕಾಲಕ್ಕೆ ಪ್ರತ್ಯೇಕ ವ್ಯವಸ್ಥೆ ಇದ್ದು ಯಾವುದೆ ಖರ್ಚು ಇಲ್ಲದೆ ಉಚಿತವಾಗಿ ಅರ್ಜಿ ಕೊಟ್ಟು ಸ್ವೀಕೃತಿ ಪತ್ರವನ್ನು ಪಡೆದುಕೊಂಡು ಸಕಾಲದ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಪ್ರಸ್ತುತ ಸಕಾಲ ಯೋಜನೆಯ ಸದುಪಯೋಗ ಪಡಿಸಿಕೊಳ್ಳುವ ಸಲುವಾಗಿ ಸುಮಾರು 3.47 ಕೋಟಿ ರು.ಗೂ ಅಧಿಕ ಅರ್ಜಿಗಳು ವಿವಿಧ ರೀತಿಯಲ್ಲಿ ಬಂದಿದ್ದು ಅವುಗಳಲ್ಲಿ 3.38 ಕೋಟಿ ಅರ್ಜಿಗಳು ವಿಲೇವಾರಿ ಆಗಿದೆ ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ.ಬಿ.ಇರ್ಷಾದ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪಿ.ಆರ್.ಶಾಂತ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಎನ್.ವಿ.ಶ್ರೀನಿವಾಸ್ ಹಾಗೂ ಉಪನ್ಯಾಸಕರು ಇದ್ದರು.