ಹೆಚ್ಚುತ್ತಿರುವ ಮಹಿಳಾ ಕೊಲೆ ಪ್ರಕರಣ
ಹಾಸನ: ನಗರದಲ್ಲಿ ದಿನೇ ದಿನೇ ಒಂಟಿ ಮಹಿಳೆಯರನ್ನು ಹಾಡುಹಗಲೇ ಹತ್ಯೆ ಮಾಡುತ್ತಿರುವ ಆತಂಕಕಾರಿ ಘಟನೆಗಳು ನಡೆಯುವುದು ಹೆಚ್ಚಾಗುತ್ತಿದೆ. ಇದು ಜನತೆಯನ್ನು ತೀವ್ರ ಆತಂಕಕ್ಕೆ ಈಡು ಮಾಡಿದೆ.
ಇಂತಹ ದುರ್ಘಟನೆಗಳನ್ನು ತಡೆಯುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ.
ಸೆ. 27 ರಂದು ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಲೀಲಾವತಿ (35) ಎಂಬಾಕೆಯ ಕುತ್ತಿಗೆಗೆ ಹಗ್ಗ ಬಿಗಿದು ಉಸಿರು ಗಟ್ಟಿಸಿ ಕೊಲೆ ಮಾಡಲಾಗಿತ್ತು. ಸೆ. 30 ರಂದು ಚಿಕ್ಕಹೊನ್ನೇನಹಳ್ಳಿ ಬಡಾವಣೆಯ ಗೃಹಿಣಿ ತೇಜಸ್ವಿನಿ (31)ಯನ್ನು ಮಧಾಹ್ನ 12.30 ರ ಸಮಯದಲ್ಲಿ ಬರ್ಬರವಾಗಿ ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಲಾಗಿದೆ. 3 ತಿಂಗಳ ಹಿಂದೆ ಹೊಳೆನರಸೀಪುರ ರಸ್ತೆಯಲ್ಲಿರುವ ಸೆಂಟ್ ಫಿಲೋಮಿನಾ ಶಾಲೆ ಎದುರಿನ ಬಡಾವಣೆಯಲ್ಲಿ ನೂರ್ಅಬ್ (55) ಎಂಬಾಕೆಯನ್ನು ಕೊಲೆ ಮಾಡಲಾಗಿತ್ತು. 65 ದಿನಗಳ ಹಿಂದಷ್ಟೆ ಎಸ್ಪಿ ಆಗಿ ಅಧಿಕಾರ ವಹಿಸಿಕೊಂಡಿರುವ ರವಿ ಚನ್ನಣ್ಣನವರ್ ಅವರು, ಜಿಲ್ಲಾದ್ಯಂತ ನಡೆಯುತ್ತಿದ್ದ ಸರಗಳ್ಳತನ ಪ್ರಕರಣಕ್ಕೆ ಸಾಧ್ಯವಾದಷ್ಟು ಬ್ರೇಕ್ ಹಾಕಿರುವುದಲ್ಲದೇ ವ್ಯವಸ್ಥೆಯಲ್ಲಿನ ಅವ್ಯವಸ್ಥೆ ಸರಿಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯೇ ಸರಿ. ನಟ್ಟ ನಡು ಮಧ್ಯಾಹ್ನ ಒಂಟಿಯಾಗಿ ಮನೆಯಲ್ಲಿದ್ದ ತೇಜಸ್ವಿನಿರನ್ನು ಚಾಕುವಿನಿಂದ ಕತ್ತು ಇರಿದು ಕೊಲೆ ಮಾಡಿರುವುದು ಜನರನ್ನು ತುಂಬಾ ಭಯಭೀತರನ್ನಾಗಿಸಿದೆ.
ಸಿಸಿ ಕ್ಯಾಮರಾ ನೆರವಾಗುವುದೆ: ತೇಜಸ್ವಿನಿ ಮನೆ ಮುಂಭಾಗದ ಮನೆಯವರು ಸಿಸಿ ಕ್ಯಾಮರಾ ಅಳವಡಿಸಿದ್ದು, ಅಲ್ಲಿ ತೇಜಸ್ವಿನಿ ಮನೆಗೆ ಕೊಲೆಯಾದ ಮಧ್ಯಾಹ್ನ ಹೋಗಿ ಬಂದ ಕೆಲ ವ್ಯಕ್ತಿಗಳು ಹೋಗಿರುವುದು ಪತ್ತೆಯಾಗಿದೆ. ಇದರ ಜಾಡು ಹಿಡಿದು ಪೊಲೀಸರು ಆರೋಪಿಗಳ ಪತ್ತೆ ನಡೆಸಿದ್ದಾರೆ. ಅಲ್ಲದೇ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿದೆ. ಈ ತಂಡಗಳ ಬಲೆಗೆ ಆರೋಪಿಗಳು ಸಿಕ್ಕಿ ಬೀಳುವರೇ ಎಂಬ ಪ್ರಶ್ನೆ ನಾಗರಿಕರಲ್ಲಿ ಮೂಡಿದೆ.
ತೇಜಸ್ವಿನಿಯವರನ್ನು ಚಿನ್ನಾಭರಣ, ಹಣ ಮತ್ತಿತರ ವಸ್ತುಗಳನ್ನು ದೋಚಲು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಏಕೆಂದರೆ, ದ್ವೇಷಕ್ಕಾಗಿ ಮಾಡಿದ್ದರೆ ಹಲವು ಕಡೆ ಇರಿದು ಕೊಲೆ ಮಾಡಿ ಆರೋಪಿಗಳು ಪರಾರಿಯಾಗುತ್ತಿದ್ದರು. ಆದರೆ ತೇಜಸ್ವಿನಿ ಅವರನ್ನು ಕತ್ತು ಕೊಯ್ದು ಕೊಲೆ ಮಾಡಲಾಗಿದೆ. ಕೊಲೆ ಮಾಡುವಾಗ ರಕ್ಷಣೆಗಾಗಿ ಕೈವೊಡ್ಡಿದಾಗ ತೇಜಸ್ವಿನಿಯವರ ಕೈಗೆ ಇರಿತದ ಗಾಯಗಳಾಗಿವೆ. ಹೊಳೆನರಸೀಪುರ ರಸ್ತೆಯಲ್ಲಿ ಸೆಂಟ್ ಫಿಲೋಮಿನಾ ಶಾಲೆ ಎದುರು ಬಡಾವಣೆಯಲ್ಲಿ ನೂರ್ಅಬ್ರನ್ನು 28 ಕಡೆ ಇರಿದು ಕೊಲೆ ಮಾಡಲಾಗಿತ್ತು. ಇದು ದ್ವೇಷದಿಂದ ಕೊಲೆ ಮಾಡಿರಬಹುದು ಎಂದು ಹೇಳಲಾಗಿದೆ.
ಯೋಜನೆ ರೂಪಿಸಿಯೇ ಕೊಲೆ
ತೇಜಸ್ವಿನಿ ಮತ್ತು ಅವರ ಕುಟುಂಬದ ಸದಸ್ಯರ ಚಲನವಲನಗಳನ್ನು ಅನೇಕ ದಿನಗಳಿಂದ ಗಮನಿಸಿದ ವ್ಯಕ್ತಿಗಳೆ ಸಂಚು ರೂಪಿಸಿ ಕೊಲೆ ಮಾಡಿದ್ದಾರೆ. ಚಾಕುವಿನಿಂದ ಕೊಲೆ ಮಾಡಿರುವ ಹಿನ್ನೆಲೆಯಲ್ಲಿ ಈ ಅಭಿಪ್ರಾಯಕ್ಕೆ ಬರಲಾಗಿದೆ. ಸಂಚು ರೂಪಿಸದಿದ್ದರೆ ಹಠಾತ್ತನೆ ಎರಗಿ ದೊಣ್ಣೆಯಿಂದ ಹಲ್ಲೆಗೈದು ಪ್ರಜ್ಞೆ ತಪ್ಪಿಸಿ ದರೋಡೆ ಮಾಡಲಾಗುತ್ತಿತ್ತು. ಆದರೆ ತೇಜಸ್ವಿನಿ ಕೊಲೆ ಪ್ರಕರಣದಲ್ಲಿ ಹಾಗೇ ಮಾಡಿಲ್ಲ. ಚಾಕುವಿನಿಂದ ಕತ್ತನ್ನು ಇರಿದು ಕೊಲೆ ಮಾಡಲಾಗಿದೆ. ಹಾಸನ ಜಿಲ್ಲೆ ಮತ್ತು ನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್, ಜೂಜೂಗಾರಿಕೆ ಮತ್ತಿತರ ಸಮಾಜಘಾತುಕ ಚಟುವಟಿಕೆಗಳು ಹೆಚ್ಚಾಗಿದ್ದು, ಇದು ಕೂಡ ಕ್ರಿಮಿನಲ್ ಚಟುವಟಿಕೆಗಳು ಹೆಚ್ಚಾಗಲು ಕಾರಣ ಎಂದು ಹೇಳಲಾಗುತ್ತಿದೆ. ಪೊಲೀಸರು ಇತ್ತ ಗಮನಹರಿಸಬೇಕಲ್ಲದೇ, ಹಾಡು ಹಗಲೇ ಮಹಿಳೆಯರನ್ನು ಕೊಲೆ ಮಾಡುತ್ತಿರುವ ಪ್ರಕರಣಗಳನ್ನು ತಡೆಗಟ್ಟುವ ಬಗ್ಗೆಯೂ ಗಂಭೀರ ಚಿಂತನೆ ನಡೆಸಬೇಕಾಗಿದೆ.
ದಯಾಶಂಕರ ಮೈಲಿ