ಅರಣ್ಯ ಪ್ರದೇಶದಲ್ಲಿ ಜೂಜು: 7 ಮಂದಿ ಸೆರೆ
ಕ.ಪ್ರ.ವಾರ್ತೆ ಚನ್ನರಾಯಪಟ್ಟಣ ಅ.2
ಜೂಜಾಡುತ್ತಿದ್ದ ಜಾಲವನ್ನು ಪತ್ತೆಮಾಡಿರುವ ಜಿಲ್ಲಾ ಎಸ್ಪಿ ರವಿ ಚನ್ನಣ್ಣನವರ್ ಮತ್ತವರ ಸಿಬ್ಬಂದಿ ಏಳು ಜನರನ್ನು ಬಂಧಿಸಿ, ಪಣವಾಗಿಟ್ಟಿದ್ದ 2,24,430 ರು. ನಗದು, ಇನೋವಾ, ಆಲ್ಟೋ ಕಾರ್, ಎರಡು ದ್ವಿಚಕ್ರವಾಹನ ಹಾಗೂ 9 ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಪಟ್ಟಣದ ಬಳದರೆ ಅರಣ್ಯ ಪ್ರದೇಶದಲ್ಲಿ ಕಳೆದ ಎರಡು ತಿಂಗಳಿಂದ ಚನ್ನರಾಯಪಟ್ಟಣ ವಸತಿ ಪೊಲೀಸ್ ವಸತಿ ಗೃಹದ ಹಿಂಭಾಗದ ನಿವಾಸಿ ಎಸ್.ಗೌಡಪ್ಪನವರ ಮಗ ಉದಯಕುಮಾರ್ ಜೂಜಾಟದ ನೇತೃತ್ವ ವಹಿಸಿದ್ದ.
ಶಾಂತಿಗ್ರಾಮದ ನಿವಾಸಿ ಸ್ವಾಮಿ, ಹಾಸನ ವಿದ್ಯಾನಗರದ ನಿವಾಸಿ ವೆಂಕಟೇಗೌಡ, ಹೊಳೆನರಸೀಪುರ ತಾಲೂಕಿನ ಹಳೇಕೋಟೆ ಕುಮಾರ್, ಕಡುವಿನಕೋಟೆ ನಿವಾಸಿ ಮಂಜು, ಹಾಸನದ ಕುವೆಂಪುನಗರದ ವ್ಯಾಪಾರಿ ಯೋಗೀಶ್, ಹಾಸನದ ರವೀಂದ್ರ ನಗರ ನಿವಾಸಿ ದಿವಾಕರ್ ಬಂಧಿತರು. ಇವರು ಪಕ್ಕದ ಜಿಲ್ಲೆಯ ಮಂಡ್ಯ, ಕೆ. ಆರ್. ಪೇಟೆ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ವಿವಿಧ ಅರಣ್ಯ ಪ್ರದೇಶಗಳಲ್ಲಿ ಜೂಜಾಡುತ್ತಿದ್ದರು. ಬಂಧಿತರು ಅರಣ್ಯ ಪ್ರದೇಶಗಳಲ್ಲದೆ ಸಂಚಾರಿ ವಾಹನಗಳಲ್ಲಿಯೂ ವ್ಯವಸ್ಥಿತವಾಗಿ ಜೂಜಾಡುತ್ತಿರುವ ಬಗ್ಗೆ ಮಾಹಿತಿ ಇತ್ತು. ಇದನ್ನು ಬೆನ್ನು ಹತ್ತಿದ ಪೊಲೀಸರಿಗೆ ಬಳದೆರೆ ಅರಣ್ಯ ಪ್ರದೇಶದಲ್ಲಿ ಜೂಜಾಟ ನಡೆಯುತ್ತಿರುವ ಮಾಹಿತಿ ಲಭ್ಯವಾದ ಮೇರೆಗೆ ಎಸ್ಪಿ ಮತ್ತು ಸಿಬ್ಬಂದಿ ವ್ಯಾಪ್ತಿಯಲ್ಲಿ ಜೂಜಾಡುತ್ತಿದ್ದ ಸ್ಥಳವನ್ನು ಸುತ್ತುವರೆದು ಏಳು ಜನರನ್ನು ಬಂಧಿಸಿದ್ದಾರೆ. ಮತ್ತಿಬ್ಬರು ಪರಾರಿಯಾಗಿದ್ದಾರೆ.