ರಸ್ತೆಗಳ ಅಧೋಗತಿಗೆ ಸರ್ಕಾರದ ನಿರ್ಲಕ್ಷ್ಯ ಕಾರಣ: ಶಾಸಕ ಕುಮಾರಸ್ವಾಮಿ ಆಕ್ರೋಶ
ಕ.ಪ್ರ.ವಾರ್ತೆ ಸಕಲೇಶಪುರ ಅ.2
ತಾಲೂಕಿನ ರಸ್ತೆಗಳ ಅಧೋಗತಿಗೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಟೀಕಿಸಿದ್ದಾರೆ. ತಾಲೂಕಿನ ರಕ್ಷಿದಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕಳೆದ 5 ವರ್ಷ ಅವಧಿಯ ಅಡಳಿತ ನಡೆಸಿದ ಬಿಜೆಪಿ ಸರ್ಕಾರ ಜಿಲ್ಲೆಯ ಅಭಿವೃದ್ಧಿಯನ್ನು ಸಂಪೂರ್ಣ ನಿರ್ಲಕ್ಷ್ಯಿಸಿದ ಪರಿಣಾಮ ಮಲೆನಾಡ ಭಾಗಗಳನ್ನು ಒಳಗೊಂಡಿರುವ ಸಕಲೇಶಪುರ-ಆಲೂರು ತಾಲೂಕಿನ ರಸ್ತೆಗಳು ಸಂಪೂರ್ಣ ದುಸ್ಥಿತಿಗೆ ಈಡಾಗಿವೆ ಎಂದು ಹೇಳಿದರು.
ಪ್ರಸಕ್ತ ಕಾಂಗ್ರೆಸ್ ಸರ್ಕಾರಕ್ಕೂ ಸಹ ತಾಲೂಕಿನ ರಸ್ತೆ ಅಭಿವೃದ್ಧಿ ಬಗ್ಗೆ ಮನವಿ ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಪ್ರಸ್ತಾವನೆ ಸರ್ಕಾರದಿಂದ ಬಂದಿಲ್ಲ. ಇದಲ್ಲದೆ ಈ ಬಾರಿಯ ಅತಿವೃಷ್ಟಿಗೆ ಸಿಲುಕಿ ಸಾಕಷ್ಟು ರಸ್ತೆ ಹಾಗೂ ಸೇತುವೆಗಳು ಹಾಳಾಗಿದ್ದರೂ ಸರ್ಕಾರ ಇನ್ನೂ ಯಾವುದೇ ಪರಿಹಾರ ಘೋಷಿಸಿಲ್ಲ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರದ ನಮ್ಮ ಗ್ರಾಮ, ನಮ್ಮ ರಸ್ತೆ ಯೋಜನೆಯಡಿ ವಿಧಾನಸಭಾ ಕ್ಷೇತ್ರದ 30 ಕಿ.ಮಿ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಇದರಲ್ಲಿ ಸಕಲೇಶಪುರ ತಾಲೂಕಿನ 18 ಕಿ.ಮೀ. ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಮೆಣಸಮಕ್ಕಿ, ಹಾಲೇಬೇಲೂರು, ರಕ್ಷಿದಿ ಹಾಗೂ ರಾಗಿಗುಂಡಿ ಗ್ರಾಮಗಳ ರಸ್ತೆಗಳನ್ನು 7 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ರಕ್ಷಿದಿ ಗ್ರಾಮದ 1.5 ಕಿ.ಮೀ. ರಸ್ತೆ ಅಭಿವೃದ್ಧಿಯನ್ನು 64 ಲಕ್ಷ ರು. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ ಎಂದರು.
ಕಳೆದ ಬಾರಿ ಕೆ.ಆರ್.ಡಿ.ಸಿ.ಎಲ್. ನಿಂದ ಮಂಜೂರಾಗಿದ್ದ 19 ಸೇತುವೆಗಳಲ್ಲಿ 9 ಸೇತುವೆಗಳ ನಿರ್ಮಾಣ ಮಾಡಲಾಗಿದ್ದು, 10 ಸೇತುವೆಗಳ ಮಂಜೂರಾತಿಯನ್ನು ವಾಪಸ್ ಪಡೆಯಲಾಗಿತ್ತು. ಆದರೆ, ಈ ಬಾರಿ ಕಳೆದ ಬಾರಿ ಹಿಂಪಡೆಯಲಾಗಿದ್ದ 10 ಸೇತುವೆಗಳು ಸೇರಿದಂತೆ ಹೂಸದಾಗಿ 24 ಸೇತುವೆಗಳ ಮಂಜೂರಾತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಗ್ರಾಮದ ಮುಖಂಡ ಲೋಬೋ, ಪ್ರಸಾದ್, ಹಮೀದ್, ಗುತ್ತಿಗೆದಾರ ಅಬೂಬಕ್ಕರ್, ಶಶಿಕುಮಾರ್ ಇತರರು ಇದ್ದರು.